Bengaluru 2 Airport: ವಿಮಾನ ನಿಲ್ದಾಣಕ್ಕೆ ಜಿಲ್ಲೆಗಳ ಪೈಪೋಟಿ: ಸಚಿವ ಎಂ.ಪಾಟೀಲ್ ಹೇಳಿದ್ದೇನು ?
ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಮತ್ತೊಮ್ಮೆ ಮಾತನಾಡಿದ್ದಾರೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಹಂತದಲ್ಲೇ ರಾಜಕೀಯ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ. ನನಗೆ ಅವಕಾಶ ಇದಿದ್ದರೆ ನಾನು ವಿಜಯಪುರದಲ್ಲೇ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುತ್ತಿದ್ದೆ ಎಂದೂ ಅವರು ಹೇಳಿದ್ದಾರೆ. ಎರಡನೇ ವಿಮಾನ ನಿಲ್ದಾಣದ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನಡುವೆ ತೆರೆಮರೆಯ ಮುಸುಕಿನ ಗುದ್ದಾಟ ಜೋರಾಗಿದೆ ಎನ್ನುವಾಗಲೇ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣ ನಿರ್ಮಾಣದ ವಿಚಾರದಲ್ಲಿ ಹಲವು ಕಾರಣಕ್ಕೆ ಚರ್ಚೆಗಳು ನಡೆಯುತ್ತಿವೆ. ಎರಡನೇ ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವ ವಿಷಯದಲ್ಲಿ ಲಾಬಿ ನಡೆಯುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ರಾಜ್ಯ ಸರ್ಕಾರದ ಸಚಿವರ ನಡುವೆಯೇ ಈ ವಿಮಾನ ನಿಲ್ದಾಣದ ನಿರ್ಮಾಣದ ಜಾಗವಾಗಿ ಭಾರೀ ದೊಡ್ಡ ಲಾಬಿಗಳು ನಡೆಯುತ್ತಿವೆ. ಅವರ ಜಿಲ್ಲೆಗೆ ದೊಡ್ಡ ಪ್ರಾಜೆಕ್ಟ್ ಜಾರಿ ಮಾಡಿದ್ದೇವೆ ಎನ್ನುವ ಕ್ರೆಡಿಟ್ ವಿಚಾರವೊಂದು ಕಡೆಯಾದರೆ. ಮತ್ತೊಂದು ಕಡೆ ಇದೇ ವಿಚಾರವಾಗಿ ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಲಾಭಿಗಳು ಸಹ ನಡೆದಿವೆ.

ಇದೀಗ ಈ ವಿಚಾರಗಳ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಮೌನ ಮುರಿದಿದ್ದಾರೆ. ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಅವರ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ. ಹೇಗಾದರೂ ವಿಮಾನ ನಿಲ್ದಾಣ ತುಮಕೂರಿನಲ್ಲೇ ನಿರ್ಮಾಣವಾಗಬೇಕು ಎಂದು ಪರಮೇಶ್ವರ್ ಅವರು ಪಟ್ಟು ಹಿಡಿದಿದ್ದರೆ. ಕನಕಪುರ - ನಾಗಮಂಗಲ ಹಾಗೂ ಬಿಡದಿಯ ಯಾವುದಾದರೂ ಭಾಗದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಇನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂದು ಹಲವರು ತೆರೆಮರೆಯ ಸರ್ಕಸ್ ಮುಂದುವರಿಸಿದ್ದಾರೆ.
ಇವರನ್ನು ಎಳೆದು ತರಬೇಡಿ: ವಿಮಾನ ನಿಲ್ದಾಣದ ವಿಚಾರದಲ್ಲಿ ಪ್ರಭಾವಿ ಸಚಿವರ ನಡುವೆ ಪೈಪೋಟಿ ನಡೆಯುತ್ತಿದೆ ಎನ್ನುವ ವಿಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಂ.ಬಿ ಪಾಟೀಲ್ ಅವರು ಡಿ.ಕೆ ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಅವರನ್ನು ಇದರಲ್ಲಿ ಎಳೆದು ತರಬೇಡಿ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶೀಘ್ರ ಸ್ಥಳ ನಿಗದಿ ಮಾಡಲಾಗುವುದು. ಇದಕ್ಕೆ ಕೆಲವೊಂದು ನಿಯಮಗಳು ಇವೆ. ನನಗೆ ಆಯ್ಕೆ ಮಾಡುವ ಅವಕಾಶ ಇದ್ದಿದ್ದರೆ ವಿಜಯಪುರದಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿದೆ ಎಂದಿದ್ದಾರೆ.
ಇನ್ನು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಾರೋಹಳ್ಳಿಯ ಹೆಸರು ಸಹ ಕೇಳಿ ಬರುತ್ತಿದ್ದು. ಹಾರೋಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದರಿಂದ ಇಲ್ಲಿ ಜೀವನ ನಡೆಸಲು ಕಷ್ಟವಾಗಲಿದೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಅಲ್ಲದೆ ನೆಲೆ ಕಳೆದುಕೊಳ್ಳುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.












Click it and Unblock the Notifications