17 ವರ್ಷದ ಬೆಂಗಳೂರು ಯುವತಿ ಈಗ ವಿಶ್ವ ಪ್ರಸಿದ್ಧ: ತಮ್ಮನ ಆರೋಗ್ಯ ಸಮಸ್ಯೆಗೆ ಮಿಡಿದ ಹೃದಯ, ಸಕ್ಸಸ್ ಸ್ಟೋರಿ
ತಮ್ಮನ ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋಗಿ ಲಕ್ಷಾಂತರ ಜನರಿಗೆ ಆರೋಗ್ಯ ಹಾಗೂ ಜೀವನ ಸುಧಾರಣೆಗೆ ಕಾರಣರಾಗಿರುವ ಬೆಂಗಳೂರು ಮೂಲದ ದಿವಾ ಉತ್ಕರ್ಷ ಅವರಿಗೆ ಇದೀಗ ಅಂತರರಾಷ್ಟ್ರೀಯ ಕಿರೀಟವೊಂದು ಮುಡಿಗೇರಿದೆ.
ಬೆಂಗಳೂರು ಮೂಲದ 17 ವರ್ಷದ ದಿವಾ ಉತ್ಕರ್ಷ ಎನ್ನುವ ಯುವತಿಯು ವಿಶ್ವ ಮಟ್ಟದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಸಾಮಾಜಿಕ ಪರಿಣಾಮ ವಿಭಾಗದಲ್ಲಿ ಫೋರ್ಬ್ಸ್ 2025ರ ಪಟ್ಟಿಯಲ್ಲಿ 30 ವರ್ಷದ ಒಳಗಿನ 30 ಏಷ್ಯಾದ ಪ್ರಖ್ಯಾತರ ಪಟ್ಟಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ 17 ವರ್ಷದ ವಿದ್ಯಾರ್ಥಿನಿ ದಿವಾ ಉತ್ಕರ್ಷ ಸಾಮಾಜಿಕ ಪರಿಣಾಮ ವಿಭಾಗದಲ್ಲಿ ಕಾಣಿಸಿಕೊಂಡಿರುವುದು ಬೆಂಗಳೂರಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಇನ್ನು 2025ನೇ ಸಾಲಿನಲ್ಲಿ ಈ ವಿಭಾಗದಲ್ಲಿ ಗೌರವ ಪಡೆದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ಖ್ಯಾತಿಗೂ ದಿವಾ ಉತ್ಕರ್ಷ ಭಾಜನರಾಗಿದ್ದಾರೆ.

ದಿವಾ ಬಸವೇಶ್ವರ ನಗರದಲ್ಲಿರುವ ನ್ಯಾಷನಲ್ ಅಕಾಡೆಮಿ ಫಾರ್ ಲರ್ನಿಂಗ್‌ನಲ್ಲಿ ದ್ವಿತೀಯ ಪಿಯುಸಿ (12ನೇ ತರಗತಿ) ಓದಿರುವ ಮತ್ತು ಶೀಘ್ರದಲ್ಲೇ ಅಮೆರಿಕದಲ್ಲಿ ಕೈಗಾರಿಕಾ ಎಂಜಿನಿಯರಿಂಗ್ ಅಧ್ಯಯನ ಮಾಡುವುದಕ್ಕೆ ಬೇಕಾದ ಸಿದ್ಧತೆಯನ್ನು ದಿವಾ ಮಾಡಿಕೊಳ್ಳುತ್ತಿದ್ದಾರೆ. "ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿ ಹೆಸರು ಬರಲು ಕಾರಣ ನನ್ನ ಲಾಭರಹಿತ ಸಂಸ್ಥೆಯಾದ ಪ್ರಾಜೆಕ್ಟ್ ಸೂರ್ಯ ಕಾರಣ. ನಾನು 13 ವರ್ಷದವಳಾಗಿದ್ದಾಗ 2021ರಲ್ಲಿ ನನ್ನ ಕಿರಿಯ ಸಹೋದರ ಸೂರ್ಯಗೆ ಟೈಪ್ 1 ಮಧುಮೇಹ ಇರುವುದು ಪತ್ತೆಯಾದ ನಂತರ ನಾನು ಈ ಯೋಜನೆಯನ್ನು ಪ್ರಾರಂಭಿಸಿದೆ. ನನ್ನ ಕುಟುಂಬವು ತಮ್ಮನ ಆರೋಗ್ಯ ಸಮಸ್ಯೆಗೆ ಆರ್ಥಿಕ ಮತ್ತು ಭಾವನಾತ್ಮಕ ಭಾರವನ್ನು ಹೊತ್ತುಕೊಂಡಿತ್ತು. ಇದನ್ನು ನೋಡಿದ ಮೇಲೆ ಏನಾದರೂ ಸಹಾಯ ಮಾಡುವುದಕ್ಕೆ ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ. ಅದೇ ವಾಸ್ತವವನ್ನು ಎದುರಿಸುತ್ತಿರುವ ಭಾರತದ ಲಕ್ಷಾಂತರ ಬಡ ಹಾಗೂ ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಗಳ ಬಗ್ಗೆ ಯೋಚಿಸುವುದಕ್ಕೆ ನನಗೆ ಪ್ರೇರಣೆಯಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.
