Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಆತಂಕ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಮತ್ತೊಂದು ಆತಂಕ ಮೂಡಿಸುವ ಘಟನೆ ನಡೆದಿದೆ. ಒಂದಿಲ್ಲೊಂದು ಕಾರಣಕ್ಕೆ ಈ ಎಕ್ಸ್‌ಪ್ರೆಸ್‌ವೇ ಆಗಾಗ ಸುದ್ದಿಯಾಗುತ್ತಲೇ ಇದೆ. ಇತ್ತೀಚೆಗೆ ಈ ಹೆದ್ದಾರಿಯಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಇದೀಗ ಪ್ರಯಾಣಿಕರೊಬ್ಬರು ಕಾರಿನಲ್ಲಿ ಸಂಚರಿಸುವಾಗ ದೊಡ್ಡ ಆತಂಕ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ.
ಪ್ರಯಾಣಿಕರೊಬ್ಬರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುತ್ತಿರುವಾಗ ಮರದ ದಿಮ್ಮಿಯೊಂದು ರಸ್ತೆಯಲ್ಲೇ ಇರುವುದು ಕಂಡುಬಂದಿದೆ. ದಿಮ್ಮಿ ಕಂಡ ಕೂಡಲೇ ಅಲರ್ಟ್ ಆದ ಪ್ರಯಾಣಿಕರು ಕೂಡಲೇ ಕಾರನ್ನು ಪಕ್ಕಕ್ಕೆ ಎಳೆದಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಈ ವಿಡಿಯೋ ಕಾರಿನಲ್ಲಿ ಡ್ಯಾಶ್‌ಕ್ಯಾಮ್‌ನಲ್ಲಿ ರೆಕಾರ್ಡ್ ಆಗಿದೆ.

ಇನ್ನು ರಸ್ತೆಯಲ್ಲಿ ಸುಮ್ಮನೆ ಬಿದ್ದಿರುವುದಲ್ಲ. ರಾತ್ರಿ ಸಮಯದಲ್ಲಿ ಪ್ರಯಾಣಿಕರಿಗೆ ತೊಂದರೆ ಮಾಡಲು ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸವಿದು ಎಂದು ಪ್ರಯಾಣಿಕರೊಬ್ಬರು ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಬಹಳ ಎಚ್ಚರದಿಂದ ಇರಬೇಕು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಹಂಚಿಕೊಂಡಿರುವ ಕಾರು ಪ್ರಯಾಣಿಕ, ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಕರಿಗೆ ಎಚ್ಚರಿಕೆ. ಈ ಘಟನೆ ಜನವರಿ 20ರಂದು ನಡೆದಿದ್ದು, ಇದು ಕೆಂಗೇರಿ ಬಳಿ ಕಾರು ಉರುಳಿಸಲು ನಡೆದಿರುವ ಯತ್ನ ಎಂದಿದ್ದಾರೆ. ದುಷ್ಕರ್ಮಿಯೊಬ್ಬ ಮರದ ದಿಮ್ಮಿ ಹಿಡಿದು ಅದನ್ನು ರಸ್ತೆಯಲ್ಲಿ ಇರಿಸಿದ್ದ. ಡಿವೈಡರ್‌ನ ಸಮೀಪವಿರುವ ಲೇನ್ ಬಳಿ ಈ ದಿಮ್ಮಿ ಇಡಲಾಗಿತ್ತು. ಸ್ವಲ್ಪ ಯಾಮಾರಿದ್ದರೂ ಅನಾಹುತ ನಡೆಯುತ್ತಿತ್ತು ಎಂದಿದ್ದಾರೆ.
ಈ ರೀತಿ ದಿಮ್ಮಿಯನ್ನು ಇಟ್ಟು ವಾಹನಗಳ ಅಪಘಾತ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರಬಹುದು. ಅಪಘಾತವಾದ ನಂತರ ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಳ್ಳುವ ಗುರಿ ಕೂಡ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಡ್ಯಾಶ್‌ಕ್ಯಾಮ್‌ನಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ. ಈ ಘಟನೆಯ ಬಗ್ಗೆ ಪೊಲೀಸರು ಕೂಡಲೇ ಪರಿಶೀಲನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಮರದ ದಿಮ್ಮಿಯನ್ನು ಡಿವೈನಿಂದ ರಸ್ತೆಯ ಒಳಭಾಗದವರೆಗೆ ಇರಿಸಲಾಗಿತ್ತು. ಚಾಲಕನ ಜಾಗರೂಕತೆಯಿಂದಾಗಿ ತಕ್ಷಣವೇ ಕಾರನ್ನು ಪಕ್ಕಕ್ಕೆ ತಿರುವಿಸಿದ್ದಾರೆ. ಒಂದು ವೇಳೆ ಅದನ್ನು ನೋಡದೆ ಕಾರು ಚಲಾಯಿಸಿದ್ದರೆ ಅಪಘಾತವಾಗುವ ಸಾಧ್ಯತೆ ಇತ್ತು. ದಿಮ್ಮಿ ಮೇಲೆ ಕಾರು ಹತ್ತಿದ್ದರೆ ಪಲ್ಟಿಯಾಗುವ ಸಾಧ್ಯತೆಯೂ ಇತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರು ಚಾಲಕ ಈ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಕೂಡಲೇ ಈ ಕೃತ್ಯ ಮಾಡಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದು ನಂಬಲು ಸಾಧ್ಯವಾಗುತ್ತಿಲ್ಲ, ಈ ಕೃತ್ಯ ನಿಜಕ್ಕೂ ಅಪಾಯಕಾರಿ ಮತ್ತು ಭಯಾನಕವಾಗಿದೆ. ಕಿಡಿಗೇಡಿಗಳು ಬೆಲೆಬಾಳುವ ವಸ್ತುಗಳಿಗಾಗಿ ಜನರ ಪ್ರಾಣ ತೆಗೆಯುವುದಕ್ಕೂ ಹೇಸುವುದಿಲ್ಲ ಎಂದು ನೆಟ್ಟಿಗರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ಕಂಡು ಜನ ಬೆಚ್ಚಿಬಿದ್ದಿದ್ದಾರೆ.












Click it and Unblock the Notifications