ಕರ್ನಾಟಕದ ಈ ಭಾಗದಲ್ಲಿ 10,000 ಸಾವಿರ ಎಕರೆ ಜಮೀನು ಭೂಸ್ವಾಧೀನ: ಇಲ್ಲಿ ಭೂಮಿ ಇದ್ದವರು ಕೋಟ್ಯಾಧಿಪತಿಗಳು !
ಕರ್ನಾಟಕದ ದಕ್ಷಿಣ ಭಾಗದಲ್ಲಿ ಅದರಲ್ಲೂ ಬೆಂಗಳೂರು ಹಾಗೂ ಬೆಂಗಳೂರು ಕೇಂದ್ರಿತವಾಗಿ ಪ್ರದೇಶಕ್ಕೆ ಬಂಪರ್ ಬಂದಿದೆ. ಬೆಂಗಳೂರು ಹಾಗೂ ಬೆಂಗಳೂರಿನ ವಿವಿಧ ಭಾಗದಲ್ಲಿ ಬೃಹತ್ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರ ಬಿಜೆಪಿ ಸರ್ಕಾರವು ಜಾರಿ ಮಾಡಲು ಮುಂದಾಗಿದೆ. ರಾಜ್ಯ ಸರ್ಕಾರವು ಬೃಹತ್ ಯೋಜನೆಯೊಂದನ್ನು ರೂಪಿಸಿಕೊಂಡಿದ್ದು ಈ ಯೋಜನೆಗಾಗಿ ಬರೋಬ್ಬರಿ 10,000 ಸಾವಿರ ಎಕರೆ ಜಮೀನು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಹೀಗಾಗಿ ಈ ಭಾಗದಲ್ಲಿ ಭೂಮಿ ಇರುವವರು ಕೋಟ್ಯಾಧಿಪತಿಗಳು ಅಥವಾ ಭರ್ಜರಿ ಆದಾಯವನ್ನು ಗಳಿಸುವ ಸಾಧ್ಯತೆ ಇದೆ. ಇಷ್ಟಕ್ಕೂ ಯಾವುದು ಈ ಪ್ರಾಜೆಕ್ಟ್, ಈ ಪ್ರಾಜೆಕ್ಟ್ ವಿಚಾರಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಎಚ್.ಡಿ ದೇವೇಗೌಡರ ನಡುವೆ ಮುಸುಕಿನ ಗುದ್ದಾಟ ನಡೆದಿರುವುದು ಯಾಕೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿರುವ ಹಾಗೂ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವ ಬಿಡದಿಯಲ್ಲಿ "ಬಿಡದಿ ಟೌನ್‌ಶಿಪ್" ಪ್ರಾರಂಭ ಮಾಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಈ ಯೋಜನೆಯನ್ನು ಜಾರಿ ಮಾಡುವುದಕ್ಕೆ ಬರೋಬ್ಬರಿ 10,000 ಸಾವಿರ ಎಕರೆ ಜಮೀನು ಬೇಕು. ಹೀಗಾಗಿ ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರುವಾಗುತ್ತಿದೆ. ಇದರಿಂದ ರಾಮನಗರ ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಈ ಭಾಗದಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್‌ಶಿಪ್ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಲಾಗುತ್ತಿದೆ.

10,000 ಎಕರೆ ಜಮೀನು ಭೂಸ್ವಾಧೀನ: ಇನ್ನು ಬಿಡದಿಯಲ್ಲಿ ಟೌನ್‌ಶಿಫ್ ನಿರ್ಮಾಣ ಮಾಡುವುದಕ್ಕೆ ಬರೋಬ್ಬರಿ 10,000 ಸಾವಿರ ಎಕರೆ ಜಮೀನಿನ ಅವಶ್ಯಕತೆ ಇದೆ. ಈ ಯೋಜನೆ ಜಾರಿಯಾದರೆ ಇಲ್ಲಿ ಉದ್ಯಮಗಳು ಹೆಚ್ಚಾಗಲಿವೆ, ಉದ್ಯೋಗ ಸೃಷ್ಟಿಯಾಗಲಿವೆ ಹಾಗೂ ಎಲ್ಲದಕ್ಕಿಂತಲೂ ಮುಖ್ಯವಾಗಿ ಈ ಭಾಗದಲ್ಲಿ ಭೂಮಿ ಇರುವವರಿಗೆ ಭೂಮಿಗೆ ಬಂಗಾರದ ರೇಟ್ ಬರುವುದು ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಆದರೆ ಭೂಮಿಗೆ ಒಳ್ಳೆಯ ಬೆಲೆ ಬರಲಿದೆ ಎನ್ನುವಾಗಲೇ ಇದಕ್ಕೆ ಪರ - ವಿರೋಧ ಚರ್ಚೆಯೂ ಶುರುವಾಗಿದೆ.
