ಬೆಂಗಳೂರಿನಿಂದ ಹಾರಲಿವೆ 14 ಅಂತರಾಷ್ಟ್ರೀಯ ವಿಮಾನಗಳು
ಬೆಂಗಳೂರು, ಆಗಸ್ಟ್ 19 : ಕೋವಿಡ್ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯಕವಾಗಲು ಬೆಂಗಳೂರಿನಿಂದ 14 ವಿವಿಧ ಪ್ರದೇಶಗಳಿಗೆ ವಿಮಾನ ಸಂಚಾರ ನಡೆಸಲಾಗುತ್ತದೆ. ಕೊರೊನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೇಶಿಯ ವಿಮಾನಗಳು ಮಾತ್ರ ಸಂಚಾರ ನಡೆಸುತ್ತಿವೆ.
Recommended Video
ವಂದೇ ಭಾರತ್ ಮಿಷನ್ ಮತ್ತು ಏರ್ ಬಬಲ್ ಕಾರ್ಯಕ್ರಮದ ಭಾಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 13 ವಿಮಾನಯಾನ ಸಂಸ್ಥೆಗಳು 14 ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿವೆ.
ಕೇಂದ್ರ ಸರ್ಕಾರದ ಈ ಕಾರ್ಯಕ್ರಮಗಳಿಗೆ ಬೆಂಗಳೂರು ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ. ವಂದೇ ಭಾರತ್ ಮಿಷನ್ ಅಡಿ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಹಲವಾರು ವಿಮಾನಗಳು ಬೆಂಗಳೂರಿಗೆ ಬಂದಿಳಿದಿವೆ.

ಅಬುದಾಬಿ, ದುಬೈ, ದೋಹಾ, ಫ್ರಾಂಕ್‌ಫರ್ಟ್, ಕುವೈಟ್, ಲಂಡನ್, ಮಸ್ಕತ್, ಪ್ಯಾರೀಸ್, ರಿಯಾದ್, ಸಿಂಗಾಪುರ ಸೇರಿದಂತೆ 14 ವಿವಿಧ ಪ್ರದೇಶಗಳಿಗೆ ಬೆಂಗಳೂರಿನಿಂದ ವಿಮಾನಗಳು ಸಿಬ್ಬಂದಿಗಳ ಜೊತೆ ಹಾರಾಟ ನಡೆಸಲಿವೆ.
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಗೋ ಏರ್, ವಿಸ್ತಾರ ಸೇರಿದಂತೆ 13 ಸಂಸ್ಥೆಗಳು ವಿಮಾನ ಹಾರಾಟವನ್ನು ನಡೆಸಲಿವೆ. ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಈಗಾಗಲೇ ಅನುಮತಿಯನ್ನು ನೀಡಿದೆ.
ಜುಲೈ ತಿಂಗಳಿನಲ್ಲಿ ಭಾರತ ವಿವಿಧ ದೇಶಗಳ ಜೊತೆ ಏರ್ ಬಬಲ್ ಕಾರ್ಯಕ್ರಮದಡಿ ಒಪ್ಪಂದ ಮಾಡಿಕೊಂಡಿದೆ. ಅಮೆರಿಕ, ಯುಎಇ, ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳ ಜೊತೆ ವಿಮಾನ ಹಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.












Click it and Unblock the Notifications