ಬೆಂಗಳೂರಿನ ಮಹಿಳಾ ಪಿಜಿಯಲ್ಲಿ ಬಿಹಾರ ಮೂಲದ ಯುವತಿಯ ಬರ್ಬರ ಹತ್ಯೆ
ಬೆಂಗಳೂರು, ಜುಲೈ. 24: ಹೊರ ಜಿಲ್ಲೆಗಳು, ಹೊರ ರಾಜ್ಯಗಳಿಂದ ಬಂದ ಅನೇಕ ಮಂದಿಗೆ ಉಳಿದುಕೊಳ್ಳಲು ಸಿಗುವ ಮೊದಲ ಜಾಗ ಎಂದರೆ ಅದು ಪಿಜಿಗಳು. ಸಿಲಿಕಾನ್ ಸಿಟಿಯಲ್ಲಿ ಪಿಜಿಗಳ ದೊಡ್ಡ ಸಾಮ್ರಾಜ್ಯವೆ ಇದೆ. ಅದರಲ್ಲೂ ಕೋರಮಂಗಲ, ಇಂದಿರಾ ನಗರ, ಎಲೆಕ್ಟ್ರಾನಿಕ್ ಸಿಟಿ ಕಡೆಗಳಲ್ಲಿ ರಸ್ತೆಗೆ ಒಂದು ಎರಡು ಪಿಜಿಗಳು ಕಾಣಿಸುತ್ತವೆ. ಆದರೆ, ಇವುಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಈಗ ಮೂಡಿದೆ.
ಹೌದು.. ಬೆಂಗಳೂರಿನಲ್ಲಿ ಮಹಿಳಾ ಪಿಜೆಯೊಂದಕ್ಕೆ ನುಗ್ಗಿ ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕೋರಮಂಗಲದ ವಿಆರ್ ಲೇಔಟ್ ಪಿಜಿಯಲ್ಲಿ ಆಘಾತಕಾರಿ ಅಪರಾಧ ಸಂಭವಿಸಿದ್ದು, ಬಿಹಾರ ಮೂಲದ ಕೃತಿ ಕುಮಾರಿ (24) ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕೋರಮಂಗಲದ ಪಿಜಿಯೊಂದರಲ್ಲಿ ವಾಸಿಸುತ್ತಿದ್ದ ಕೃತಿ ಕುಮಾರಿ ಎಂಬುವವರನ್ನು ಮಂಗಳವಾರ ರಾತ್ರಿ 11:10 ರಿಂದ 11:30 ರ ನಡುವೆ ಈ ಹತ್ಯೆ ಮಾಡಲಾಗಿದೆ, ಈ ಘಟನೆ ಪಿಜಿ ನಿವಾಸಿಗಳಲ್ಲಿ ಆತಂಕ ಮತ್ತು ಆಕ್ರೋಶ ಉಂಟುಮಾಡಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ ಪಿಜಿ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನಿನ್ನೆ ರಾತ್ರಿ ಯುವಕನೊಬ್ಬ ಚಾಕು ಹಿಡಿದು ಮಹಿಳೆಯರ ಪಿಜಿಗೆ ನುಗ್ಗಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಕೃತಿ ಕುಮಾರಿ ಇದ್ದ ಮೂರನೇ ಮಹಡಿಯಲ್ಲಿರುವ ರೂಂ ಬಳಿ ಹೋಗಿ ಚಾಕುವಿನಿಂದ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಘಟನೆ ಬಗ್ಗೆ ಮಾಹಿತಿ ಸಿಕ್ಕ ಕೂಡಲರ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರೊಂದಿಗೆ ಕೋರಮಂಗಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶಿಲಿಸುತ್ತಿದ್ದಾರೆ. ಆರೋಪಿಯು ಮೃತ ಕೃತಿ ಕುಮಾರಿಗೆ ಪರಿಚಿತರೆ ಆಗಿರಬಹುದು ಎಂದು ಪ್ರಾಥಮಿಕ ತನಿಖೆ ತಿಳಿಸಿದೆ.
ಇದರ ಜೊತೆಗೆ ಪಿಜಿ ಮಾಲೀಕರ ನಿರ್ಲಕ್ಷ್ಯ ಕೂಡ ಘಟನೆಗೆ ಕಾರಣವಾಗಿದ್ದು, ಆ ದಿಕ್ಕಿನಲ್ಲಿಯೂ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಚುರುಕುಗೊಳಿಸಲು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರು ಕೃತಿ ಕುಮಾರಿ ಅವರ ಮೊಬೈಲ್ ಫೋನ್ ಅನ್ನು ಪರಿಶೀಲಿಸುತ್ತಿದ್ದಾರೆ.
ಮೃತ ಕೃತಿ ಕುಮಾರಿ ಕೊನೆಯ ಬಾರಿಗೆ ಯಾರನ್ನು ಕಾಂಟಾಕ್ಟ್ ಮಾಡಿದ್ದಾರೆ.. ಕೊನೆಗೆ ಅವರಿಗೆ ಬಂದ ಫೋನ್ ಕರೆ ಯಾವುದು ಎಂಬ ಇತರ ಮಾಹಿತಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಆಕೆ ಪಿಜಿಗೆ ಬಂದ ಬಳಿಕ ಹೇಗಿದ್ದರು, ಆಕೆಯ ಅಂತಿಮ ಚಲನವಲನಗಳನ್ನು ತಿಳಿಸಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ.












Click it and Unblock the Notifications