ಬೆಂಗಳೂರಿನಲ್ಲಿ ತಲೆಎತ್ತಲಿವೆ ಇನ್ನೂ 15 ಫ್ಲೈಓವರ್
ಬೆಂಗಳೂರು, ಸೆ.1 : ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಂಗಳೂರು ನಗರದ ಸಂಚಾರ ಸಮಸ್ಯೆ ನಿವಾರಿಸಲು ಹೊಸ ಫ್ಲೈ ಓವರ್‌ಗಳನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಎಲ್ಲಿ ಫ್ಲೈ ಓವರ್ ನಿರ್ಮಿಸಬಹುದು? ಎಂಬ ಕುರಿತು ವರದಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಕುರಿತು ಮಾಹಿತಿ ನೀಡಿದ್ದು, ಬೆಂಗಳೂರು ನಗರದಲ್ಲಿ ಹೊಸದಾಗಿ 15 ಫ್ಲೈ ಓವರ್ ನಿರ್ಮಾಣ ಮಾಡುವ ಚಿಂತನೆ ಇದೆ ಎಂದು ಹೇಳಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಗೆ ಎಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಬಹುದು ಎಂಬ ಬಗ್ಗೆ ವರದಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 30 ಫ್ಲೈಓವರ್‌ಗಳಿವೆ. ಇವುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿದೆ. ಹೊಸದಾಗಿ 15 ಫ್ಲೈಓವರ್ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. [ಫ್ಲೈಓವರ್ ಗಾಗಿ 25 ಮನೆ ತೆರವು]
ಸಂಚಾರ ದಟ್ಟಣೆ ಇರುವ ಪ್ರದೇಶಗಳ ವರದಿ ಬಂದ ನಂತರ ಫ್ಲೈ ಓವರ್ ನಿರ್ಮಾಣದ ಬಗ್ಗೆ ಗಮನಹರಿಸಲಾಗುತ್ತದೆ. ಬಿಬಿಎಂಪಿ, ಬಿಡಿಎ ಮತ್ತು ಇತರ ಸಂಸ್ಥೆಗಳ ಸಹಾಯ ಮತ್ತು ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು. [ಗ್ರೇಡ್ ಸಪರೇಟರ್ ಡಿಸೆಂಬರ್‌ನಲ್ಲಿ ರೆಡಿ]
ಜವಾಹರ್‌ಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆ (ಜೆಎನ್‌ನರ್ಮ್)ಯಡಿ ಫ್ಲೈ ಓವರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಮೊದಲು ಎಲ್ಲಿ ಫ್ಲೈ ಓವರ್ ನಿರ್ಮಿಸಬೇಕು ಎಂಬ ವರದಿ ಕೈ ಸೇರಿದರೆ ಜೆಎನ್‌ನರ್ಮ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ಅಲ್ಲಿಂದ ಅನುಮತಿ ಪಡೆಯಲು ಸುಮಾರು ಐದು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.












Click it and Unblock the Notifications