ಹಣ ನೀಡುವಂತೆ ಚಿತ್ರಹಿಂಸೆ ಆರೋಪ: ನಟ ಸತ್ಯಜಿತ್ ವಿರುದ್ಧ ಮಗಳಿಂದಲೇ ದೂರು
ಬೆಂಗಳೂರು, ಫೆಬ್ರವರಿ 12: ಕನ್ನಡ ಚಿತ್ರರಂಗದ ನಟ ಸತ್ಯಜಿತ್ ಅವರ ಮಗಳು ಸ್ವಲೇಹಾ ಅವರು ತಂದೆ ಮತ್ತು ಅಣ್ಣಂದಿರ ವಿರುದ್ಧ ದೂರು ಸಲ್ಲಿಸಿದ್ದಾರೆ. ಸತ್ಯಜಿತ್ ಮಗಳು 15 ದಿನದ ಹಿಂದೆ ಬೆಂಗಳೂರಿನ ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು.
ಅಪ್ಪ, ಅಣ್ಣ ಎಲ್ಲರೂ ಸೇರಿ ಹಣ ನೀಡುವಂತೆ ತಮ್ಮ ಮೇಲೆ ಹಲ್ಲೆ ಮಾಡುತ್ತಾರೆ, ನಿಂದಿಸುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ವಲೇಹಾ ಅವರು ಜನವರಿ 12ರಂದು ನೀಡಿದ ದೂರಿನ ಅನ್ವಯ ಬಾಣಸವಾಡಿ ಪೊಲೀಸರು ಎನ್ ಸಿ ಆರ್ ದಾಖಲು ಮಾಡಿದ್ದರು.
ತುಂಬು ಗರ್ಭಿಣಿಯಾಗಿರುವ ತಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಹಣ ಕೊಡುವಂತೆ ತಂದೆ ಮತ್ತು ಸಹೋದರ ಕಿರುಕುಳ ನೀಡುತ್ತಿದ್ದಾರೆ. ರೌಡಿಗಳನ್ನ ಬಿಟ್ಟು ನನಗೆ ಹೆದರಿಸುತ್ತಿದ್ದಾರೆ ಎಂದು ಸ್ವಲೇಹಾ ಆರೋಪಿಸಿದ್ದಾರೆ.
ಎನ್.ಸಿ.ಆರ್ ದಾಖಲಿಸಿಕೊಂಡಿದ್ದ ಬಾಣಸವಾಡಿ ಎರಡೂ ಕಡೆಯ ಮನೆಯವರನ್ನು ಕರೆಸಿ ಬುದ್ಧಿವಾದ ಹೇಳಿ ರಾಜಿ ಮಾಡಿಸಿದ್ದರು. ಈಗ ಸತ್ಯಜಿತ್ ಮತ್ತು ಸ್ವಲೇಹಾ ಇಬ್ಬರೂ ಮಾಧ್ಯಮಗಳ ಮುಂದೆ ಪುನಃ ಆರೋಪ-ಪ್ರತ್ಯಾರೋಪ ಮಾಡಿದ್ದಾರೆ.

ಮೊದಲು ಚೆನ್ನಾಗಿಯೇ ಇದ್ದಳು
'ನಾನು ಸಾಲ ಮಾಡಿ, ಮನೆ ಮಾರಿ ಅಮೆರಿಕಕ್ಕೆ ಕಳುಹಿಸಿ ಓದಿಸುವ ಮೂಲಕ ಮಗಳನ್ನು ಪೈಲಟ್ ಮಾಡಿದ್ದೇವೆ. ಅವಳು ನಮ್ಮ ಜತೆ ಇದ್ದಾಗ ಚೆನ್ನಾಗಿಯೇ ಇದ್ದಳು. ಒಮ್ಮೆ ಬಂದು ಆರ್ಕಿಟೆಕ್ಟ್ ಒಬ್ಬರನ್ನು ಮದುವೆಯಾಗುತ್ತೇನೆ ಎಂದಳು. ಅದಕ್ಕೂ ಒಪ್ಪಿದ್ದೆ. ಆದರೆ ಮದುವೆ ಬಳಿಕ ಆಕೆ ಬದಲಾಗಿದ್ದಾಳೆ. ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ವಂತ ಮನೆ ಮಾರಿಕೊಂಡು ಬಾಡಿಗೆ ಮನೆಗೆ ಬಂದು ಕೂತಿದ್ದೇವೆ. ಮನೆಸಾಲ, ಕಾರಿನ ಸಾಲ, ಕ್ರೆಡಿಟ್ ಕಾರ್ಡ್ ಎಲ್ಲವೂ ಮಗಳ ಹೆಸರಲ್ಲೇ ಇದೆ. ಸ್ವಲೇಹಾ ಹೆಸರಿನಲ್ಲಿ ಆಕೆಯ ಗಂಡ ಸಾಲ ಮಾಡಿದ್ದಾನೆ. ಮನೆಯ ಬಾಡಿಗೆಯಾದರೂ ನೀಡು ಎಂದು ಮನವಿ ಮಾಡಿದ್ದರೂ ಮಗಳು ಸ್ಪಂದಿಸಲಿಲ್ಲ' ಎಂದು ಸತ್ಯಜಿತ್ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಹೇಗೆ ಹಿಂಸೆ ನೀಡುವುದು?
ಸ್ವಲೇಹಾ ಮಗಳೇ ಅಲ್ಲ, ನನಗೆ ನನ್ನ ಮಗ ಇದ್ದಾನೆ. ನಾನು 40 ಲಕ್ಷ ರೂ ಸಾಲ ಕಟ್ಟಿದ್ದೇನೆ. ನನಗೆ ಒಂದು ಲಕ್ಷ ಪ್ರತಿ ತಿಂಗಳೂ ಹಣ ನೀಡಿರುವುದಾಗಿ ಸುಳ್ಳು ಹೇಳುತ್ತಿದ್ದಾಳೆ. ನಾನು ಮಗಳಿಗೆ ಹಿಂಸೆ ನೀಡಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.

