ಫೆ.27ರಿಂದ 7ನೇ ಆವೃತ್ತಿಯ 'Bengaluru GAFX' ಸಮಾವೇಶ: ಅನಿಮೇಷನ್, ಗೇಮಿಂಗ್ ಲೋಕದ ಅದ್ಧೂರಿ ಹಬ್ಬಕ್ಕೆ ದಿನಗಣನೆ
ಬೆಂಗಳೂರು: ದೇಶದ ಐಟಿಬಿಟಿ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಜಾಗತಿಕ ಮಟ್ಟದ ಸೃಜನಶೀಲ ಹಬ್ಬಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ. ಕರ್ನಾಟಕ ಸರ್ಕಾರವು, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (AVGC-XR) ವಲಯದ ದೇಶದ ಅತಿದೊಡ್ಡ ಸಮಾವೇಶವಾದ 'ಬೆಂಗಳೂರು ಗ್ಯಾಫೆಕ್ಸ್' (Bengaluru GAFX) ನ 7ನೇ ಆವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದೆ.
ಅಸೋಸಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ (ABAI) ಮತ್ತು ಸ್ಟಾರ್ಟಪ್ ಕರ್ನಾಟಕ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಈ ಬೃಹತ್ ಶೃಂಗಸಭೆಯು ಇದೇ ಫೆಬ್ರವರಿ 27 ರಿಂದ ಮಾರ್ಚ್ 1 ರವರೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಈ ಬಾರಿಯ ಗ್ಯಾಫೆಕ್ಸ್ ಸಮಾವೇಶಕ್ಕೆ 'ಎವಲ್ಯೂಷನ್ ರೀಲೋಡೆಡ್' (Evolution Reloaded) ಎಂಬ ವಿಶಿಷ್ಟ ಧ್ಯೇಯವಾಕ್ಯವನ್ನು ನೀಡಲಾಗಿದೆ. ಇದು ಎವಿಜಿಸಿ ವಲಯಗಳಲ್ಲಿನ ಮುಂದಿನ ಹಂತದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಮಾನವನ ಸೃಜನಶೀಲತೆಯು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆರೆತು, ಕಥೆ ಹೇಳುವ ರೀತಿ, ಗೇಮಿಂಗ್ ಮತ್ತು ಅನಿಮೇಷನ್ ಅನುಭವಗಳನ್ನು ಹೇಗೆ ಮರು ವ್ಯಾಖ್ಯಾನಿಸುತ್ತಿದೆ ಎಂಬುದನ್ನು ಈ ಥೀಮ್ ಸಾರಲಿದೆ.
ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕವು ಭಾರತದ 'ಕ್ರಿಯೇಟಿವ್ ಎಕಾನಮಿ' ಅಥವಾ 'ಆರೇಂಜ್ ಎಕಾನಮಿ'ಯ ಮುಂಚೂಣಿಯಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
"2024ರಲ್ಲಿ ಭಾರತದ ಎವಿಜಿಸಿ ವಲಯವು ಶೇ.20ರಷ್ಟು ಬೆಳವಣಿಗೆ ಕಂಡಿದ್ದು, ಇದರಲ್ಲಿ ಶೇ.50ರಷ್ಟು ಆದಾಯ ಕೇವಲ ಕರ್ನಾಟಕದಿಂದಲೇ ಬಂದಿದೆ. ನಮ್ಮಲ್ಲಿ ಅಗತ್ಯವಿರುವ ಪರಿಣಿತ ಮಾನವ ಸಂಪನ್ಮೂಲವಿದೆ. 2028ರ ವೇಳೆಗೆ ಈ ಕ್ಷೇತ್ರದಲ್ಲಿ 50,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ," ಎಂದು ಸಚಿವರು ತಿಳಿಸಿದರು. ಅಲ್ಲದೆ, ಬ್ಲಾಕ್‌ಬಸ್ಟರ್ ಸಿನಿಮಾಗಳಾದ 'ಕೆಜಿಎಫ್' ಸೇರಿದಂತೆ ಹಲವು ಚಿತ್ರಗಳ ಪ್ರಮುಖ ತಾಂತ್ರಿಕ ಕೆಲಸಗಳು ಕರ್ನಾಟಕದ 'ಸೆಂಟರ್ ಆಫ್ ಎಕ್ಸಲೆನ್ಸ್'ನಲ್ಲೇ ನಡೆದಿವೆ ಎಂಬುದನ್ನು ಅವರು ಹೆಮ್ಮೆಯಿಂದ ಸ್ಮರಿಸಿದರು.
