BMTC: ಬಸ್ ಪ್ರಯಾಣ ದರ ಪರಿಷ್ಕರಣೆ, ದುಬಾರಿಯಾದ ವಾಯುವಜ್ರ ಬಸ್
ಬೆಂಗಳೂರು, ಜನವರಿ 06: ಕರ್ನಾಟಕ ಸರ್ಕಾರ ನಾಲ್ಕು ಸಾರಿಗೆ ನಿಗಮಗಳ ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿದೆ. ಜನವರಿ 5ರಿಂದಲೇ ನೂತನ ದರ ಜಾರಿಗೆ ಬಂದಿದೆ. ಇದರಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣದರವೂ ಹೆಚ್ಚಾಗಿದ್ದು, ಇದರಿಂದಾಗಿ ಏರ್‌ಪೋರ್ಟ್‌ಗೆ ಸಂಚಾರ ನಡೆಸುವ ವಾಯುವಜ್ರ ಬಸ್‌ಗಳ ಪ್ರಯಾಣ ದುಬಾರಿಯಾಗಿದೆ.
ಬಿಎಂಟಿಸಿ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹವಾನಿಯಂತ್ರಿತ, ಐಷಾರಾಮಿ ವೋಲ್ವೊ ಬಸ್ ಓಡಿಸುತ್ತದೆ. ಈ ಸೇವೆಗೆ 'ವಾಯುವಜ್ರ' ಎಂದು ನಾಮಕರಣ ಮಾಡಲಾಗಿದೆ. ಜಿಎಸ್‌ಟಿ, ಟೋಲ್ ಶುಲ್ಕ, ಪ್ರಯಾಣದರ ಹೆಚ್ಚಳ ಸೇರಿ ಏರ್‌ಪೋರ್ಟ್ ವಾಯುವಜ್ರ ಪ್ರಯಾಣ ದುಬಾರಿಯಾಗಿ ಟ್ಯಾಕ್ಸಿ ದರಕ್ಕೆ ಸಮಾನವಾಗಿದೆ.

ಬೆಂಗಳೂರಿನ ಸಾಮಾನ್ಯ ವೊಲ್ವೋ ಬಸ್‌ಗಳಿಗೆ ಹೋಲಿಕೆ ಮಾಡಿದರೆ ವಾಯುವಜ್ರ ವೋಲ್ವೋ ದರಗಳು ಹೆಚ್ಚಿವೆ. ಈಗ ಪ್ರಯಾಣದರ ಪರಿಷ್ಕರಣೆ ಬಳಿಕ ಏರ್‌ಪೋರ್ಟ್‌ಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುವುದು ಮತ್ತಷ್ಟು ದುಬಾರಿಯಾಗಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.
ಎಷ್ಟಾಗಿದೆ ವಾಯು ವಜ್ರ ಬಸ್‌ಗಳ ದರ?: ನಗರದ ವಿವಿಧ ಬಡಾವಣೆಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಸ್‌ಗಳು ಸಂಚಾರವನ್ನು ನಡೆಸುತ್ತವೆ. ಶೇ 5ರಷ್ಟು ಜಿಎಸ್‌ಟಿ, ಟೋಲ್ ಶುಲ್ಕ, ಶೇ 6.25ರಷ್ಟು ಪ್ರಯಾಣದರ ಏರಿಕೆ ಕಾರಣ ಕೆಲವು ಬಡಾವಣೆಗಳ ಪ್ರಯಾಣದರ 400 ರೂ.ಗೂ ಹೆಚ್ಚಾಗಿದೆ.
