ಆ್ಯಸಿಡ್ ಎರಚಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹಲ್ಲೆ
ಆನೇಕಲ್, ಜನವರಿ 4: ಬೆಂಗಳೂರಲ್ಲಿ ದಿನೇ ದಿನೇ ಆ್ಯಸಿಡ್ ದಾಳಿ ಹೆಚ್ಚುತ್ತಿದೆ. ವ್ಯಕ್ತಿಯೊಬ್ಬನ ಮೇಲೆ ಆ್ಯಸಿಡ್ ಎರಚಿ, ಹಲ್ಲೆ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಎಚ್.ಹೊಸಳ್ಳಿಯಲ್ಲಿ ನಡೆದಿದೆ.
ಜ್ಯೋತಪ್ಪ(51) ತೀವ್ರವಾಗಿ ಗಾಯಗೊಂಡಿದ್ದಾರೆ. ಬಳ್ಳಾರಿ ಮೂಲದ ರದಿಯಾ ಎಂಬುವವನಿಗೆ ಜ್ಯೋತಪ್ಪ ಅವರು 35 ಸಾವಿರ ರೂ ಸಾಲ ನೀಡಿದ್ದರು. ಆತ ಹಣ ಕೊಡುವುದಾಗಿ ಕರೆದಿದ್ದರಿಂದ ಬೈಕಿನಲ್ಲಿ ಹೊರಟು ಶ್ರೀರಾಮಪುರ ತಿರುವಿನಲ್ಲಿದ್ದಾಗ ಇದ್ದಕ್ಕಿಂದ್ದಂತೆ ಬೈಕಿನಲ್ಲಿ ಬಂದ ಇಬ್ಬರು ಜ್ಯೋತಪ್ಪ ಅವರ ಮೇಲೆ ಆ್ಯಸಿಡ್ ಎರಚಿದ್ದಾರೆ.
ಇನ್ನೊಬ್ಬ ಪೆಟ್ರೋಲ್ ಸುರಿದಿದ್ದಾನೆ. ಬೈಕಿನಿಂದ ಜ್ಯೋತಪ್ಪ ಕೆಳಗೆ ಬಿದ್ದಾಗ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾರೆ. ಬಳಿಕ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ದಾರಿ ಹೋಕರು ಜ್ಯೋತಪ್ಪ ಅವರನ್ನು ರಕ್ಷಿಸಿದ್ದಾರೆ.

ಇತ್ತೀಚಿಗಷ್ಟೇ ಮಹಿಳಾ ಬಸ್ ಕಂಡಕ್ಟರ್ ಮೇಲೆ ಆಕೆಯ ಮೈದುನ ಆ್ಯಸಿಡ್ ಎರಚಿ ಹಲ್ಲೆ ನಡೆಸಿದ್ದ. ಡಿಸೆಂಬರ್ 19ರಂದು ಮುಂಜಾನೆ 5.30ರ ವೇಳೆ ಬಿಎಂಟಿಸಿ ಕಂಡಕ್ಟರ್ ಇಂದಿರಾಬಾಯಿ ಅವರು ಕೆಲಸಕ್ಕೆ ಹೋಗಲು ಬಾಗಲಗುಂಟೆಯ ಬಸ್ ನಿಲ್ದಾಣಕ್ಕೆ ಮನೆಯಿಂದ ಎಂದಿನಂತೆ ನಡೆದುಕೊಂಡು ಬಂದಿದ್ದರು. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದರು.












Click it and Unblock the Notifications