ಡಿ.ಕೆ ಶಿವಕುಮಾರ್ ಹೇಳಿದ್ದೇನು ?
ಬಿಡದಿ ಟೌನ್‌ಶಿಪ್‌ನ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು, ಎಚ್.ಡಿ ಕುಮಾರಸ್ವಾಮಿ ಅವರ ಕಾಲದಲ್ಲೇ 7 ಟೌನ್ ಶಿಪ್ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಈ ಯೋಜನೆಗಾಗಿ 300 ಕೋಟಿ ರೂಪಾಯಿ ಹಣ ಸಹ ಮೀಸಲಿರಿಸಿದ್ದರು. ಟೌನ್‌ಶಿಪ್ ಪ್ಲಾನ್ ಸಹ ಅವರ ಕಾಲದಲ್ಲೇ ಆಗಿದೆ. ನಾನು ಡಿನೋಟಿಫಿಕೇಶನ್ ಮಾಡಲು ಹೋಗಲ್ಲ ಎಂದಿದ್ದಾರೆ. ರಾಜ್ಯಸಭಾ ಸದಸ್ಯ ಹಾಗೂ ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ ದೇವೇಗೌಡ ಅವರು ಈ ಭಾಗದಲ್ಲಿ ರೈತರ ಭೂಸ್ವಾಧೀನ ಬೇಡ ಎಂದು ಹೇಳಿದ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ.
ಯಾರು ಏನಾದರೂ ಹೇಳಲಿ ಗ್ರೇಟರ್ ಬೆಂಗಳೂರು ಮಾಡಿಯೇ ಮಾಡಲಿದ್ದೇವೆ. ಬೆಂಗಳೂರಿಗಿಂತ ಚೆನ್ನಾಗಿ 10,000 ಸಾವಿರ ಎಕರೆಯಲ್ಲಿ ಉತ್ತಮ ಸಿಟಿ ನಿರ್ಮಾಣ ಮಾಡಲಿದ್ದೇವೆ. ಇದು ಮಾದರಿ ಸಿಟಿ ಆಗಲಿದೆ. ರೈತರು ಜಮೀನಿನ ಬದಲಾಗಿ ದುಡ್ಡು ಪಡೆದುಕೊಳ್ಳಬಹುದು. ಅದು ಬೇಡವೆಂದರೆ ಅಭಿವೃದ್ದಿಪಡಿಸಿದ ಜಾಗವನ್ನು ತೆಗೆದುಕೊಳ್ಳಬಹುದು. ಎರಡು ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ, ಯಾಕೆ ರೈತರ ಭೂಮಿ ಸ್ವಾಧೀನದಿಂದ ಕೈ ಬಿಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ಈ ವಿಚಾರದಲ್ಲಿ ರಾಜಕೀಯ ಬೇಡ ಅಂತಲೂ ಅವರು ಹೇಳಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಜೋರು: ಇನ್ನು ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜೋರಾಗಿದೆ. ರಾಜ್ಯ ಸರ್ಕಾರವು ಭೂಸ್ವಾಧೀನ ಪಡಿಸಿಕೊಳ್ಳುವ ಮುನ್ನ ಈ ಭಾಗದ ಆಸ್ತಿದಾರರಿಗೆ ಎರಡು ಪ್ರಮುಖ ಆಯ್ಕೆಗಳನ್ನು ನೀಡಿವೆ. ಮೊದಲನೆಯದಾಗಿ ಈ ಭಾಗದಲ್ಲಿ ಆಸ್ತಿ ಮಾರಾಟ ಮಾಡಿ ಹಣ ತೆಗೆದುಕೊಳ್ಳಬಹುದು. ಇಲ್ಲವೇ ಜಾಗ ಬೇಕು ಎಂದಾದರೆ, ಬೇರೆ ಭಾಗದಲ್ಲಿ ಸರ್ಕಾರ ಅಭಿವೃದ್ಧಿ ಮಾಡಿರುವ ಜಾಗವನ್ನು ಪಡೆದುಕೊಳ್ಳಬಹುದು ಎನ್ನುವ ಆಯ್ಕೆಯನ್ನು ನೀಡಲಾಗಿದೆ.












Click it and Unblock the Notifications