ಆಡಿ ಕಾರು ಅಪಘಾತ ಪ್ರಕರಣ: ಪೊಲೀಸರ ಮಾತು ಕೇಳಿದ್ದರೆ ಏಳು ಮಂದಿಯ ಜೀವ ಉಳಿಯುತ್ತಿತ್ತು!
ಬೆಂಗಳೂರು, ಆ. 31 : ಏಳು ಮಂದಿಯನ್ನು ಬಲಿ ಪಡೆದ 'ಅಡಿ ಕಾರು ಅಪಘಾತ' ಪ್ರಕರಣದಲ್ಲಿ ಕೆಲವು ರೋಚಕ ಸಂಗತಿಗಳು ಹೊರ ಬಿದ್ದಿವೆ. ಜಾಲಿ ರೈಡ್ ಮಾಡುತ್ತಿದ್ದ ಕಾರನ್ನು ಶಾಸಕ ಪ್ರಕಾಶ್ ಅವರ ಪುತ್ರನೇ ಡ್ರೈವ್ ಮಾಡುತ್ತಿದ್ದ ಎಂಬ ಸಂಗತಿ ಹೊರ ಬಿದ್ದಿದೆ. ವಿಪರ್ಯಾಸವೆಂದರೆ ಕೋರಮಂಗಲ ಪಿಜಿ ಬಳಿ ಸ್ನೇಹಿತರನ್ನು ಕರೆದುಕೊಂಡು ತೆರಳಿದ್ದ ಕರುಣಾ ಸಾಗರ್ ತನ್ನ ಕಾರಿನ ರೂಫ್ ಟಾಪ್ ತೆಗೆದಿದ್ದ. ಆತನ ಸ್ನೇಹಿತರು ಅದರಲ್ಲಿ ನಿಂತು ಎಂಜಾಯ್ ಮಾಡುತ್ತಿದ್ದರು. ಕಾರನ್ನು ನಿಲ್ಲಿಸಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಅತಿ ವೇಗ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ.
ಸುಳ್ಳು ಹೇಳಿ ರೈಡ್ ಹೋಗಿದ್ದ ಬಿಂದು: ಇನ್ನು ಕರುಣಾ ಸಾಗರ್ ಪ್ರೀತಿಸುತ್ತಿದ್ದ ಎನ್ನಲಾದ ಬಿಂದು ಎಂಬಾಕೆಯ ಪೋಷಕರು ಮುರುಗೇಶ ಪಾಳ್ಯದಲ್ಲಿದೆ. ತೋಟದ ಮನೆ ಬೆಂಗಳೂರಿನ ಬಾಗಲೂರು ಸಮೀಪವಿದೆ. ಆದರೆ, ತಾನು ಚೆನ್ನೈನಲ್ಲಿದ್ದೇನೆ. ಕೆಲಸ ಸಿಕ್ಕಿದೆ ಎಂದು ಹೇಳಿದ್ದಾರೆ. ಜಾಲಿ ರೈಡ್ ಹೋಗುವ ಮುನ್ನ ಪೋಷಕರ ಜತೆ ಮಾತನಾಡಿ, ಚೆನ್ನೈನಲ್ಲಿ ಆರಾಮಾಗಿದ್ದೇನೆ ಎಂದು ತಿಳಿಸಿದ್ದಾಳೆ. ಹೀಗೆ ಹೇಳಿ ತನ್ನ ಪ್ರಿಯತಮ ಕರುಣಾ ಸಾಗರ್ ಜತೆ ಹೋದವಳು ಮರಳಿ ಮನೆಗೆ ತೆರಳಿದ್ದು ಶವವಾಗಿ. ಬೆಳಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಅಪಘಾತದಲ್ಲಿ ಬಿಂದು ಸಾವನ್ನಪ್ಪಿರುವ ಸಂಗತಿ ಗೊತ್ತಾಗಿದೆ. ಬಿಂದು ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.
ನನ್ನ ಮಗಳು ನಮ್ಮ ಜತೆ ಇರಲಿಲ್ಲ. ಕರುಣಾ ಸಾಗರ್ ನನ್ನು ಪ್ರೀತಿಸುತ್ತಿದ್ದ ವಿಚಾರ ಹೇಳಿದ್ದಳು. ಮದುವೆಯಾದರೆ ಆತನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದಿದ್ದಳು. ನಮ್ಮ ಮನೆಯಲ್ಲಿ ಸಮಸ್ಯೆ ಇದ್ದಿದ್ದರಿಂದ ಆ ವಿಚಾರಕ್ಕೆ ಒತ್ತು ಕೊಟ್ಟಿರಲಿಲ್ಲ. ಸೋಮವಾರ ರಾತ್ರಿ ಕರೆ ಮಾಡಿ, ಅಪ್ಪಾ ನಾನು ಚೆನ್ನೈನಲ್ಲಿದ್ದೇನೆ. ಕೆಲಸ ಸಿಕ್ಕಿದೆ. ಆರಾಮಾಗಿದ್ದೀನಿ ಎಂದು ಪೋನ್ ಮಾಡಿ ತಿಳಿಸಿದ್ದಳು. ನಾವು ನಿಜ ಎಂದು ಸುಮ್ಮನಿದ್ದೆವು. ಬೆಳಗ್ಗೆಯೇ ನಮಗೆ ಅಪಘಾತದಲ್ಲಿ ಮಗಳು ಸಾವನ್ನಪ್ಪಿರುವ ವಿಚಾರ ತಿಳಿಯಿತು ಎಂದು ಮಾಧ್ಯಮಗಳ ಎದುರು ಕಣ್ಣೀರು ಹಾಕಿದರು.