ಸಾಲಕ್ಕಿಂತ ಜಾಸ್ತಿ ಹಣ ನೀಡಿದ್ದೇನೆ
ಆದರೆ ಸ್ವಲೇಹಾ ಅವರು ತಂದೆ ಹಾಗೂ ಅಣ್ಣಂದಿರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಹಣದ ವಿಚಾರವಾಗಿ ತಂದೆ ಹಿಂಸೆ ನೀಡಿದ್ದಾರೆ. ನಾನೀಗ ತುಂಬು ಗರ್ಭಿಣಿ. ನನಗೆ ಈಗ ಸಂಬಳ ಬರುತ್ತಿಲ್ಲ. ನಾನು ದುಡ್ಡುಕೊಟ್ಟಿಲ್ಲ ಅಂದರೆ ನನ್ನ ಗಂಡ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ನನಗೆ ಇಬ್ಬರು ಸಹೋದರರು ಇದ್ದಾರೆ. ಅವರಿಗೆ ಮನೆ ನೋಡಿಕೊಳ್ಳಲು ಹೇಳಿ ಎಂದೆ. ನನ್ನ ತಂದೆ ಶಿಕ್ಷಣ ಕೊಡಿಸಿದ್ದಾರೆ ನಿಜ. ಅದರ 16 ಲಕ್ಷ ರೂ ಸಾಲ ಇದೆ. ಆದರೆ ಅದನ್ನೇ ನನ್ನ ತಂದೆ ಎಲ್ಲ ಕಡೆ ಹೇಳಿಕೊಂಡು ಬರುತ್ತಿದ್ದಾರೆ. ನಾನು ಸಾಲ ಮಾಡಿದ್ದಕ್ಕಿಂತಲೂ ಜಾಸ್ತಿ ಹಣವನ್ನು ತಂದೆಗೆ ನೀಡಿದ್ದೇನೆ. ಇನ್ನೂ ಎಷ್ಟು ಹಣ ನೀಡಲಿ?' ಎಂದು ಹೇಳಿದ್ದಾರೆ.
Recommended Video

ಕ್ಯಾಮೆರಾ ಎದುರು ಚೆನ್ನಾಗಿ ಅಳುತ್ತಾರೆ
'ನನ್ನ ಮದುವೆಯಾಗಿ ಮೂರು ವರ್ಷವಾಗಿದೆ. ಈಗ ನಾನು ಗರ್ಭಿಣಿಯಾಗಿರುವುದರಿಂದ ನನ್ನ ಕುಟುಂಬ ಶುರುವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಹಣ ನೀಡಲು ಸಾಧ್ಯವಿಲ್ಲ. ಸಹೋದರರು ದುಡಿದು ಸಂಪಾದಿಸಲಿ ಎಂದಿದ್ದೇನೆ. ನನ್ನ ತಂದೆ ಒಳ್ಳೆಯ ನಟ. ಅದಕ್ಕೆ ಕ್ಯಾಮೆರಾ ಮುಂದೆ ಅಳುವುದು ಸಹಜವಾಗಿಯೇ ಬರುತ್ತದೆ. ನಾನು ತಿಂಗಳಿಗೆ 4ಲಕ್ಷ ದುಡಿಯುತ್ತೇನೆ ಎನ್ನುತ್ತಿದ್ದಾರೆ. ಯಾವ ವಿಮಾನಯಾನ ಸಂಸ್ಥೆಯವರು ಅಷ್ಟು ಸಂಬಳ ಕೊಡುತ್ತಾರೆ? ಎಂದು ಸ್ವಲೇಹಾ ಪ್ರಶ್ನಿಸಿದ್ದಾರೆ.












Click it and Unblock the Notifications