ಶುಕ್ರವಾರ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ 'ಭ್ರಮೆ'
ಬೆಂಗಳೂರು, ಸೆ. 27 : ಸುಮಧುರವಾದ ಕನ್ನಡ ಹಳೆಯ ಚಲನಚಿತ್ರ ಗೀತೆ, ಭಾವಗೀತೆ, ಫ್ಯೂಷನ್ ಮ್ಯೂಸಿಕ್, ಗಝಲ್, ಲಘು ಸಂಗೀತ, ಭಕ್ತಿ ಸಂಗೀತ, ಸೂಫಿ ಹಾಡುಗಳನ್ನು ಕೇಳುವ ಆಸಕ್ತಿ ನಿಮ್ಮಲ್ಲಿದ್ದರೆ ಮತ್ತು ಯುವಪೀಳಿಗೆಯ ಸಂಗೀತಗಾರರನ್ನು ಪ್ರೋತ್ಸಾಹಿಸುವ ಉಮ್ಮೇದು ನಿಮ್ಮಲ್ಲಿದ್ದರೆ ಸೆಪ್ಟೆಂಬರ್ 27, ಶುಕ್ರವಾರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ನಿಮ್ಮ ಪಯಣ ಸಾಗಲಿ.
ಅಲಕಾ ಸುಬ್ರಮಣ್ಯ ಮತ್ತು ಇತರ ಐವರು ಯುವ ಸಂಗೀತಗಾರರು 'ಭ್ರಮೆ' (Illusion) ಎಂಬ ಪರಿಕಲ್ಪನೆಯೊಂದಿಗೆ ಹೊಸ ಸಂಗೀತ ತಂಡವನ್ನು ಹುಟ್ಟುಹಾಕಿದ್ದು, ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಉತ್ಸಾಹಿ ತಂಡ ಸಂಗೀತ ಪ್ರೇಮಿಗಳನ್ನು ಸಂಗೀತ ಸಾಗರದಲ್ಲಿ ತೇಲಾಡಿಸಲಿದೆ.

ಸಂಗೀತದ ಹಲವು ಪ್ರಾಕಾರಗಳನ್ನು ಪಸರಿಸುವ ಹಾಗೂ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಗುರಿಯೊಂದಿಗೆ ತಂಡ ತನ್ನ ಮೊದಲ ಕಾರ್ಯಕ್ರಮಕ್ಕೆ ಅಣಿಯಾಗಿದೆ. ದೊಡ್ಡ ಸಾಧನೆಯ ಕನಸಿನೊಂದಿಗೆ ತುಂಬ ಶ್ರದ್ಧೆಯಿಂದ.. ಕೇವಲ ಕಲಾಪ್ರೀತಿಯಿಂದ ಹುಟ್ಟಿಕೊಂಡಿರುವ ಈ ತಂಡಕ್ಕೆ ಹಾರೈಸಬೇಕಿದ್ದರೆ ಕಲಾಕ್ಷೇತ್ರಕ್ಕೆ ಬಂದು ಆಸೀನರಾಗಿ.
ಈ ಕಾರ್ಯಕ್ರಮಕ್ಕೆ ಯಾರೂ ಅತಿಥಿಗಳಿರುವುದಿಲ್ಲ. ಶ್ರೋತೃಗಳೇ ಮುಖ್ಯ ಅತಿಥಿಗಳು. ವಿವಿಧ ಪ್ರಕಾರಗಳ ಹಾಡುಗಳನ್ನು, ಲೈವ್ ಮ್ಯೂಸಿಕ್ ನೊಂದಿಗೆ ಭ್ರಮೆ ತಂಡ ಹಾಡಲಿದೆ. ಪ್ರೇಕ್ಷಕರು ಬಂದು ಪ್ರೋತ್ಸಾಹಿಸಬೇಕಾಗಿ ಒನ್ಇಂಡಿಯಾದೊಂದಿಗೆ ಮಾತನಾಡುತ್ತ ಅಲಕಾ ಸುಬ್ರಮಣ್ಯ ಅವರು ಸಂಗೀತಾಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.
ಶುಕ್ರವಾರ ಹಾಡು ಕೇಳಿ ತಣಿಯಲು ಒಂದಿಷ್ಟು ಸಮಯ ಮಾಡಿಕೊಳ್ಳಲು ಸಾಧ್ಯವಾದಲ್ಲಿ... ಹೊಸಬರ ಕನಸಿಗೆ ಬಲ ತುಂಬೋಣ ಅಂತ ನಿಮಗನಿಸಿದಲ್ಲಿ.... ರವೀಂದ್ರ ಕಲಾಕ್ಷೇತ್ರಕ್ಕೆ ಸಂಜೆ ಆರು ಗಂಡೆಗೆ ಬನ್ನಿ. ಪ್ರವೇಶ ಉಚಿತವಿದೆ.












Click it and Unblock the Notifications