ಕರುಣಾ ಸಾಗರ್ ಏಕೈಕ ಪುತ್ರ : ಹೊಸೂರು ಶಾಸಕ ಪ್ರಕಾಶ್ ಅವರು ಕೆಲವು ತಿಂಗಳ ಹಿಂದಷ್ಟೇ ಪತ್ನಿಯನ್ನು ಕಳೆದುಕೊಂಡಿದ್ದರು. ಇದಕ್ಕೂ ಮೊದಲು ತಂದೆಯನ್ನು ಕಳೆದುಕೊಂಡಿದ್ದರು. ಇದೀಗ ಜಾಲಿ ರೇಡ್ ಅಪಘಾತಕ್ಕೆ ಮಗನನ್ನು ಕಳೆದುಕೊಂಡಿದ್ದಾರೆ. ಕರುಣಾ ಸಾಗರ್ ಮರಣೋತ್ತರ ಪರೀಕ್ಷೆ ಮುಗಿಸಿ ಮೃತ ದೇಹ ಹಸ್ತಾಂತರಿಸಿದಾಗ ಶಾಸಕ ಪ್ರಕಾಶ್ ಗೋಳಾಡುತ್ತಿದ್ದರು. ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
Recommended Video
ಅಪಘಾತ ಪ್ರಕರಣ ಸಂಬಂಧ ಅಧಿಕೃತ ಪ್ರಕಟಣೆ ನೀಡಿರುವ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಕೋಮಂಗಲದ ಎನ್‌ಜಿವಿ ಜಂಕ್ಷನ್ 80 ಫೀಟ್ ರೋಡ್‌ನಲ್ಲಿ ಫೋರಂ ಮಾಲ್ ಜಂಕ್ಷನ್‌ಗೆ ಬರುವ ಕಡೆಯಲ್ಲಿ ಬಿಳಿ ಬಣ್ಣದ ಆಡಿ ಕಾರು ಅಪಘಾತಕ್ಕೆ ಈಡಾಗಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದ ಫಟ್ ಪಾತ್ ಮೇಲೆ ಹತ್ತಿ ನ್ಯಾಷನಲ್ ಬ್ಯಾಂಕ್ ಗೋಡೆಗೆ ಅಪ್ಪಳಿಸಿದೆ. ಈ ವೇಳೆ ಗಂಭೀರ ಗಾಯಗೊಂಡು ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಏಳು ಮಂದಿಯನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಏಳು ಮಂದಿಯೂ ಸಾವನ್ನಪ್ಪಿದ್ದಾರೆ. ಈ ಕುರಿತು ಆಡುಗೋಡಿ ಸಂಚಾರ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡು ಎಸಿಪಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೃತರ ವಿವರ :
1. ಕರುಣಾಸಾಗರ್ , ವಯಸ್ಸು 25 ವರ್ಷ, ಡೆಂಕಟಿಕೋಟೆ, ತಮಿಳುನಾಡು, ಶಾಸಕ ಪ್ರಕಾಶ್ ಅವರ ಪುತ್ರ.
2. ಇಷಿತಾ ಬಿಶ್ವಾಸ್ , ವಯಸ್ಸು 21 ವರ್ಷ, ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗಿ, ಮಹಾರಾಷ್ಟ್ರ ಮೂಲದವರು, ಕೋರಮಂಗಲದ ಪಿಜಿಯಲ್ಲಿ ವಾಸ.
3. ಧನುಷಾ ಎಂ. ವಯಸ್ಸು 29 ವರ್ಷ, ಡೆಂಟಿಸ್ಟ್, ಕೇರಳ ಮೂಲದವರು, ಜೋಲೋ ಸೇಸ್ ಕೋರಮಂಗಲ ಪಿಜಿಯಲ್ಲಿ ವಾಸ.
4. ಬಿಂದು, ವಯಸ್ಸು 28 ವರ್ಷ, ಮುರುಗೇಶ್ ಪಾಳ್ಯ, ಬೆಂಗಳೂರು.
5. ಅಕ್ಷಯ್ ಗೋಯಲ್, ವಯಸ್ಸು, 25 ವರ್ಷ, ಕೇರಳದ ಮಲ್ಲಪ್ಪುರಂ ನಿವಾಸಿ. ಖಾಸಗಿ ಕಂಪನಿಯಲ್ಲಿ ಸೀನಿಯರ್ ಸೇಲ್ಸ ಅಸೋಸಿಯೇಟ್ ಆಗಿ ಕೆಲಸ. ಕೋರಮಂಗಲದ ಪಿಜಿಯಲ್ಲಿ ವಾಸ.
6. ಉತ್ಸವ್, ವಯಸ್ಸು 25 ವರ್ಷ, ಹರಿಯಾಣ ಮೂಲದವ, ಅಡಿಟರ್ ಆಗಿ ಕೆಲಸ ನಿರ್ವಹಣೆ, ಕೋರಮಂಗಲದ ಪಿಜಿಯಲ್ಲಿ ವಾಸ.
7. ರೋಹಿತ್, ವಯಸ್ಸು 23 ವರ್ಷ, ಹುಬ್ಬಳ್ಳಿ ನವನಗರ ನಿವಾಸಿ, ಬ್ಯುಸಿನೆಸ್ ಡೆವಲಪ್ ಮೆಂಟ್ ಆಫೀಸರ್, ಕೋರಮಂಗಲದ ಪಿಜಿಯಲ್ಲಿ ವಾಸ.












Click it and Unblock the Notifications