ಬೆಂಗಳೂರು ಬಿಟ್ಟು ಆಂಧ್ರಕ್ಕೆ ಬನ್ನಿ: ಏರೋಸ್ಪೇಸ್ ಉದ್ಯಮಿಗಳಿಗೆ ಸಚಿವ ಓಪನ್ ಆಫರ್
ಐಟಿ ಸಿಟಿ, ಸಿಲಿಕಾನ್ ಸಿಟಿ ಎಂದೇ ಜಗತ್ತಿನಲ್ಲೇ ಗುರುತಿಸಿಕೊಂಡಿರುವ ಬೆಂಗಳೂರು ಹಾಗೂ ಕರ್ನಾಟಕದ ಹೆಮ್ಮೆಯನ್ನು ಕಸಿಯಲು ಅಕ್ಕಪಕ್ಕದ ರಾಜ್ಯಗಳು ಮೊದಲಿನಿಂದಲೂ ಯತ್ನಿಸುತ್ತಿವೆ. ಈ ಹಿಂದೆ ಬೆಂಗಳೂರಿನಲ್ಲಿ ಭಾರೀ ಮಳೆಯಾದಾಗ ಐಟಿ ಕಂಪನಿಗಳೆಲ್ಲ ಬೆಂಗಳೂರು ಬಿಟ್ಟು ಹೈದಾರಾಬಾದ್‌ಗೆ ಬನ್ನಿ ಎಂದು ಅಂದಿನ ತೆಲಂಗಾಣ ಸಚಿವ ಕೆಟಿಆರ್ ಓಪನ್ ಆಫರ್ ಕೊಟ್ಟಿದ್ದರು. ಇದೀಗ ಬೆಂಗಳೂರಿನ ದೇವನಹಳ್ಳಿ ಬಳಿ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಭೂಮಿ ಕೊಡಲು ರೈತರು ಅಡ್ಡಿಪಡಿಸಿರುವುದರಿಂದ ಭೂಸ್ವಾಧೀನವನ್ನು ರಾಜ್ಯ ಸರ್ಕಾರವೇ ಕೈಬಿಟ್ಟಿದೆ. ಈಗ ಇದನ್ನೇ ಲಾಭ ಮಾಡಿಕೊಂಡಿರುವ ಪಕ್ಕದ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಉದ್ಯಮಿಗಳಿಗೆ ಬಲೆ ಬೀಸಿದ್ದಾರೆ. ಬೆಂಗಳೂರಿನಲ್ಲಿ ಜಾಗ ಸಿಗದೇ ಇದ್ದರೇನು? ನಾವು ಆಂಧ್ರದಲ್ಲಿ ಕೊಡ್ತೀವಿ ಬನ್ನಿ ಎಂದು ಓಪನ್ ಆಫರ್ ಕೊಟ್ಟಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿರುವ ಎಚ್‌ಎಎಲ್ ಉತ್ಪಾದನಾ ಘಟಕವನ್ನು ಕೂಡ ಆಂಧ್ರಕ್ಕೆ ಸ್ಥಳಾಂತರಿಸುವ ಬಗ್ಗೆ ಉತ್ಸಾಹ ತೋರಿತ್ತು. ಇದಕ್ಕೆ ಎಲ್ಲಡೆ ವಿರೋಧದ ಕೂಗು ಕೇಳಿದ್ದರಿಂದ ಅದು ತಣ್ಣಗಾಗಿತ್ತು. ಇನ್ನು ಮಂಗಳವಾರವಷ್ಟೇ ರೈತರ ವಿರೋಧದ ಕಾರಣಕ್ಕೆ ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಏರೋಸ್ಪೇಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ರದ್ದು ಮಾಡಿರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಘೋಷಿಸಿದ್ದರು. ಇದನ್ನು ರೈತರು ಸಂಭ್ರಮಿಸುತ್ತಿರುವಾಗಲೇ ಆಂಧ್ರ ಸಚಿವನ ಕಣ್ಣು ಕರ್ನಾಟಕದ ಉದ್ಯಮಗಳ ಮೇಲೆ ಬಿದ್ದಿದೆ. ಈ ಬಗ್ಗೆ ಸಚಿವ ನಾರಾ ಲೋಕೇಶ್ ಎಕ್ಸ್‌ನಲ್ಲಿ ಬಹಿರಂಗವಾಗಿ ಉದ್ಯಮಿಗಳನ್ನು ಆಹ್ವಾನಿದ್ದಾರೆ.

