Airport Metro Blue Line: ನೂತನ ಹೆಬ್ಬಾಳ-ಏರ್ ಪೋರ್ಟ್ ಲೈನ್ 2027ಕ್ಕೆ ಪೂರ್ಣ, ORR ಲೈನ್ ಓಪನ್ ಯಾವಾಗ?
ಬೆಂಗಳೂರು: ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ ಮೆಟ್ರೋ ನೀಲಿ ಮಾರ್ಗವು (2A) ಈಗಾಗಲೇ ವಾಣಿಜ್ಯ ಕಾರ್ಯಾಚರಣೆ ಆರಂಭಿಸಬೇಕಿತ್ತು. ಆದರೆ ವಿಳಂಬವಾಗುತ್ತಲೇ ಇದ್ದು, ಇದೀಗ ಹೆಬ್ಬಾಳದಿಂದ ಏರ್‍ಪೋರ್ಟ್‌ವರೆಗಿನ ನೀಲಿ ಮಾರ್ಗದ (2B) 27 ಕಿಲೋ ಮೀಟರ್ ಲೈನ್ ಅನ್ನು ಮುಂದಿನ ವಷ್ 2027ರ ಡಿಸೆಂಬರ್ ಹೊತ್ತಿಗೆ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಮೆಟ್ರೋ ಕಾಮಗಾರಿ ವಿಳಂಬವಾಗುತ್ತಲೇ ಇದ್ದು, ಇತ್ತ ಜನ ಸಂಖ್ಯೆ, ವಾಹನಗಳ ಸಂಖ್ಯೆಯ ತೀವ್ರ ಹೆಚ್ಚಳದಿಂದ ನಗರದಲ್ಲಿ ಟ್ರಾಫಿಕ್ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.
ಸಿಲ್ಕ್ ಬೋರ್ಡ್-ಬೆಂಗಳೂರು ವಿಮಾನ ನಿಲ್ದಾಣವರೆಗೆ (58.19km) ಉದ್ದವಿದೆ. ಇದರಲ್ಲಿ ಸಿಲ್ಕ್‌ಬೋರ್ಡ್-ಕೆ.ಆರ್. ಪುರಂವರೆಗೆ 27 ಕಿಮೀ ಉದ್ದವಿದ್ದು, ಈ ಮಾರ್ಗದಲ್ಲಿ ವಯಾಡಕ್ಟ್ ಜೋಡಣೆ ಸೇರಿದಂತೆ ಇನ್ನಿತರ ಕಾಮಗಾರಿಗಳು ಬಾಕಿ ಉಳಿದಿವೆ. ಹೀಗಾಗಿ 2026ರ ಮಾರ್ಚ್‌ನಲ್ಲಿ ತೆರೆಯಬೇಕಿದ್ದ ಮಾರ್ಗದಲ್ಲಿ ಇನ್ನೂವರೆಗೆ ರೈಲುಗಳ ಪ್ರಾಯೋಗಿಕ ಸಂಚಾರವೇ ಆರಂಭವಾಗಿಲ್ಲ. ಈ ಮಾರ್ಗವು 2026ರ ಡಿಸೆಂಬರ್ ವೇಳೆಗು ಪ್ರಯಾಣಿಕರಿಗೆ ಮುಕ್ತವಾಗುವುದು ಅನುಮಾನ ಎನ್ನಲಾಗಿದೆ.

2027 ಅಂತ್ಯಕ್ಕೆ ಹೆಬ್ಬಾಳ-ಏರ್ ಪೋರ್ಟ್ ಮಾರ್ಗ ಓಪನ್?
