Breaking; ಬಂಧಿತ ಶಂಕಿತ ಉಗ್ರ ಜುಬಾ 10 ದಿನ ಪೊಲೀಸ್ ವಶಕ್ಕೆ
ಬೆಂಗಳೂರು ಜುಲೈ 26: ತಮಿಳುನಾಡಿನಲ್ಲಿ ಬಂಧಿಸಿ ಕರೆತಂದಿದ್ದ ಶಂಕಿತ ಉಗ್ರ ಜುಬಾನನ್ನು ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಎನ್‌ಐಎ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಶಂಕಿತ ಬಂಧಿತ ಉಗ್ರ ಅಕ್ತರ್ ಹುಸೇನ್ ಜತೆಗೆ ನಿರಂತರ ಸಂಪರ್ಕ ಹೊಂದಿದ್ದ ಈ ಜುಬಾನನ್ನು ಸಿಸಿಬಿ ಪೊಲೀಸರು ಸೋಮವಾರ ತಮಿಳುನಾಡಿನಲ್ಲಿ ಬಂಧಿಸಿದ್ದರು. ನಂತರ ಬೆಂಗಳೂರಿಗೆ ಕರೆ ತರಲಾಗಿತ್ತು, ಸಿಸಿಬಿ ಪೊಲೀಸರು ಎನ್‌ಐಎ ವಿಶೇಷ ನ್ಯಾಯಾಲಯ ಮುಂದೆ ಹಾಜರುಪಡಿಸಿದ್ದರು.
ನ್ಯಾಯಾಲಯ ಸಿಸಿಬಿ ಪೊಲೀಸರ ಹೇಳಿಕೆ ದಾಖಲಿಸಿಕೊಂಡಿದೆ. ಹೆಚ್ಚಿನ ತನಿಖೆ ಕೈಗೊಳ್ಳಬೇಕು ಎಂಬ ಸಿಸಿಬಿಮನವಿಗೆ ಸ್ಪಂದಿಸಿದ ನ್ಯಾಯಾಲಯ 10 ದಿನ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿತು.

ಗುಂಪು ಕಟ್ಟಿಕೊಂಡು ಉಗ್ರ ಚಟುವಟಿಕೆಯ ಶಂಕೆ; ಬಂಧಿತ ಉಗ್ರರು 25 ಜನರ ಗುಂಪು ಮಾಡಿಕೊಂಡಿದ್ದು, ಜುಬಾ ಕೂಡಾ ಆ ಗುಂಪಿನ ಸದಸ್ಯ ಎಂಬ ಮಾಹಿತಿ ಇದೆ. ಇಸ್ಲಾಮಿಕ್ ರಾಷ್ಟ್ರದ ಬಗ್ಗೆ ಎಲ್ಲ ಸದಸ್ಯರು ಒಲವು ಹೊಂದಿದ್ದಾರೆ. ಇವರೊಂದಿಗೆ ಹಲವು ಸಂಪರ್ಕದಲ್ಲಿರುವ ಶಂಕೆ ಇದೆ. ಅವರ ಮೊಬೈಲ್ ಗಳನ್ನ ರಿಟ್ರೀವ್ ಮಾಡಿ ಮಾಹಿತಿ ಪರಿಶೀಲಿಸಬೇಕಿದೆ. ಗುಂಪಿನ ಇತರ ಸದಸ್ಯರ ಉಗ್ರ ಚಟುವಟಿಕೆ ಕುರಿತು ಪತ್ತೆ ಮಾಡಬೇಕಿದೆ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದರು.
ಸಿಸಿಬಿ ಪೊಲೀಸರು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಮಾಡಿಕೊಂಡ ಮನವಿಗೆ ಒಪ್ಪಿದ ಕೋರ್ಟ್ ಹತ್ತು ದಿನ ಅಂದರೆ ಆಗಸ್ಟ್ 5ರವರೆಗೆ ಶಂಕಿತ ಉಗ್ರನನ್ನು ಪೊಲೀಸರ ವಶಕ್ಕೆ ನೀಡಿತು.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಮತ್ತೊಬ್ಬ ಶಂಕಿತ ಉಗ್ರ ಅಕ್ತರ್ ಹುಸೇನ್ ನನ್ನು ಬಂಧಿಸಿದ್ದರು. ಅದಲ್ಲದೇ ಆತನ ಸಹೋದರನನ್ನು ಸಹ ವಿಚಾರಣೆ ಒಳಪಡಿಸಿದ್ದಾರೆ. ಈ ಅಕ್ತರ್ ನೀಡಿದ ಮಾಹಿತಿ ಮೇರೆಗೆ ಜುಬಾ ನನ್ನು ಸೋಮವಾರ ಸಂಜೆ ತಮಿಳುನಾಡಿನಲ್ಲಿ ಬಂಧಿಸಲಾಗಿತ್ತು. ಈತ ಅಕ್ತರ್ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಂಧಿತ ಶಂಕಿತ ಉಗ್ರ ಜುಬಾ ಅಲ್‌ಖೈದಾ ಸಂಘಟನೆ ಜತೆಗೆ ನಂಟು ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅಕ್ತರ್ ನೊಂದಿಗೆ ಸಂಪರ್ಕದಲ್ಲಿದ್ದ ಜುಬಾ ಎಂಬ ಉಗ್ರನನ್ನು ಕೇಂದ್ರ ತನಿಖಾ ಸಂಸ್ಥೆಗಳ ಸಹಕಾರದಲ್ಲಿ ಸಿಸಿಬಿ ಅಧಿಕಾರಿಗಳ ನಾಲ್ಕು ತಂಡ ತಮಿಳುನಾಡಿನಲ್ಲಿ ಬಂಧಿಸಿದೆ.
ಎನ್‌ಐಎ ವಿಶೇಷ ನ್ಯಾಯಾಲಯ ಅಕ್ತರ್‌ನನ್ನು ಹತ್ತು ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಅಕ್ತರ್ ಬಂಧನ ವೇಳೆ ಸಾಕಷ್ಟು ವಿದ್ಯುತ್ ಉಪಕರಣ ಪತ್ತೆಯಾಗಿವೆ. ಆತ ಅಸ್ಸಾಂ, ಚೆನ್ನೈಮುಂತಾದ ಕಡೆ ನಂಟು ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ಉಗ್ರ ಚಟುವಟಿಕೆಗಳ ಮಾಹಿತಿ ಪತ್ತೆಗೆ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಅಧಿಕಾರಿಗಳು ಕೋರ್ಟ್ ಮುಂದೆ ಮನವಿ ಮಾಡಿದ್ದರು.












Click it and Unblock the Notifications