ಬೆಂಗಳೂರಿನ 2ನೇ ವಿಮಾನ ನಿಲ್ದಾಣ ಚರ್ಚೆ ನಡುವೆ: ಮತ್ತೊಂದು ವಾಯುನೆಲೆಗೆ ಎದುರಾಯ್ತು ಸಂಕಷ್ಟ
ಬೆಂಗಳೂರು: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ಪ್ರಮುಖ ವಿಮಾನ ನಿಲ್ದಾಣದ ಬಗ್ಗೆಯೂ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಈಗಾಗಲೇ ಇರುವ ಹಾಗೂ ಇತಿಹಾಸ ಸೃಷ್ಟಿ ಮಾಡಿರುವ ಪ್ರಮುಖ ವಿಮಾನ ನಿಲ್ದಾಣದ ಜಾಗದ ಮೇಲೆ ರಿಯಲ್ ಎಸ್ಟೇಟ್ ಕಣ್ಣು ಬಿದ್ದಿದೆ. ಅಲ್ಲದೇ ಈ ವಿಮಾನ ನಿಲ್ದಾಣವನ್ನು ಮೈಸೂರಿಗೆ ಸ್ಥಳಾಂತರ ಮಾಡಬೇಕು ಎನ್ನುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ. ಇಷ್ಟಕ್ಕೂ ಏನಿದು ವಿಮಾನ ನಿಲ್ದಾಣ ಚರ್ಚೆ ಹಾಗೂ ಈ ವಿಮಾನ ನಿಲ್ದಾಣದ ಇತಿಹಾಸವೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಹಲವು ದಶಕಗಳಿಂದ ಇರುವ ಜಕ್ಕೂರು ವೈಮಾನಿಕ ತರಬೇತಿ ಶಾಲೆ ಹಾಗೂ ವಾಯುನೆಲೆಯ ಮೇಲೆ ಕೆಲವರ ಕಣ್ಣು ಬಿದ್ದಿದೆ. ಮೈಸೂರು ಮಹರಾಜರು ವಿಧಿಸಿದ್ದ ಷರತ್ತನ್ನು ಪಾಲಿಸಬೇಕು ಎನ್ನುವ ಆಗ್ರಹವಿದ್ದರೂ, ಈ ವಿಮಾನ ನಿಲ್ದಾಣದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಏಕೈಕ ಸಾಮಾನ್ಯ ವಾಯುಯಾನ ಕ್ಷೇತ್ರ ಎನ್ನುವ ಹೆಗ್ಗಳಿಕೆ ಬೆಂಗಳೂರಿನ ಜಕ್ಕೂರು ಏರೋಡ್ರೋಮ್, ವಾಯುಯಾನ ತರಬೇತಿ (GFTS & NCC ಏರ್ ಸ್ಕ್ವೇರ್‌ಗೆ ) ನೆಲೆಗೆ ಇದೆ.

ಅಲ್ಲದೇ ಮನರಂಜನಾ ಹಾರಾಟ (ಮೈಕ್ರೋಲೈಟ್‌ಗಳು, ಜಾಯ್‌ರೈಡ್‌ಗಳು) ಗಳಿಗೆ ಪ್ರಮುಖ ಕೇಂದ್ರವಾಗಿದ್ದು, NH44 ರಲ್ಲಿ ಹೆಬ್ಬಾಳ ಫ್ಲೈಓವರ್ ಬಳಿ ರಮಣೀಯ ನೋಟಗಳನ್ನು ನೋಡಬಹುದಾಗಿದೆ. ಜಕ್ಕೂರು ವಾಯುನೆಲೆಯು ಮೈಸೂರು ಮಹಾರಾಜರಿಂದ ಅಭಿವೃದ್ಧಿಪಡಿಸಲಾಗಿತ್ತು. ಇದನ್ನು 1949 ರಿಂದ ಕರ್ನಾಟಕದ ವಾಯುಯಾನ ತರಬೇತಿಗೆ ಬಳಕೆ ಮಾಡಲಾಗುತ್ತಿದೆ. ಬೆಂಗಳೂರು ನಗರವು ಬೆಳೆದಂತೆ ಈ ವಾಯುನೆಲೆಯಲ್ಲಿ ಕಾಲಕ್ಕೆ ಅನುಗುಣವಾಗಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಇದೀಗ ಸುದೀರ್ಘ 75 ವರ್ಷಗಳ ಇತಿಹಾಸವಿರುವ 218 ಎಕರೆ ಜಾಗದಲ್ಲಿ ರಾಜ್ಯ ಸರ್ಕಾರವು ವಾಣಿಜ್ಯ ಉದ್ದೇಶದಿಂದ ಯೋಜನೆ ರೂಪಿಸುತ್ತಿದ್ದು, ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದೆ ಎನ್ನುವ ವಿಷಯ ಚರ್ಚೆಯ ಮುನ್ನೆಲೆಗೆ ಬಂದಿದೆ. ಆದರೆ ಇದಕ್ಕೆ ತಜ್ಞರು ಹಾಗೂ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂದು "ಪ್ರಜಾವಾಣಿ" ವರದಿ ಮಾಡಿದೆ.