ಕೆ.ಆರ್.ಪುರಂ ನಿಂದ ದೇವನಹಳ್ಳಿ ಏರ್‍ಪೋರ್ಟ್ ವರೆಗಿನ ನೀಲಿ ಮಾರ್ಗವು 38.44ಕಿಮೀ ಉದ್ದವಿದೆ. ಈ ಲೈನ್‌ನಲ್ಲಿ ಬರುವ ಹೆಬ್ಬಾಳ ನಿಲ್ದಾಣದಿಂದ-ಏರ್ ಪೋರ್ಟ್‌ವರೆಗಿನ (27.4 ಕಿಮೀ) ಕಾಮಗಾರಿ ಶೇ.72ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಿತ್ಯ ಏರ್ ಪೋರ್ಟ್‌ಗೆ ಸಾಕಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಕೆಲವೊಮ್ಮೆ ಗಂಟೆಗಟ್ಟಲೇ ಸಮಯ ಹಿಡಿಯುತ್ತದೆ. ಹೀಗಾಗಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ 2027ರ ಅಂತ್ಯಕ್ಕೆ ಲೋಕಾರ್ಪಣೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿವಿಧ ಕಾಮಗಾರಿ ಬಹುತೇಕ ಪೂರ್ಣ: ಏರ್‍ಪೋರ್ಟ್ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಹೆಬ್ಬಾಳ-ಏರ್ ಪೋರ್ಟ್ ನೀಲಿ ಮಾರ್ಗದಲ್ಲಿ ಹೆಚ್ಚಿನ ಕಿರಿ ಕಿರಿ ಇಲ್ಲದ ಕಾರಣಕ್ಕಾಗಿ ವಯಾಡಕ್ಟ್ ನಿರ್ಮಾಣ, ರೈಲ್ವೆ ಕ್ರಾಸಿಂಗ್ ಮತ್ತಿತರ ಕೆಲಸಗಳು ಪೂರ್ಣಗೊಂಡಿವೆ. ಯಲಹಂಕ ಬಳಿಯ ಕಾಮಗಾರಿಯೊಂದಕ್ಕೆ ಎರಡು ತಿಂಗಳು ಹಿಡಿಬಹುದು. ಇದು ಒಳಗೊಂಡಂತೆ ಸಂಪೂರ್ಣ ಸಿವಿಲ್ ಕಾಮಗಾರಿಯು 2027 ಮಧ್ಯ ಭಾಗಕ್ಕೆ (ಜೂನ್) ಪೂರ್ಣಗೊಳ್ಳಲಿದೆ. ಅದಾಗುತ್ತಿದ್ದಂತೆ ರೈಲುಗಳ ಪ್ರಾಯೋಗಿಕ ಸಂಚಾರ, ಸಿಗ್ನಲಿಂಗ್ ತಪಾಸಣೆ ಇನ್ನಿತರ ಪರೀಕ್ಷೆಗಳು ಅಂದುಕೊಂಡಂತಾದರೆ ಆ ವರ್ಷ ಡಿಸೆಂಬರ್‍ಗೆ 27 ಕಿಮೀ ಲಭ್ಯವಾಗಲಿದ್ದು, ಏರ್‍ಪೋರ್ಟ್ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಗಲಿದೆ.
ಇನ್ನೂ ಹೆಬ್ಬಾಳ-ಸಿಲ್ಕ್‌ಬೋರ್ಡ್ ಮಾರ್ಗದಲ್ಲಿ ನಿರ್ಮಾಣ ಅಷ್ಟು ಸುಲಭವಾಗರದೇ ಸಾಕಷ್ಟು ಸವಾಲುಗಳಿಂದ ಕೂಡಿವೆ. ಕಾರಣ ಭವಿಷ್ಯದಲ್ಲಿ ಕಿತ್ತಳೆ ಮೆಟ್ರೋ ಮಾರ್ಗ, ಕೆಂಪು ಮೆಟ್ರೋ ಮಾರ್ಗ, ಬಿಎಂಟಿಸಿ, ಉಪನಗರ ರೈಲು ಮಾರ್ಗ ಸಂಧಿಸಲಿವೆ. ಹೀಗಾಗಿ ಈ ಭಾಗದ ಮೆಟ್ರೋ ಒಂದು ಕಿಲೋ ಂಮೀಟರ್ ನಿರ್ಮಾಣ ಅತ್ಯಂತ ಸವಾಲಿನಿಂದ ಕೂಡಿದೆ.
