Bengaluru Flyovers: ಬೆಂಗಳೂರಲ್ಲಿ 10 ಹೊಸ ಫ್ಲೈಓವರ್ ನಿರ್ಮಾಣ: ಜಿಬಿಎ ಚುನಾವಣೆ ಸರ್ಕಸ್, ತಜ್ಞರ ಎಚ್ಚರಿಕೆ
ಬೆಂಗಳೂರು: ಬೆಂಗಳೂರಿನ ಸ್ಥಳೀಯ ಆಡಳಿತದ / ಬೆಂಗಳೂರು ಪಾಲಿಕೆಗಳ ಚುನಾವಣೆ ಸುದೀರ್ಘ 10 ವರ್ಷಗಳ ನಂತರ ನಡೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಸ್ಥಳೀಯ ಹಂತದಲ್ಲಿ ಜನಪ್ರತಿನಿಧಿಗಳೇ ಇರಲಿಲ್ಲ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ಈ ರೀತಿ ಇರುವಾಗಲೇ ಬೆಂಗಳೂರಿನಲ್ಲಿ ಬೃಹತ್ ಯೋಜನೆಗಳನ್ನು ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರಿನ ಟನಲ್ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿರುವ ನಡುವೆ ಇದೀಗ ಹೊಸ 10 ಫ್ಲೈಓವರ್‌ಗಳನ್ನು ನಿರ್ಮಾಣ ಮಾಡುವುದಕ್ಕೆ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್)ನಿಂದ ಇದಕ್ಕಾಗಿ ತಂಡ ರಚನೆ ಆಗಿದೆ. ಬೆಂಗಳೂರಿನ 10 ಫ್ಲೈಓವರ್‌ಗಳ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುವುದನ್ನು ರಾಜ್ಯ ಸರ್ಕಾರವು ಮುಂದುವರಿಸಿದೆ. ಬೆಂಗಳೂರಿನ ಚುನಾವಣೆ ಸಮೀಪಿಸುತ್ತಿರುವುದು ಹಾಗೂ ಕರ್ನಾಟಕ ಬಜೆಟ್ ಮಂಡನೆ ಎರಡನ್ನೂ ದೃಷ್ಟಿಯಲ್ಲಿ ಇರಿಸಿಕೊಂಡು 10 ಹೊಸ ಫ್ಲೈಓವರ್‌ಗಳ ನಿರ್ಮಾಣ ವಿಷಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 10 ಫ್ಲೈಓವರ್ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಆಂತರಿಕ ತಂಡ ರಚನೆ ಮಾಡಲು ಮುಂದಾಗಿದೆ. ಆದರೆ ಈ ಹೊಸ 10 ಫ್ಲೈಓವರ್ ಯೋಜನೆಗೆ ಸಂಬಂಧಿಸಿದಂತೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೊಸ ಫ್ಲೈಓವರ್‌ಗಳ ನಿರ್ಮಾಣದಿಂದ ಬೆಂಗಳೂರಿನಲ್ಲಿ ಯಾವ ರೀತಿ ಟ್ರಾಫಿಕ್ ಜಾಮ್ ಕಂಟ್ರೋಲ್ ಆಗಲಿದೆ. ಅಲ್ಲದೇ ಈ ಯೋಜನೆಗಳ ಪರಿಣಾಮ ಹೇಗೆ ಇರಲಿದೆ ಎನ್ನುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮೂರು ಹಂತದಲ್ಲಿ ವಿಭಜನೆ
