ಪಕ್ಷಕ್ಕೆ ಜೀವ ತುಂಬಲು ವಿದೇಶ ಪ್ರವಾಸಕ್ಕೆ ಹೊರಟ ಜೆಡಿಎಸ್
ಬೆಂಗಳೂರು, ಜೂ.10: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬ್ಯಾಕ್ ಟು ಬ್ಯಾಕ್ ಎಂಬಂತೆ ಸೋತು ಕಳೆಗುಂದಿರುವ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಚೈತನ್ಯ ತುಂಬಲು, ಪಕ್ಷ ಸಂಘಟನೆಯನ್ನು ಬಲಪಡಿಸಲು ಮತ್ತು ಶಾಸಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಜೆಡಿಎಸ್ ಅಧಿನಾಯಕರು ಇದೇ 15ನೇ ತಾರೀಕಿನಿಂದ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಜೆಡಿಎಸ್ ಸಂಘಟನೆಯಲ್ಲಿ ಹಿಂದೆ ಬಿದ್ದಿತ್ತು. ಅಲ್ಲದೆ ನಿರೀಕ್ಷಿತ ಫಲಿತಾಂಶ ಬಾರದ ಕಾರಣ ಒಬ್ಬರ ಮುಖವನ್ನು ಮತ್ತೊಬ್ಬರು ನೋಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಎಲ್ಲ 39 ಶಾಸಕರು, ಮೇಲ್ಮನೆ ಸದಸ್ಯರು ಮತ್ತಿತರ ಪ್ರಮುಖ ಪದಾಧಿಕಾರಿಗಳು ಇದೇ ಜೂನ್ 15ರಿಂದ 3 ದಿನಗಳ ಕಾಲ ಪಕ್ಕದ ಶ್ರೀಲಂಕಾ ರಾಜಧಾನಿ ಕೊಲಂಬೋಕ್ಕೆ ಹೊರಡಲಿದ್ದಾರೆ.

ಮೂರು ದಿನಗಳ ಕಾಲ ಕೊಲಂಬೋದಲ್ಲಿ ವಾಸ್ತವ್ಯ ಹೂಡಲಿರುವ ಶಾಸಕರು ಸುತ್ತಮುತ್ತಲ ಪ್ರವಾಸ ತಾಣಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಶಾಸಕರಿಗೆ ಪ್ರವಾಸಕ್ಕೆ ಸಿದ್ಧವಾಗುವಂತೆ ಮೌಖಿಕ ಸೂಚನೆ ನೀಡಲಾಗಿದೆ. ಆದರೆ ಅದನ್ನು ಅತ್ಯಂತ ಗೌಪ್ಯವಾಗಿ ಇಡುವಂತೆಯೂ ಎಲ್ಲಾ ಶಾಸಕರಿಗೂ ಸೂಚಿಸಲಾಗಿದೆ.
15ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಕೊಲಂಬೋಕ್ಕೆ ತೆರಳಲಿರುವ ಶಾಸಕರು ಶ್ರೀಲಂಕಾದ ಪ್ರಮುಖ ಧಾರ್ಮಿಕ ಕೇಂದ್ರಗಳನ್ನೂ ಭೇಟಿ ಮಾಡಲಿದ್ದಾರೆ. (ಶಾಸಕರ ವಿದೇಶ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್)
50 ಪ್ಲಸ್ ಮಂದಿ ಒಂಟಿಯಾಗಿ ಹೋಗಿಬರಬೇಕು:
ಗಮನಾರ್ಹವೆಂದರೆ 50 ಪ್ಲಸ್ ಮಂದಿ ತಮ್ಮ ಕುಟುಂಬದ ಯಾವುದೇ ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ಯುವಂತಿಲ್ಲ. ದೇವೇಗೌಡರನ್ನು ಹೊರತುಪಡಿಸಿ ಮಂಡ್ಯ ಸಂಸದ ಸಿಎಸ್ ಪುಟ್ಟರಾಜು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಪದಾಧಿಕಾರಿಗಳು ತೆರಳಲಿದ್ದು, ಪಕ್ಷದ ಸಂಘಟನೆ ಮತ್ತು ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಪ್ರತಿಯೊಬ್ಬರ ಜತೆಯೂ ಪ್ರವಾಸದ ವೇಳೆ ಮುಕ್ತವಾಗಿ ಮಾತುಕತೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications