ಆಯುಧ ಪೂಜೆಗೆ ಜೋರಾದ ಖರೀದಿ: ಹೂ, ಹಣ್ಣು ಬೆಲೆ ಗಗನಕ್ಕೆ
ಬೆಂಗಳೂರು ಅಕ್ಟೋಬರ್ 23: ನಾಡಿನೆಲ್ಲೆಡೆ ದಸರಾ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ಆಯುಧ ಪೂಜೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಜನ ಮಾರುಕಟ್ಟೆಗಳತ್ತ ಲಗ್ಗೆ ಇಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಹೂ, ಹಣ್ಣು, ಪೂಜೆಗೆ ಬೇಕಾದ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಹೀಗಾಗಿ ಬೆಂಗಳೂರಿನ ಪ್ರಸಿದ್ಧ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿವೆ.
ಹೂವು, ಹಣ್ಣು, ತೆಂಗಿನಕಾಯಿಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು ದರ ಏರಿಕೆಯ ಬಿಸಿ ತಟ್ಟಿದೆ. ಹಬ್ಬದ ಪ್ರಯುಕ್ತ ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ಹೂವು ಹಣ್ಣುಗಳ ಬೆಲೆ ಗಗನಕ್ಕೇರಿಕೆಯಾಗಿದೆ. ಇದರಿಂದ ಹಬ್ಬದ ಸಂಭ್ರಮದ ಜತೆ ಜತೆಗೆ ಬೆಲೆ ಏರಿಕೆಯ ಬಿಸಿಯನ್ನೂ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವು ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬಂದಿದೆ. ಫ್ಲೈಓವರ್ ಮೇಲೆ ವಾಹನ ನಿಲ್ಲಿಸಿ ಜನ ಕೆಆರ್ ಮಾರುಕಟ್ಟೆಗೆ ಸಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಇನ್ನೂ ನಗರದ ಪ್ರಮುಖ ಮಾರುಕಟ್ಟೆಗಳಾದ ಮಲ್ಲೇಶ್ವರಂ, ಬಸವನಗುಡಿ, ಮಡಿವಾಳ ಮಾರುಕಟ್ಟೆಯಲ್ಲಿ ಜನ ಸಾಗರವೇ ಕಂಡು ಬಂದಿದೆ. ಇದರಿಂದಾಗಿ ಮಾರುಕಟ್ಟೆಗಳು ಇರುವ ಸ್ಥಳಗಳಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಹೂವಿನ ದರ ಹೀಗಿದೆ....
ಕನಕಾಂಬರ- 1,300 ರೂ.
ಮಳ್ಳೆ ಹೂವು- 1000 ರೂ.
ಮಲ್ಲಿಗೆ- 1,200 ರೂ.
ಸೇವಂತಿಗೆ- 300 ರೂ.
ಗುಲಾಬಿ- 200 ರೂ.
ಹಣ್ಣುಗಳ ದರ ಹೀಗಿದೆ...
ಏಲಕ್ಕಿ ಬಾಳೆಹಣ್ಣು- 100 ರೂ.
ದಾಳಿಂಬೆ- 150 ರೂ.
ಸೇಬು- 180 ರೂ.
ಅನಾನಸ್- 70 ರೂ.
ಹೂ ಬೆಲೆ ಏರಿಕೆ: ಗಣೇಶ ಚತುರ್ಥಿ ಬಳಿಕ ಹೂವನ್ನು ಕೇಳುವವರೇ ಇಲ್ಲದಂತಹ ಪರಿಸ್ಥಿತಿ ಇತ್ತು. ನವರಾತ್ರಿ ಆಗಮಿಸುತ್ತಿದ್ದಂತೆ ಹೂವಿನ ಮಾರುಕಟ್ಟೆಯಲ್ಲೇ ಮಾರಿಗೆ ಮಲ್ಲಿಗೆ 1,200 ರೂ. ವರೆಗೂ ತಲುಪಿದೆ. ಮಲ್ಲಿಗೆ- 1,200 ರೂ., ಗುಲಾಬಿ- 200 ರೂ, ಕನಕಾಂಬರ- 1,300 ರೂ., ಮಳ್ಳೆ ಹೂವು- 1000 ರೂಪಾಯಿ ಬೆಲೆ ಇದೆ.
ದುಬಾರಿಯಾದ ಹಣ್ಣು: ಇದು ಹೂವಿನ ಬೆಲೆಯ ಕಥೆಯಾದರೆ ಇನ್ನು ಹಣ್ಣಿನ ಬೆಲೆಗಳು ಆಗಲೇ ಗಗನಕ್ಕೇರಿ ಕೂತಿವೆ. ಸೇಬು- 180 ರೂ. ಗಡಿ ದಾಟಿದೆ. ಏಲಕ್ಕಿ ಬಾಳೆಹಣ್ಣು- 100 ರೂ., ದಾಳಿಂಬೆ 250 ರೂ, ಅನಾನಸ್- 70 ರೂ., ದಾಳಿಂಬೆ- 150 ರೂ., ಪರಂಗಿ 40 ರೂ. ಹೀಗೆ ಹಣ್ಣುಗಳ ಬೆಲೆ ಏರುತ್ತಲೇ ಇದೆ. ನಾಳೆ ವಿಜಯದಶಮಿ ಹಬ್ಬಕ್ಕೆ ಇನ್ನೂ ಬೆಲೆ ಏರಲಿದೆ. ಇನ್ನೊಂದೆಡೆ ಜನರು ಈಗಲೇ ಹಬ್ಬಕ್ಕೆ ಹಣ್ಣು ಖರೀದಿ ಮಾಡುತ್ತಿದ್ದು ಬೆಲೆ ಏರಿಕೆಗೆ ಕಾರಣ ಎನ್ನುತ್ತಾರೆ ಹಣ್ಣು ಅಂಗಡಿ ವರ್ತಕರು.
ಅಕ್ಟೋಬರ್ 15ರಿಂದ ನವರಾತ್ರಿ ಅಚರಣೆ ಆರಂಭವಾಗಿದೆ. ಅಕ್ಟೋಬರ್ 23ರವರೆಗೆ ದುರ್ಗಾ ದೇವಿಯ ನಾನಾ ರೂಪಗಳನ್ನು ಪೂಜೆ ಮಾಡಲಾಗುತ್ತದೆ. ಅಕ್ಟೋಬರ್ 24ರಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಇಂದು ನಾಡಿನೆಲ್ಲೆಡೆ ಆಯುಧ ಪೂಜೆ ಇದ್ದು, ಮನೆ ಹಾಗೂ ಕಚೇರಿಯಲ್ಲಿರುವ ವಾಹನ, ಯತ್ರೋಪಕರಣಗಳಿಗೆ ಪೂಜೆ ಮಾಡಲಾಗುತ್ತದೆ.












Click it and Unblock the Notifications