Bengaluru Weather: 14 ವರ್ಷದಲ್ಲೇ ಬೆಂಗಳೂರಲ್ಲಿ ಅತ್ಯಧಿಕ ಚಳಿ ದಾಖಲು
ಬೆಂಗಳೂರು, ಅಕ್ಟೋಬರ್ 26: ಮುಂಗಾರು ಋತುವಿನಲ್ಲಿ ಸುರಿದ ಮಳೆಯು ಹಲವು ದಾಖಲೆಗಳನ್ನು ಬರೆದ ಬೆನ್ನಲ್ಲೆ ಇದೀಗ ಅಕ್ಟೋಬರ್ ತಿಂಗಳಲ್ಲಿ ಬಿದ್ದ ಕನಿಷ್ಠ ಪ್ರಮಾಣ ಚಳಿಯು ಸಹ ದಾಖಲೆ ಬರೆದಿದೆ ಎಂದು ಹವಾಮಾನ ಇಲಾಖೆ ವರದಿಗಳು ಸಾಬೀತುಪಡಿಸಿವೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಕನಿಷ್ಠ 15.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ (ಚಳಿ) ದಾಖಲಾಗಿದೆ. ಇದು 2008 ರಿಂದ 2022 ಈವರೆಗಿನ ವರ್ಷದ ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಅತ್ಯಧಿಕ ಚಳಿ ಆಗಿದೆ ಎಂಬ ದಾಖಲೆಗೆ ಪಾತ್ರವಾಗಿದೆ.
ಇನ್ನು ಲಭ್ಯ ಹವಾಮಾನ ಇಲಾಖೆ ವರದಿ ಪ್ರಕಾರ, ಬೆಂಗಳೂರಲ್ಲಿ ಅಕ್ಟೋಬರ್ ಚಳಿಯು 1974ರ ಅಕ್ಟೋಬರ್ 31ರಂದು ಸಾರ್ವಕಾಲಿಕ ದಾಖಲೆ ಬರೆದಿದೆ. ಅಂದು ನಗರದಲ್ಲಿ ಅತ್ಯಂತ ಕಡಿಮೆ 13.2ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಇದರ ಹೊರತಾಗಿ 2011ರಿಂದ ಈವರೆಗಿನ ಅವಧಿಯಲ್ಲಿ ಮಂಗಳವಾರ ಬಿದ್ದ ಚಳಿಯೆ ಮತ್ತೊಂದು ದಾಖಲೆ ಬರೆದಿದೆ.

ಮಂಗಳವಾರ 11ವರ್ಷದ ದಾಖಲೆಯ ಚಳಿ
2011ರಿಂದ 2022ರವರೆಗೆ ಬೆಂಗಳೂರಲ್ಲಿ ಈ ಅಕ್ಟೋಬರ್ ತಿಂಗಳಲ್ಲಿ ಕನಿಷ್ಠ ತಾಪಮಾನ ಪ್ರತ್ಯೇಕ ದಿನಗಳಲ್ಲಿ 16.6ಡಿ.ಸೆ, 17ಡಿ.ಸೆ., 18 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಂತ ಕಡಿಮೆ ದಾಖಲಾಗಿರಲಿಲ್ಲ. ಸುಮಾರು 11ವರ್ಷದ ಬಳಿಕ ಮತ್ತೆ ಅತೀ ಕನಿಷ್ಠ ತಾಪಮಾನ (15.4 ಡಿ.ಸೆ) ದಾಖಲಾಗಿದೆ. ಎಲ್ಲೆಡೆ ಬೆಳಗ್ಗೆ ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ.
ಮುಂದಿನ ಮೂರು ದಿನ ಅ.28ರವರೆಗೆ ನಿತ್ಯ ಚಳಿ ಕಂಡು ಬರಲಿದೆ. ಬೆಳಗ್ಗೆ ಮತ್ತು ರಾತ್ರಿ ಅಧಿಕ ಚಳಿ, ಮಧ್ಯಾಹ್ನ ಗರಿಷ್ಠ ತಾಪಮಾನ ದಾಖಲಾಗುವ ಸಂಭವವಿದೆ. ಈ ಅವಧಿಯಲ್ಲಿ ಕನಿಷ್ಠ 16 ರಿಂದ 18ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 29ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಅಕ್ಟೋಬರ್‌ನಲ್ಲಿ ನಿರೀಕ್ಷೆಯಂತೆ ತಾಪಮಾನವು 19-20 ಡಿಗ್ರಿ ಸೆಲ್ಸಿಯಸ್ ಇರಬೇಕು. ಆದರೆ ವಾತಾವರಣದಲ್ಲಿ ಬದಲಾವಣೆಗಳಿಂದ ವಾಡಿಕೆಗಿಂತ ಹೆಚ್ಚು ಚಳಿ ಕಂಡು ಬರುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮಾಹಿತಿ ನೀಡಿದೆ.
ಈಶಾನ್ಯ ದಿಕ್ಕಿನ ಗಾಳಿಯ ಪ್ರಭಾವದಿಂದ ಚಳಿ ದಾಖಲು
ಈಗಾಗಲೇ ಸೃಷ್ಟಿಯಾಗಿದ್ದ ಸಿತ್ರಾಂಗ್ ಚಂಡಮಾರುತ ಭೂಮೇಲ್ಮೈ ಸ್ಪರ್ಶಿಸಿದ್ದು, ಅಲ್ಲಿ ದುರ್ಬಲಗೊಂಡಿದೆ. ಪರ್ಯಾಯ ದ್ವೀಪ ಪ್ರದೇಶದ ವಾತಾವರಣದ ತೇವಾಂಶ ಸಹಿ ಗಾಳಿಯು ಬಂಗಾಳಕೊಲ್ಲಿಯ ತೀವ್ರ ಈಶಾನ್ಯ ದಿಕ್ಕಿನ ಕಡೆಗೆ ಎಳೆಯುತ್ತಿದೆ. ಹೀಗಾಗಿ ಬೆಂಗಳೂರಿನ ಅರಮನೆ ರಸ್ತೆಯ ಹವಾಮಾನ ಇಲಾಖೆ (IMD) ವೀಕ್ಷಣಾಲಯದಲ್ಲಿ ಕನಿಷ್ಠ ತಾಪಮಾನ 15.4 ಡಿ.ಸೆ. ದಾಖಲಾಗಿದೆ. ಉಪನಗರಗಳಲ್ಲಿ ಕನಿಷ್ಠ ತಾಪಮಾನವು ಮತ್ತಷ್ಟು ಕುಸಿದಿದೆ. ಸರ್ಜಾಪುರ ವ್ಯಾಪ್ತಿಯಲ್ಲಿ ಖಾಸಗಿ ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ 12.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಬೆಂಗಳೂರು ವೆದರ್ ಟ್ವಿಟ್ಟರ್ (BngWeather Twitter) ಗ್ರೂಪ್ ಬರೆದುಕೊಂಡಿದೆ.

ಈಶಾನ್ಯ ಭಾಗದಿಂದ ಗಾಳಿ ಬೀಸಲು ಆರಂಭಿಸಿದೆ. ಜೊತೆಗೆ ಕೆಲವು ವೈಪರಿತ್ಯಗಳಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡು, ಉತ್ತರ ಒಳನಾಡು ಭಾಗದಲ್ಲೂ ಚಳಿ ಹೆಚ್ಚಾಗಿದ್ದು ಬೆಳಗ್ಗೆ ಮಂಜು ಬೀಳುತ್ತಿದೆ.












Click it and Unblock the Notifications