Protest: SIRನಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯ ಆತಂಕ; ಜ್ಞಾನೇಶ್ ಕುಮಾರ್ ಉತ್ತರಕ್ಕೆ AAP ಪಟ್ಟು

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಸಂಬಂಧಿಸಿದ ಚರ್ಚೆಗಳು ತೀವ್ರವಾಗಿವೆ. ಇಸಿಐ ಮುಖ್ಯ ಚುನಾವಣಾ ಆಯುಕ್ತ ರಾಜೀನಾಮೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ದೆಹಲಿ ಪ್ರತಿಭಟನೆಗೆ ಬ್ರೇಕ್ ಬಿದ್ದ ಬೆನ್ನಲ್ಲೆ ಕೇಂದ್ರದ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿ ಕಾರಿವೆ. ಬೆಂಗಳೂರಿನಲ್ಲೂ ಎಎಪಿ ಪಕ್ಷದಿಂದ ಪ್ರತಿಭಟನೆ ನಡೆದಿದಿದ್ದು, ಜ್ಞಾನೇಶ್ ಕುಮಾರ್ ಪ್ರತಿಕ್ರಿಯೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇಂದು ಎಎಪಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರದ ಬಿಜೆಪಿ ಸರ್ಕಾರದ ದಮನಕಾರಿನೀತಿಗಳು, ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಆತಂಕ ಹಾಗೂ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ಯುವಜನರ ಮೇಲಿನ ದಬ್ಬಾಳಿಕೆ ಖಂಡಿಸಲಾಯಿತು. ಆಮ್ ಆದ್ಮಿ ಪಕ್ಷದ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.

AAP Protests in Bengaluru

ಪಾರದರ್ಶಕ, ನ್ಯಾಯಸಮ್ಮತ ಪರಿಶೀಲನೆ ಅಗತ್ಯ

ಈ ವೇಳೆ ಮಾತನಾಡಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕಕ್ಕೆ ಅವಕಾಶ ನೀಡಬಾರದು. ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿಬೇಕು. ಅದರ ಪರಿಣಾಮಗಳ ಕುರಿತು ಪಾರದರ್ಶಕ ಮತ್ತು ನ್ಯಾಯಸಮ್ಮತ ಪರಿಶೀಲನೆ ನಡೆಸಬೇಕು. ಮತದಾನದ ಹಕ್ಕು ಜನರ ಪ್ರಜಾಪ್ರಭುತ್ವದ ಅಡಿಪಾಯವಾಗಿದ್ದು, ಅದನ್ನು ರಕ್ಷಿಸುವುದು ಚುನಾವಣಾ ಆಯೋಗದ ಜವಾಬ್ದಾರಿ ಎಂದು ಒತ್ತಾಯಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಅವರು ಮಾತನಾಡಿ, 'ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್ಐಆರ್ ಪ್ರಕ್ರಿಯೆಯ ಕುರಿತು ದೇಶದ ಜನರ ಆತಂಕಗಳಿಗೆ ಉತ್ತರ ನೀಡಬೇಕು. ಚುನಾವಣಾ ಆಯೋಗವು ಬಿಜೆಪಿ ರಾಜಕೀಯ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಅನುಮಾನಗಳಿಗೆ ತನ್ನ ನಿಷ್ಪಕ್ಷಪಾತ ಕಾರ್ಯವೈಖರಿಯ ಮೂಲಕ ಉತ್ತರಿಸಬೇಕು. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬ ಆರೋಪಗಳಿಗೆ ಅವಕಾಶ ನೀಡಬಾರದು. ಸಂವಿಧಾನಕ್ಕೆ ನಿಷ್ಠವಾಗಿರಬೇಕಾದ ಆಯೋಗವು ಯಾವುದೇ ರಾಜಕೀಯ ಪಕ್ಷದ ಒತ್ತಡಕ್ಕೆ ಮಣಿಯಬಾರದು ಎಂದು ಟೀಕಿಸಿದರು.

ದೆಹಲಿ: ಯುವಕರ ಮೇಲಿನ ದಬ್ಬಾಳಿಕೆ ಸಹಿಸಲ್ಲ

ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ಯುವಜನರ ಮೇಲಿನ ದಬ್ಬಾಳಿಕೆ ಖಂಡಿಸಿ ಪಕ್ಷದ ಅನೇಕ ಮುಖಂಡರುಗಳು ಮಾತನಾಡಿದರು. ಸರ್ಕಾರವನ್ನು ಪ್ರಶ್ನಿಸುವುದು ಅಪರಾಧವಲ್ಲ; ಅದು ಪ್ರಜಾಪ್ರಭುತ್ವದ ಹಕ್ಕು ಎಂದು ಹೇಳಿದರು. ಯುವಜನರ ಸಮಸ್ಯೆಗಳಿಗೆ ಉತ್ತರ ನೀಡುವ ಬದಲು ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಖಂಡನೀಯ. ಅಧಿಕಾರ ಶಾಶ್ವತವಲ್ಲ; ಸಂವಿಧಾನ ಮತ್ತು ಜನರ ಹಕ್ಕುಗಳೇ ಶಾಶ್ವತ ಎಂದು ಎಚ್ಚರಿಸಿದರು.

ಎಸ್ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸುವುದು, ಅರ್ಹ ಮತದಾರರ ಹಕ್ಕುಗಳಿಗೆ ರಕ್ಷಣೆ ನೀಡುವುದು ಹಾಗೂ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಖಚಿತಪಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ನಾಗರಾಜ್ ಶಶಿಧರ್ ಆರಾಧ್ಯ , ಹಿರಿಯ ಮುಖಂಡರಾದ ವಿಜಯ ಶರ್ಮ, ಉಷಾ ಮೋಹನ್, ಜಗದೀಶ್ ವಿ. ಸದಂ, ಲೋಹಿತ್ ಕುಮಾರ್, ಅಶೋಕ್ ಮೃತ್ಯುಂಜಯ, ಜಗದೀಶ್ ಚಂದ್ರ, ಮರಿಯಾ ಹುಸೇನ್, ಸುರೇಶ್, ನಿತ್ಯಾನಂದ ಸಾಹು, ಬೈರೆಡ್ಡಿ, ವೆಂಕಟಾಚಲಪತಿ ಸೇರಿದಂತೆ ಅನೇಕ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+