ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹಳದಿ ಮಾರ್ಗದಲ್ಲಿ 6ನೇ ರೈಲು ಸೇವೆ ಆರಂಭ
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಿರುವ ಆರ್.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ ಹಳದಿ ಮೆಟ್ರೋ ಮಾರ್ಗದಲ್ಲಿ (Namma Metro Yellow Line) ಇಂದಿನಿಂದ ಹೊಸ 6ನೇ ಚಾಲಕ ರಹಿತ ಮೆಟ್ರೋ ಕಾರ್ಯಾಚರಣೆ ಆರಂಭಿಸುತ್ತಿದೆ. ಇದರಿಂದ ರೈಲಿಗೆ ಕಾಯುವ ಸಮಯ ಸಹ ಇಳಿಕೆ ಆಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕೃತ ಮಾಹಿತಿ ನೀಡಿದೆ.
ಇಂದು ಡಿಸೆಂಬರ್ 23 ಮಂಗಳವಾರದಿಂದ ಹಳದಿ ಮಾರ್ಗದಲ್ಲಿ 6ನೇ ರೈಲಿನ ಸೇವೆ ಪ್ರಯಾಣಿಕರಿಗೆ ಲಭ್ಯವಾಗಿದೆ. ಈವರೆಗೆ ಐದು ರೈಲುಗಳು ಸೇವೆಯಲ್ಲಿವೆ. ಈ ರೈಲಿನ ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಜನದಟ್ಟನೆಯ ಅವಧಿಯಲ್ಲಿ ಮೆಟ್ರೋ ಸೇವೆಗಳು ಪ್ರಸ್ತುತ ಇರುವ 15 ನಿಮಿಷಗಳ ಅಂತರದ ಬದಲು 13 ನಿಮಿಷಗಳ ಅವಧಿಗೆ ಇಳಿಕೆ ಆಗುತ್ತದೆ. ನಿಲ್ದಾಣದಲ್ಲಿ ಪ್ರತಿ ರೈಲಿಗೆ ಕಾಯುವ ಸಮಯ ಸುಧಾರಣೆ ಆಗಿದೆ. ಭಾನುವಾರಗಳಂದು ಪೀಕ್ ಅವಧಿಯ ಸೇವಾ ಅವಧಿ 15 ನಿಮಿಷಗಳಾಗಿಯೇ ಮುಂದುವರಿಯಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಿಲ್ದಾಣಗಳ ಎರಡೂ ಟರ್ಮಿನಲ್‌ಗಳಿಂದ ನಿತ್ಯ ಬೆಳಗ್ಗೆ ಹೊರಡುವ ಮೊದಲ ಹಾಗೂ ರಾತ್ರಿ ಕೊನೆಗೊಳಿಸುವ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅವು ಎಂದಿನಂತೆ ಸೇವೆ ನೀಡಲಿವೆ. ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ, ಮೆಟ್ರೋ ಸೇವೆಗಳ ಪ್ರಯೋಜನ ಪಡೆಯಬೇಕು ಎಂದು ಮೆಟ್ರೋ ಕೋರಿದೆ.
ಪ್ರಯಾಣಿಕರ ಸಂಖ್ಯೆ ಏರಿಕೆ ಸಾಧ್ಯತೆ
ಕಳೆದ ಆಗಸ್ಟ್ 10ರಂದು ಪ್ರಧಾನಿ ಮೋದಿಯವರಿಂದ ಈ ಹಳದಿ ಮಾರ್ಗ ಉದ್ಘಾಟನೆ ಆಗಿತ್ತು. ಅಂದಿನಿಂದ ಈವರೆಗೆ ಹಂತ ಹಂತವಾಗಿ ಐದು ರೈಲುಗಳು ಸೇವೆ ನೀಡುತ್ತಿವೆ. ಆರನೇ ರೈಲು ಇಂದು ಆರಂಭವಾದರೆ ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಏಳನೇ ರೈಲು ಮೊನ್ನೆಯಷ್ಟೇ ಬೆಂಗಳೂರಿಗೆ ಆಗಮಿಸಿದೆ. ಈ ರೈಲಿನ ಕಾರ್ಯಕ್ಷಮತೆ ಸೇರಿದಂತೆ ಕಠಿಣ ಪರೀಕ್ಷೆಗಳು ನಡೆಯಲಿವೆ. ಅದು ಸೇವೆಗೆ ಬರಲು ಜನವರಿ ಮಧ್ಯದವರೆಗೆ ಕಾಯಬೇಕಿದೆ. ಎಂಟನೇ ರೈಲು ಜನವರಿ ಅಂತ್ಯಕ್ಕೆ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ.
175 ಕಿಮೀ. ಮೆಟ್ರೋ ಉದ್ದ ಮೆಟ್ರೋ ಕಾರ್ಯಾಚರಣೆ: ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಎಂಆರ್‌ಸಿಎಲ್ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಹಲವು ವಿಚಾರಗಳನ್ನು ಚರ್ಚಿಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ಮಾರ್ಗವು 2027ರ ಡಿಸೆಂಬರ್ ಹೊತ್ತಿಗೆ ಹಾಲಿ 96 ಕಿ.ಮೀ.ಯಿಂದ 175 ಕಿಲೋ ಮೀಟರ್ ಮಾರ್ಗದವರೆಗೆ ವಿಸ್ತರಿಸಲಿದೆ. ಆ ಎಲ್ಲ ಪೂರ್ಣ ಮಾರ್ಗದಲ್ಲೂ ಮೆಟ್ರೋ ಕಾರ್ಯಾಚರಣೆ ನಡೆಯಲಿದೆ. ಹಳದಿ ಮಾರ್ಗ ಚಾಲನೆ ಆರಂಭವಾಗಿದ್ದು, ಇದರಿಂದ ಶೇಕಡಾ 30ರಷ್ಟು ಸಂಚಾರ ದಟ್ಟಣೆ ಕಡಿಮೆ ಆಗಿದೆ ಎಂದು ಮಾಹಿತಿ ನೀಡಿದರು.
2026ರಲ್ಲಿ ಮೆಟ್ರೋ 41ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿದೆ. 2027ರ ವೇಳೆಗೆ ವಿಮಾನ ನಿಲ್ದಾಣದ ನೀಲಿ ಮಾರ್ಗ ಕಾರ್ಯಾರಂಭಗೊಳ್ಳಲಿದೆ. ಆ ಮೂಲಕ ಒಟ್ಟಾರೆ ಬೆಂಗಳೂರಿನಲ್ಲಿ ಮುಂದಿನ ಎರಡು ವರ್ಷದೊಳಗೆ 175 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ಸೇವೆ ಲಭ್ಯವಾಗಲಿದೆ ಎಂದರು.












Click it and Unblock the Notifications