ನಿಮಗೆ ಎಲ್ಲ ಸೌಲಭ್ಯ ಕೊಡ್ತೀವಿ: ನಾರಾ
"ಆತ್ಮೀಯ ಏರೋಸ್ಪೇಸ್ ಉದ್ಯಮ, ಬೆಂಗಳೂರಿನಲ್ಲಿ ನಡೆದ ವಿಚಾರದ ಬಗ್ಗೆ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಐಡಿಯಾ ಇದೆ. ನೀವು ಆಂಧ್ರಪ್ರದೇಶವನ್ನು ಏಕೆ ನೋಡಬಾರದು? ಬೆಂಗಳೂರಿನ ಹೊರಗೆ ಅತ್ಯುತ್ತಮ ಪ್ರೋತ್ಸಾಹ ಧನ ಮತ್ತು 8,000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು ನಾವು ನಿಮಗಾಗಿ ಹೊಂದಿದ್ದೇವೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು, ಚರ್ಚಿಸಲು ಆಶಿಸುತ್ತೇವೆ" ಎಂದು ಆಹ್ವಾನ ನೀಡಿದ್ದಾರೆ.
1,777 ಎಕರೆಯಷ್ಟು ಜಮೀನು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸ್ವಾಧೀನಪಡಿಸಿಕೊಂಡು ಅಲ್ಲಿ ಏರೋಸ್ಪೇಸ್ ಪ್ರಾರಂಭಿಸಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಆದರೆ ಇದನ್ನು ವಿರೋಧಿಸಿ ರೈತರು, ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು. ಯಾವ ಕಾರಣಕ್ಕೂ ಭೂಮಿ ಕೊಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಸರ್ಕಾರದ ವಿರುದ್ಧ ದಂಗೆ ಎದ್ದ ಕಾರಣ ಕೊನೆಗೂ ಮಣಿದ ಸರ್ಕಾರ, ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಆಂಧ್ರಪ್ರದೇಶದ ಸಚಿವ ತನ್ನ ಅವಕಾಶವಾದಿತನವನ್ನು ಪ್ರದರ್ಶಿಸಿದ್ದಾರೆ. ಇಲ್ಲಿ ರೈತರ ವಿರೋಧ, ಸರ್ಕಾರದ ನಿರ್ಧಾರವನ್ನೇ ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳಲು ಹೊರಟಿದ್ದಾರೆ.
ಬೆಂಗಳೂರು ಆಂಧ್ರಪ್ರದೇಶದ ಗಡಿಗೆ ಸಮೀಪದಲ್ಲಿರುವುದಿರಂದ ಈ ಭಾಗದಲ್ಲೇ ಏರೋಸ್ಪೇಸ್ ಉದ್ಯಮಗಳಿಗೆ ನೆಲೆ ನೀಡುವ ಮೂಲಕ ಲಾಭ ಮಾಡಿಕೊಳ್ಳಲು ಆಂಧ್ರ ಕುತಂತ್ರ ಹೆಣೆದಿದೆ. ಈ ಆಹ್ವಾನವನ್ನು ಉದ್ಯಮಿಗಳು ಸ್ವೀಕರಿಸುತ್ತಾರಾ? ಅಥವಾ ಕರ್ನಾಟಕದಲ್ಲೇ ಬೇರೆ ಕಡೆ ಭೂಮಿ ಪಡೆಯುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರ ಇದನ್ನು ಮನಗಂಡು ಬೆಂಗಳೂರಿಗೆ ಸಮೀಪವೇ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಬೇರೊಂದು ಜಾಗ ನೀಡುವ ಚಿಂತನೆಯಲ್ಲಿದೆಯೇ ಎಂಬುದು ಮುಂದೆ ತಿಳಿಯಲಿದೆ. ಇಲ್ಲದಿದ್ದರೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ಆಂಧ್ರ ಸರ್ಕಾರ ಹೆಜ್ಜೆ ಇಡಲಿದೆ.












Click it and Unblock the Notifications