ಆಟೋ ಮುಷ್ಕರ, ರಸ್ತೆಗಿಳಿದಿವೆ ಹೆಚ್ಚುವರಿ ಬಿಎಂಟಿಸಿ ಬಸ್

ಕೇಂದ್ರ ಸರ್ಕಾರ ಡಿ.31ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಆಟೋ ಗ್ಯಾಸ್ ದರದಲ್ಲಿ 11.50 ರೂ. ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಇದನ್ನು ಖಂಡಿಸಿ ನಾಲ್ಕುದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಚಾಲಕರು, ಭಾನುವಾರ ಮಧ್ಯರಾತ್ರಿ 12 ರಿಂದ ಸೋಮವಾರ ಮಧ್ಯರಾತ್ರಿ 12ರವರೆಗೆ ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ. [ಮಧ್ಯರಾತ್ರಿಯಿಂದ ಮಧ್ಯರಾತ್ರಿ ತನಕ ಆಟೋ ಮುಷ್ಕರ]
ಆಟೋ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 300 ಬಿಎಂಟಿಸಿ ಬಸ್‌ಗಳನ್ನು ಹೆಚ್ಚುವರಿ ಕಲ್ಪಿಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸೋಮವಾರ ಮುಂಜಾನೆ ಕೆಲವು ಆಟೋಗಳು ಸಂಚರಿಸುತ್ತಿದ್ದು, 10 ಗಂಟೆ ನಂತರ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. [ಆಟೋ ಗ್ಯಾಸ್ ದರ ಹೆಚ್ಚಳ]
ವಿವಿಧ ಆಟೋ ಚಾಲಕರ ಸಂಘಟನೆಗಳು ಬೆಳಗ್ಗೆ 10 ಗಂಟೆಗೆ ನಗರದ ಫ್ರೀಡಂಪಾರ್ಕ್ ನಲ್ಲಿ ಬೃಹತ್ ಸಭೆ ಸೇರಲಿದ್ದು, ಅಲ್ಲಿಂದ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ, ಆಟೋ ಗ್ಯಾಸ್ ದರ ಹೆಚ್ಚಳ ನಿರ್ಣಯವನ್ನು ವಾಪಸ್ ಪಡೆಯುವಂತೆ ಮನವಿ ಸಲ್ಲಿಸಲಿವೆ. ಮುಷ್ಕರದಿಂದಾಗಿ ಸೋಮವಾರ ಸಾರ್ವಜನಿಕರು ಆಟೋಗಳಿಗಾಗಿ ಕಾಯುವುದು ಬಿಟ್ಟು, ಬಿಎಂಟಿಸಿ ಬಸ್ ಗಳನ್ನು ಅವಲಂಭಿಸುವುದು ಉತ್ತಮ.
ಎಲ್ಲಾ ಆಟೋ ಚಾಲಕರ ಸಂಘ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಕರ್ನಾಟಕ ರಾಜೀವ್‌ಗಾಂಧಿ ಆಟೋ ಚಾಲಕರ ವೇದಿಕೆ, ಜೈ ಕರ್ನಾಟಕ ಆಟೋ ಘಟಕ, ಕರವೇ ಆಟೋ ಘಟಕ, ಕರ್ನಾಟಕ ಜನಾಶ್ರಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಬೃಹತ್ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಮತ್ತು ಅಖಿಲ ಕರ್ನಾಟಕ ಶ್ರಮಜೀವಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತಿತರ ಸಂಘಟನೆಗಳು ಮುಷ್ಕರ ನಡೆಸುತ್ತಿವೆ.
ಮೈಸೂರಿನಲ್ಲೂ ಪ್ರತಿಭಟನೆ : ಆಟೋ ಗ್ಯಾಸ್ ದರ ಹೆಚ್ಚಳ ಖಂಡಿಸಿ ಮೈಸೂರಿನಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ನಗರ ಸಾರಿಗೆ ವತಿಯಿಂದ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಮೈಸೂರಿನಲ್ಲಿಯೂ ನಾಲ್ಕು ದಿನಗಳಿಂದ ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದರು. ಸೋಮವಾರ ಆಟೋ ಸೇವೆ ಸಂಪೂರ್ಣವಾಗಿ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದಾರೆ.












Click it and Unblock the Notifications