ವಿಮಾನ ನಿಲ್ದಾಣ-ಆನೇಕಲ್ ಪ್ರಯಾಣ ದರ 385 ರೂ. ನಿಂದ 410 ಆಗಿದೆ. ಕೆಐಎ-ಎಚ್‌ಎಎಲ್ ಜೀವನ್ ಭೀಮಾ ನಗರ 285 ರಿಂದ 310ಕ್ಕೆ ಏರಿಕೆ. ಕೆಐಎ-ವೈಟ್‌ಫೀಲ್ಡ್ 305 ರಿಂದ 330ಕ್ಕೆ ಏರಿಕೆ. ಕೆಐಎ-ಕಾಡುಗೋಡಿ 305 ರಿಂದ 330. ಕೆಐಎ-ಬನಶಂಕರಿ (ಕದಿರೇನಹಳ್ಳಿ) 295 ರಿಂದ 320 ರೂ.ಗಳು
ಕೆಐಎ-ಎಲೆಕ್ಟ್ರಾನಿಕ್ ಸಿಟಿ 365 ರಿಂದ 390. ಕೆಐಎ-ಚಂದಾಪುರ 385 ರಿಂದ 410 ರೂ.ಗಳು. ಕೆಐಎ-ಸರ್ಜಾಪುರ 375 ರಿಂದ 400 ರೂ.ಗಳು. ಕೆಐಎ-ಮೆಜೆಸ್ಟಿಕ್ 265 ರಿಂದ 290. ಕೆಐಎ-ಮೈಸೂರು ರಸ್ತೆ ನಿಲ್ದಾಣ 275 ರಿಂದ 300 ರೂ.ಗಳು. ಕೆಐಎ-ರಾಯಲ್ ಮಿನಾಕ್ಷಿ ಮಾಲ್ 315 ರಿಂದ 340 ರೂ.ಗಳು. ಕೆಐಎ-ಬಿಇಎಂಎಸ್ 5ನೇ ಹಂತ 295 ರಿಂದ 320 ರೂ.ಗಳು.
ವಾಯುವಜ್ರ ಬಸ್‌ಗಳು ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು ಕೇಂದ್ರ ಸರ್ಕಾರಕ್ಕೆ ಶೇ 5ರಷ್ಟು ಜಿಎಸ್‌ಟಿ ಕಟ್ಟಬೇಕು. ಸಾದಹಳ್ಳಿಯಲ್ಲಿನ ಟೋಲ್ ಶುಲ್ಕವನ್ನು ಬಸ್ ಪ್ರಯಾಣಿಕರಿಂದ ವಸೂಲಿ ಮಾಡಲಾಗುತ್ತದೆ. ಈಗ ಟಿಕೆಟ್ ದರಗಳು ಹೆಚ್ಚಾದ ಕಾರಣ ಬೆಂಗಳೂರು ನಗರದ ವಿವಿಧ ಕಡೆಗಳಿಂದ ಏರ್‌ಪೋರ್ಟ್‌ಗೆ ಬಸ್‌ನಲ್ಲಿ ಸಂಚಾರ ನಡೆಸುವುದು ದುಬಾರಿಯಾಗಿದೆ.
ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ಏರ್‌ಪೋರ್ಟ್‌ಗೆ ಹೋಗಲು ಬಸ್, ಕ್ಯಾಬ್, ಖಾಸಗಿ ವಾಹನಗಳನ್ನು ಜನರು ಬಳಕೆ ಮಾಡುತ್ತಾರೆ. 2024ರ ನವೆಂಬರ್‌ನಲ್ಲಿ ವಾಯುವಜ್ರ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ದಾಖಲೆ ನಿರ್ಮಾಣವಾಗಿತ್ತು.
ನವೆಂಬರ್‌ನಲ್ಲಿ 4,07,531 ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಸ್‌ನಲ್ಲಿ ಆಗಮಿಸಿ/ ನಿರ್ಗಮಿಸಿದ್ದರು. ಇದರ ಟಿಕೆಟ್‌ನಿಂದಲೇ ಬಿಎಂಟಿಸಿಗೆ 11 ಕೋಟಿ ರೂ. ಆದಾಯ ಬಂದಿತ್ತು. ನಗರದ 17 ಮಾರ್ಗದಿಂದ ಕೆಐಎಗೆ 144 ಬಸ್‌ಗಳು ಸಂಚಾರವನ್ನು ನಡೆಸುತ್ತವೆ. ಪ್ರತಿದಿನ 900 ಟ್ರಿಪ್ ವಾಯು ವಜ್ರ ಬಸ್‌ಗಳು ಸಂಚಾರ ನಡೆಸುತ್ತವೆ.
ವಾಯುವಜ್ರ ಬಸ್‌ಗಳ ದರ, ವೇಳಾಪಟ್ಟಿ, ನಿಲ್ದಾಣ ಮುಂತಾದ ವಿವರಗಳನ್ನು ನೀಡಲು ಬಿಎಂಟಿಸಿ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಿದೆ. ಕ್ಯಾಬ್‌ಗಳ ದರ ದುಪ್ಪಟ್ಟು ಎಂಬ ಕಾರಣಕ್ಕೆ ಪ್ರಯಾಣಿಕರು ಬಸ್ ಬಳಕೆ ಮಾಡುತ್ತಿದ್ದರು. ಈಗ ಬಸ್ ಸೇವೆಯೂ ದುಬಾರಿಯಾಗಿದೆ.












Click it and Unblock the Notifications