ರಿಯಲ್ ಎಸ್ಟೇಟ್ ದೃಷ್ಟಿ
ಬೆಂಗಳೂರಿನಲ್ಲಿ ಈಗಾಗಲೇ ವಿವಿಧ ಪ್ರದೇಶಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಅದರಲ್ಲೂ ಬೆಂಗಳೂರಿನ ಪ್ರಮುಖ ಕೇಂದ್ರ ಬಿಂದು ಆಗಿರುವ ಜಕ್ಕೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಇದೀಗ ಇಲ್ಲಿನ 218 ಎಕರೆ ಪ್ರದೇಶದಲ್ಲಿ ಯಾವುದೇ ಯೋಜನೆ ಜಾರಿ ಮಾಡಿದರೂ ಅದು ರಿಯಲ್ ಎಸ್ಟೇಟ್‌ಗೆ ಪೂರಕವಾಗಿಯೇ ಇರಲಿದೆ. ಅಲ್ಲದೇ ಈ ಭಾಗದಲ್ಲಿ ವಾಯುನೆಲೆ ಇರುವುದರಿಂದ ಕೆಲವು ನಿರ್ದಿಷ್ಟ ನಿಯಮಗಳು ಈಗಾಗಲೇ ಜಾರಿಯಲ್ಲಿವೆ. ಆ ನಿಯಮಗಳೂ ಸಹ ಮುಂದಿನ ದಿನಗಳಲ್ಲಿ ಸಡಿಲವಾಗುವ ಸಾಧ್ಯತೆ ಇದೆ.
ಪರಿಸರಕ್ಕೆ ಹಾನಿಯಾಗುವ ಆತಂಕ
ಇನ್ನು ಜಕ್ಕೂರು ವಾಯುನೆಲೆ ಪ್ರದೇಶವು ಪರಿಸರ ಸರಂಕ್ಷಣೆಯ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿದೆ. ಜಕ್ಕೂರು ಕೆರೆ ಸಹ ಇರುವುದರಿಂದ ಈ ಭಾಗದಲ್ಲಿ ನೂರಾರು ಜಾತಿಯ ಹಕ್ಕಿಗಳಿಗೆ, ಸಣ್ಣಪುಟ್ಟ ಪ್ರಾಣಿಗಳು ಹಾಗೂ ವೈವಿಧ್ಯಮಯ ಸಸ್ಯ ಸಂಕುಲ ಇದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ರೀತಿಯ ಸಂದರ್ಭದಲ್ಲಿ ಪರಿಸರ ಉಳಿಸಿಕೊಳ್ಳುವ ಕೆಲಸವಾಗಬೇಕು. ಹೀಗಾಗಿ ಜಕ್ಕೂರು ವಾಯುನೆಲೆ ಪ್ರದೇಶದಲ್ಲಿ ಯಾವುದೇ ಹೊಸ ಯೋಜನೆ ಬೇಡ ಎಂದು ಹಲವರು ಆಗ್ರಹಿಸಿದ್ದಾರೆ.
ಈ ಕಾರಣಕ್ಕೆ ಈಗ ಜಕ್ಕೂರು ವಾಯುನೆಲೆ ಬಳಕೆ
ಜಕ್ಕೂರು ವಾಯುನೆಲೆಯನ್ನು ಖಾಸಗಿ ವಿಮಾನ ಸಂಸ್ಥೆಗಳು ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳುತ್ತಿವೆ. ಲಘು ವಿಮಾನಗಳ ಹಾರಾಟ ಹಾಗೂ ಹೆಲಿಕಾಪ್ಟರ್‌ಗಳ ಹಾರಾಟಕ್ಕೂ ಇದು ಪ್ರಮುಖ ಪ್ರದೇಶವಾಗಿದೆ. ಲಘು ವಿಮಾನ, ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಗಬೇಕು ಮತ್ತು ಏರ್ ಆಂಬುಲೆನ್ಸ್ ತಾಣವನ್ನಾಗಿ ಸಹ ಈ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.












Click it and Unblock the Notifications