ನೀಲಿ ಮಾರ್ಗಕ್ಕೆ ಮೆಟ್ರೋ ಆಗಮನ, ಟ್ರಯಲ್ ರನ್ ಯಾವಾಗ?
ಈ ಹಿಂದೆ ಆರ್.ವಿ.ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ ನಿರ್ಮಾಣವಾಗಿ ವರ್ಷ ಕಳೆದರು ಡ್ರೈವರ್‌ಲೆಸ್ ರೈಲುಗಳು ಪೂರೈಕೆ ಆಗಿರಲಿಲ್ಲ. ಇದಕ್ಕೆ ತದ್ವಿರುದ್ಧ ಎಂಬಂತೆ ನೀಲಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುವುದು ಬಾಕಿ ಇರುವಾಗಲೇ ನೀಲಿ ಮೆಟ್ರೋ ರೈಲುಗಳು ನಗರಕ್ಕೆ ಆಗಮಿಸಿವೆ. ಈ ರೈಲುಗಳನ್ನು ಕೆ.ಆರ್.ಪುರಂ-ಸಿಲ್ಕ್‌ಬೋರ್ಡ್ ನೀಲಿ ಮಾರ್ಗದಲ್ಲಿ ಇದೇ ಅಕ್ಟೋಬರ್‌ಗೆ ಪ್ರಾಯೋಗಿಕ ಸಂಚಾರ ನಡೆಸುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಹಿಂದಿನ ಸಭೆಯಲ್ಲಿ ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂವರೆಗೆ ಯಾವುದೇ ಮಾಹಿತಿ ಬೆಂಗಳೂರು ಮೆಟ್ರೋ ರೈಲು ನಿಗಮ ನೀಡಿಲ್ಲ.
58 ಕಿಮೀ ನೀಲಿ ಮಾರ್ಗದ ರೈಲು ನಿಲ್ದಾಣಗಳು ಯಾವುವು?
ಸಿಲ್ಕ್ ಬೋರ್ಡ್-ಕೆ.ಆರ್.ಪುರಂ (2A) ಮಾರ್ಗ: ಎಚ್‌ಎಸ್‌ಆರ್ ಲೇಔಟ್, ಆಗರ, ಬೆಳ್ಳಂದೂರು, ಇಬ್ಬಲೂರು, ಕಾಡುಬೀಸನಹಳ್ಳಿ, ಮಾರತ್ತಹಳ್ಳಿ, ದೊಡ್ಡನೆಕುಂದಿ, ಮಹದೇವಪುರ, ಕೃಷ್ಣರಾಜಪುರ ನಿಲ್ದಾಣ.
ಕೆ.ಆರ್.ಪುರಂ-ಏರ್ ಪೋರ್ಟ್ ಮಾರ್ಗ (2B) ಕಸ್ತೂರಿ ನಗರ, ಹೊರಮಾವು, ಕಲ್ಯಾಣ ನಗರ, ಹೆಣ್ಣೂರು, ನಾಗವಾರ ಮತ್ತು ಹೆಬ್ಬಾಳ ಪ್ರದೇಶಗಳ ಮೂಲಕ ಸಾಗುತ್ತದೆ. ಬಳಿಕ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಸಮಾನಾಂತರವಾಗಿ ಕೋಡಿಗೇಹಳ್ಳಿ, ಜಕ್ಕೂರು, ಯಲಹಂಕ, ದೊಡ್ಡಜಾಲ ಪ್ರದೇಶ ಮೂಲಕ ಸಾಗುತ್ತದೆ. ಒಟ್ಟಾರೆ ನೀಲಿ ಮಾರ್ಗದಲ್ಲಿ 29 ನಿಲ್ದಾಣಗಳು ತಲೆ ಎತ್ತಲಿವೆ.


Click it and Unblock the Notifications