ಇನ್ನು ಬೆಂಗಳೂರಿನ 10 ಹೊಸ ಫ್ಲೈಓವರ್‌ಗಳಿಗೆ ಸಂಬಂಧಿಸಿದಂತೆ ಮೂರು ವರ್ಗಗಳಾಗಿ ವಿಭಜನೆ ಮಾಡಿಕೊಳ್ಳಲಾಗಿದೆ. 5 ಕಿ.ಮೀ ವರೆಗೆ, 5 ಕಿಮೀ ಮತ್ತು 10 ಕಿ.ಮೀ ನಡುವೆ ಮತ್ತು 10 ಕಿ.ಮೀಗಿಂತ ಹೆಚ್ಚು ಎಂದು ವರ್ಗೀಕರಣ ಮಾಡಿಕೊಳ್ಳಲಾಗಿದೆ. ಅಲ್ಲದೇ 10 ಕಿ.ಮೀಗಿಂತ ಹೆಚ್ಚಿನ ಉದ್ದದ ಯೋಜನೆಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಡಿಯಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಸರ್ಕಾರವು ಒಟ್ಟು ಯೋಜನಾ ವೆಚ್ಚದ ಶೇ.40 ವರೆಗೆ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
10 ಫ್ಲೈಓವರ್ ಪ್ರಮುಖ ಮಾರ್ಗಗಳು
ಇನ್ನು ಬೆಂಗಳೂರಿನ 10 ಫ್ಲೈಓವರ್‌ಗಳ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿರುವ ಶಿರಸಿ ವೃತ್ತ - ನಾಯಂಡಹಳ್ಳಿ, ಯಶವಂತಪುರ - ಹಲಸೂರು, ಕನಕಪುರ ರಸ್ತೆಯ - ಆನಂದ ಭವನ, ಮಿನರ್ವ ವೃತ್ತ - ಹಡ್ಸನ್ ಸರ್ಕಲ್, ಮಾರೇನಹಳ್ಳಿ ಮುಖ್ಯ ರಸ್ತೆ, ಎಂಇಐ ಜಂಕ್ಷನ್, ಪೈಪ್‌ಲೈನ್ ರಸ್ತೆ, ದೊಡ್ಡಬಳ್ಳಾಪುರ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆ ಸೇರಿದಂತೆ ಪ್ರಮುಖ ಕಾರಿಡಾರ್‌ಗಳಲ್ಲಿ ಫ್ಲೈಓವರ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ.
10 ಫ್ಲೈಓವರ್‌ಗಳಿಗೆ ತಂಡ ರಚನೆ
ಇನ್ನು ಬೆಂಗಳೂರಿನಲ್ಲಿನ ಉದ್ದೇಶಿತ 10 ಫ್ಲೈಓವರ್‌ಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್)ನಿಂದ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರತಿ ಯೋಜನೆಯ ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಎಂಜಿನಿಯರ್‌ಗಳನ್ನು ನಿಯೋಜಿನೆ ಮಾಡಿದೆ. ಈ ತಂಡವು ಪರಿಶೀಲನೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಕರ್ನಾಟಕದ 2026 - 2027ನೇ ಸಾಲಿನ ಬಜೆಟ್‌ನಲ್ಲಿ ಬೆಂಗಳೂರಿನ 10 ಫ್ಲೈಓವರ್ ಯೋಜನೆಯ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ.
ಜನವರಿ 28ರ ಒಳಗೆ ಅಸ್ತಿತ್ವದಲ್ಲಿರುವ ರಸ್ತೆ ಪರಿಸ್ಥಿತಿಗಳ ಕುರಿತು ವರದಿ ಸಲ್ಲಿಸಲು ಮತ್ತು ವಿವರವಾದ ಯೋಜನಾ ವರದಿಗಳಿಗೆ ಬದಲಾವಣೆಗಳನ್ನು ಶಿಫಾರಸು ಮಾಡಲು ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಗುರುತಿಸಲಾದ ಪ್ರದೇಶಗಳಲ್ಲಿ ಪ್ರಸ್ತಾಪಿಸಲಾದ ಯೋಜನೆಗಳ ಬಗ್ಗೆ ಬೆಂಗಳೂರಿನ ಐದು ಸ್ಥಳೀಯ ಪಾಲಿಕೆಗಳ ಅಧಿಕಾರಿಗಳ ಗಮನಕ್ಕೆ ತರುವಂತೆಯೂ ಸೂಚನೆ ನೀಡಲಾಗಿದೆ.












Click it and Unblock the Notifications