ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು: ಸಿಎಂ ಸಿದ್ದರಾಮಯ್ಯ ಆಪ್ತರ ಎದುರೇ ಅಶ್ವತ್ಥ್ ನಾರಾಯಣ್ ಹೇಳಿಕೆ
ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಂದಿನ ದಿನಗಳಲ್ಲಿ ಸಿಎಂ ಆಗಬೇಕು ಎಂದು ಹೇಳುವ ಮೂಲಕ ಬಿಜೆಪಿ ನಾಯಕ, ಮಾಜಿ ಸಚಿವ ಅಶ್ವತ್ಥ್ ನಾರಾಯಣ್ ಅಚ್ಚರಿ ಮೂಡಿಸಿದ್ದಾರೆ. ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಒಂದೇ ವೇದಿಕೆ ಹಂಚಿಕೊಂಡಿದ್ದರು.
ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರೂ ಇದ್ದರು. ಈ ಸಂದರ್ಭದಲ್ಲೇ ಅಶ್ವತ್ಥ್ ನಾರಾಯಣ್ ಡಿಕೆಶಿ ಸಿಎಂ ಆಗಬೇಕು ಎಂದಿದ್ದು, ಸಿದ್ದರಾಮಯ್ಯ ಬೆಂಬಲಿಗರಿಗೆ ಶಾಕ್ ನೀಡಿದರು.

ನಗರದ ಶೇಷಾದ್ರಿಪುರದಲ್ಲಿ ಜನರ ಅಹವಾಲು ಕೇಳುವ 'ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ' ಕಾರ್ಯಕ್ರಮದಲ್ಲಿ ಅಶ್ವತ್ಥ ನಾರಾಯಣ ಭಾಗವಹಿಸಿದ್ದರು, ರಾಜಕೀಯ ವಿರೋಧಿಗಳು ಎಂದೇ ಬಿಂಬಿಸಿಕೊಂಡಿದ್ದರು ಡಿಕೆಶಿ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.
ಸಮಾರಂಭದಲ್ಲಿ ಭಾಷಣ ಮಾಡಿದ ಅಶ್ವತ್ಥ್ ನಾರಾಯಣ, 'ನಿಮಗೆ ಒಳ್ಳೆಯದಾಗಲಿ, ಇನ್ನೂ ಉನ್ನತ ಸ್ಥಾನಕ್ಕೆ ಹೋಗುವಂತಾಗಲಿ. ನಾಡಿನ ಜನ ಅವಕಾಶ ಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯೂ ಆಗಲಿ' ಎಂದು ಡಿಕೆ ಶಿವಕುಮಾರ್ ಅವರಿಗೆ ಹಾರೈಸಿದರು.
ಅಂದು ವೇದಿಕೆ ಮೇಲೆ ಜಗಳ, ಇಂದು ಬೆಂಬಲ
ವಿಧಾನಸಭಾ ಚುನಾವಣೆಗೆ ಮುನ್ನ ರಾಮನಗರ ಜಿಲ್ಲಾ ಉಸ್ತುವಾರಿಯಾಗಿದ್ದ ಡಾ. ಅಶ್ವತ್ಥ್ ನಾರಾಯಣ, ಕಾರ್ಯಕ್ರಮವೊಂದರಲ್ಲಿ ಡಿಕೆ ಸಹೋದರರ ವಿರುದ್ಧ ಮಾತನಾಡಿದ್ದರು. ಈ ಸಂದರ್ಭದಲ್ಲೇ ಸಂಸದ ಡಿಕೆ ಸುರೇಶ್ ಮತ್ತು ಅಶ್ವತ್ಥ್ ನಾರಾಯಣ ನಡುವೆ ಜಗಳವಾಗಿತ್ತು. ಆ ಬಳಿಕ ಡಿಕೆ ಸಹೋದರರು ಮತ್ತು ಅಶ್ವತ್ಥ್ ನಾರಾಯಣ ಪ್ರಚಾರದ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಟಾಂಗ್ ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈಗ ಅಶ್ವತ್ಥ್ ನಾರಾಯಣ್ ಬಹಿರಂಗವಾಗಿ ಡಿಕೆಶಿಗೆ ಬೆಂಬಲ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಪಾದಚಾರಿಗಳು, ವಿಶೇಷವಾಗಿ ವೃದ್ಧರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ಮೂಲಕ ಸರ್ಕಾರವು ಉತ್ತಮ ಕೆಲಸ ಮಾಡುತ್ತಿದೆ. ಡಿಕೆ ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಅಶ್ವತ್ಥ ನಾರಾಯಣ ಹೊಗಳಿದರು. ಅಶ್ವತ್ಥ ನಾರಾಯಣ್ ಮತ್ತು ಶಿವಕುಮಾರ್ ಇಬ್ಬರೂ ಪ್ರಬಲ ಒಕ್ಕಲಿಗ ಸಮುದಾಯದಿಂದ ಬಂದವರಾಗಿದ್ದಾರೆ.
ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹಮದ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದ್ದರು. ಶಿವಕುಮಾರ್ ಅವರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ, ಇದು ಪಕ್ಷದಲ್ಲಿ ಹಗ್ಗ ಜಗ್ಗಾಟಕ್ಕೆ ಕೂಡ ಕಾರಣವಾಗಿತ್ತು.












Click it and Unblock the Notifications