ದಿವಾ ಅವರು ತಮ್ಮ ಪೋಷಕರಾದ ಉತ್ಕರ್ಷ ಲೋಕೇಶ್ ಮತ್ತು ಪಲ್ಲವಿ ಉತ್ಕರ್ಷ ಅವರೊಂದಿಗೆ ಸೇರಿ ಪ್ರಾಜೆಕ್ಟ್ ಸೂರ್ಯವನ್ನು ಪ್ರಾರಂಭಿಸುವ ಮೊದಲು ಅವರು ಟೈಪ್ 1 ಮಧುಮೇಹದ ಬಗ್ಗೆ ಸಂಶೋಧನಾ ಅಧ್ಯಯನವನ್ನು ನಡೆಸಿದ್ದರು. ಟೈಪ್ 1 ಮಧುಮೇಹ ಕಾಣಿಸಿಕೊಂಡರೆ ದಿನ ನಿತ್ಯವೂ ಇನ್ಸುಲಿನ್ ಚುಚ್ಚುಮದ್ದಿನ ಅಗತ್ಯವಿದೆ. ಅಲ್ಲದೆ ಜೀವಿತಾವಧಿ ಇದೇ ಸ್ಥಿತಿಯಲ್ಲಿ ಮುಂದುವರಿಯಬೇಕಾಗುತ್ತದೆ. ಭಾರತದಲ್ಲಿ ಕಡಿಮೆ ಆದಾಯ ಹೊಂದಿರುವ ಕುಟುಂಬದ ಗಳಿಕೆಯ ಸುಮಾರು ಶೇ 18ರಷ್ಟು ಆದಾಯವು ಆರೋಗ್ಯ ಸಮಸ್ಯೆ ಹಾಗೂ ಚಿಕಿತ್ಸೆ ಪಡೆಯುವುದಕ್ಕೆ ಹೋಗುತ್ತದೆ. ಅಲ್ಲದೆ ಯಾರ ಕುಟುಂಬದಲ್ಲಾದರೂ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಆ ಕುಟುಂಬಗಳಲ್ಲಿ ಶೇ. 80ರಷ್ಟು ಸರ್ಕಾರಿ ಸಬ್ಸಿಡಿಗಳು ಅಥವಾ ಆರೋಗ್ಯ ವಿಮೆಗಳ ಸೌಲಭ್ಯವೂ ಇರುವುದಿಲ್ಲ ಎನ್ನುವುದು ದಿವಾ ಅವರ ಮಾತು. 2022 ರಲ್ಲಿ 35,860 ಕ್ಕೂ ಹೆಚ್ಚು ಜನರು ಟೈಪ್ 1 ಮಧುಮೇಹದಿಂದ ಸಾವನ್ನಪ್ಪಿದರು. ಇಲ್ಲಿಯೇ ಪ್ರಾಜೆಕ್ಟ್ ಸೂರ್ಯ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ದಿವಾ.
ಈ ಪ್ರಾಜೆಕ್ಟ್ ಪ್ರಾರಂಭವಾದ ಮೇಲೆ ಯುವಕರ ನೇತೃತ್ವದ ಲಾಭರಹಿತ ಸಂಸ್ಥೆಯು 4,02,000 ಕ್ಕೂ ಹೆಚ್ಚು ವ್ಯಕ್ತಿಗಳನ್ನು ತಲುಪಿದೆ. ಟೈಪ್ 1 ಮಧುಮೇಹದಿಂದ ಬಳಲುತ್ತಿರುವ 3,190 ಮಕ್ಕಳಿಗೆ ನೇರವಾಗಿ ಬೆಂಬಲ ನೀಡಿದೆ ಮತ್ತು ಅನುದಾನಗಳು, ಸಹಯೋಗ ಮತ್ತು ಜನಸಾಮಾನ್ಯರಿಂದ ನಿಧಿಸಂಗ್ರಹಣೆಯ ಮೂಲಕ 20 ಲಕ್ಷ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿಲಾಗಿದೆ. ಇಲ್ಲಿಯ ವರೆಗೆ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಕುಟುಂಬಗಳಿಗೆ 4,500 ಇನ್ಸುಲಿನ್ ವೈಲ್‌ಗಳು, 2,500 ಗ್ಲೂಕೋಸ್ ಮಾನಿಟರಿಂಗ್ ಸ್ಟ್ರಿಪ್‌ಗಳು ಮತ್ತು 1,000 ಇನ್ಸುಲಿನ್ ಸಿರಿಂಜ್‌ಗಳನ್ನು ಕೊಡಲಾಗಿದೆ.
ಸಾವಿರಾರು ಹಳ್ಳಿಗಳಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ನಾವು 200 ಕ್ಕೂ ಹೆಚ್ಚು ಆಶಾ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಿದ್ದೇವೆ. ಇದು 49,500 ಗ್ರಾಮಸ್ಥರನ್ನು ತಲುಪುತ್ತದೆ. ಈ ನಾಲ್ಕು ವರ್ಷಗಳಲ್ಲಿ ಉಚಿತ ಆರೋಗ್ಯ ಶಿಬಿರಗಳ ಮೂಲಕ 1,020 ಕ್ಕೂ ಹೆಚ್ಚು ಗ್ಲೂಕೋಸ್ ಸ್ಕ್ರೀನಿಂಗ್‌ಗಳನ್ನು ಸಹ ನಡೆಸಲಾಗಿದೆ ಎನ್ನುವುದು ವಿಶೇಷ ಎನ್ನುತ್ತಾರೆ ದಿವಾ.














Click it and Unblock the Notifications