ಕೇವಲ ಬೆಂಗಳೂರಿಗೆ ಸೀಮಿತವಾಗಿದ್ದ ಎವಿಜಿಸಿ ತಂತ್ರಜ್ಞಾನವನ್ನು ಈಗ 2ನೇ ಮತ್ತು 3ನೇ ಹಂತದ ನಗರಗಳಿಗೂ ವಿಸ್ತರಿಸಲು ಸರ್ಕಾರ ಯೋಜನೆ ರೂಪಿಸಿದೆ. 'ಎವಿಜಿಸಿ ಸಿಒಇ 2.0' (AVGC CoE 2.0) ಅಡಿಯಲ್ಲಿ ರಾಜ್ಯಾದ್ಯಂತ ಸೃಜನಶೀಲ ತಂತ್ರಜ್ಞಾನ ಜಾಲವನ್ನು ನಿರ್ಮಿಸಲಾಗುವುದು. ಈಗಾಗಲೇ ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಕ 200ಕ್ಕೂ ಹೆಚ್ಚು ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಾಜೆಕ್ಟ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಖರ್ಗೆ ಮಾಹಿತಿ ನೀಡಿದರು.
ಸಮಾವೇಶದ ಪ್ರಮುಖ ಆಕರ್ಷಣೆಗಳು
ಮೂರು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ದಿಗ್ಗಜರು, ಹೂಡಿಕೆದಾರರು ಮತ್ತು ತಂತ್ರಜ್ಞರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ.
1. ಬಹುನಿರೀಕ್ಷಿತ 'ಕಾಂತಾರ ಚಾಪ್ಟರ್ 1', ನೆಟ್‌ಫ್ಲಿಕ್ಸ್‌ನ 'ಕುರುಕ್ಷೇತ್ರ', 'ಮಹಾವತಾರ್ ನರಸಿಂಹ' ಮುಂತಾದ ಚಿತ್ರಗಳ ಮೇಕಿಂಗ್ ಕುರಿತು ವಿಶೇಷ ಅವಧಿಗಳು ನಡೆಯಲಿವೆ.
2. 'ಬಾಹುಬಲಿ', 'ಕಾಂತಾರ' ಮತ್ತು 'ಓಜಿ' ಚಿತ್ರಗಳ ಛಾಯಾಗ್ರಾಹಕರು ವರ್ಚುವಲ್ ಪ್ರೊಡಕ್ಷನ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
3. ಪ್ರಸಿದ್ಧ ಲೇಖಕ ಆನಂದ್ ನೀಲಕಂಠನ್ ಅವರು ಭಾರತೀಯ ಪುರಾಣಗಳನ್ನು ತೆರೆಯ ಮೇಲೆ ತರುವ ಕುರಿತು ಮಾತನಾಡಲಿದ್ದಾರೆ.
4. ಆಸ್ಕರ್ ಮತ್ತು ಬಾಫ್ಟಾ ನಾಮನಿರ್ದೇಶಿತ ಕೃತಿಗಳ ಮೇಕಿಂಗ್, ಗೇಮಿಂಗ್ ಸೆಷನ್‌ಗಳು, ವಿಎಫ್‌ಎಕ್ಸ್ ಮಾಸ್ಟರ್‌ಕ್ಲಾಸ್‌ಗಳು, ಕಾಮಿಕ್ಸ್ ಸ್ಟ್ರೀಟ್ ಮತ್ತು ಬೋರ್ಡ್ ಗೇಮ್ ಬಿಡುಗಡೆಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ.
ಒಟ್ಟಾರೆಯಾಗಿ, ಕರ್ನಾಟಕ ರಾಜ್ಯವು ಮಾಧ್ಯಮ ಮತ್ತು ಮನರಂಜನಾ ಉದ್ಯಮಕ್ಕೆ ಸುಮಾರು ಶೇ.20ರಷ್ಟು ಕೊಡುಗೆ ನೀಡುತ್ತಿದ್ದು, 300ಕ್ಕೂ ಹೆಚ್ಚು ಸ್ಟುಡಿಯೋಗಳು ಮತ್ತು 15,000ಕ್ಕೂ ಹೆಚ್ಚು ವೃತ್ತಿಪರರನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಗ್ಯಾಫೆಕ್ಸ್ ಶೃಂಗಸಭೆಯು ಉದ್ಯಮದ ಬೆಳವಣಿಗೆಗೆ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಮಹತ್ವದ ಪಾತ್ರ ವಹಿಸಲಿದೆ.
The 7th edition of Bengaluru GAFX 2026, @ITBTGoK ’s annual conference and exhibition for animation, visual effects, gaming and immersive content, will be held from 27 February to 1 March 2026 at Hotel Lalit Ashok, Bengaluru.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 2, 2026
This year’s theme, “Evolution Reloaded”, reflects the… pic.twitter.com/6HFMMPscTC












Click it and Unblock the Notifications