ನನ್ನ ಕುಟುಂಬಕ್ಕೆ ಏನೇ ಆದರೂ ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ ಕಾರಣ: ಪೃಥ್ವಿ ಸಿಂಗ್
ಬೆಳಗಾವಿ, ಡಿಸೆಂಬರ್ 06: ಬಿಜೆಪಿ ಮುಖಂಡ ಪೃಥ್ವಿ ಸಿಂಗ್ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ನಗರದ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಪ್ರಕರಣದ ಮೂರನೇ ಆರೋಪಿಯಾಗಿದ್ದಾರೆ.
ಸುಜೀತ ಜಾಧವ ಮೊದಲ ಆರೋಪಿಯಾಗಿದ್ದು, ಸದಾಂ ಎಂಬಾತ ಎರಡನೇ ಆರೋಪಿಯಾಗಿದ್ದಾನೆ. ಐಪಿಸಿ ಕ್ರಿಮಿನಲ್ ಪ್ರಕರಣಗಳು ಹಾಗೂ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ನನ್ನನ್ನು ಬಂಧಿಸಲು ಬಂದರೆ ನಾನು ಸಹಕರಿಸುವೆ, ಕಾನೂನಿಗೆ ಗೌರವ ಕೊಡುವೆ ಎಂದಿದ್ದಾರೆ.

ಬೆಳಗಾವಿ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಬಿಜೆಪಿ ಮುಖಂಡನ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ. ಇನ್ನು ಘಟನೆ ಬಗ್ಗೆ ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಪ್ರತಿಕ್ರಿಯಿಸಿದ್ದು, ನನಗೆ ಹಾಗೂ ಕುಟುಂಬಕ್ಕೆ ಏನೇ ಆದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಪೃಥ್ವಿ ಸಿಂಗ್, ಡಿಸೆಂಬರ್ 4 ರಂದು ಮನೆಯಲ್ಲಿ ನಾನು ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಚನ್ನರಾಜ ಹಟ್ಟಿಹೊಳಿ ಬೆಂಬಲಿಗರು ಮನೆ ಬಂದರು. ಅಣ್ಣ ಕರೆಯುತ್ತಿದ್ದಾರೆ ಬನ್ನಿ ಎಂದು ಸದ್ದಾಂ ಕರೆದರು. ನಾನು ಬಿಜೆಪಿ, ಕಾಂಗ್ರೆಸ್ ಬರಲ್ಲ ಎಂದೆ. ಅವರ ಹತ್ತಿರ ಹೋಗುತ್ತಿದ್ದಂತೆ ಚನ್ನರಾಜ ಹಟ್ಟಿಹೊಳಿ ಅಶ್ಲೀಲವಾಗಿ ಬೈದರು. ನಾನು ಮೊಬೈಲ್ ತೆಗೆದು ವಿಡಿಯೋ ಮಾಡಿದೆ. ಎಂಎಲ್‌ಸಿ ಚನ್ನರಾಜ ನನ್ನ ಮೊಬೈಲ್ ಕಸಿದು ಎಸೆದರು. ಈ ವೇಳೆ ಚನ್ನರಾಜ, ಸದ್ದಾಂ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿಸಿದ್ದಾರೆ.
ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನಮ್ಮ ಮನೆಯನ್ನು ಬಾಡಿಗೆ ಕೊಟ್ಟಿದೆ. ಮನೆ ಕಸಿದುಕೊಳ್ಳಲು ಹೆಬ್ಬಾಳ್ಕರ್ ಪ್ರಯತ್ನ ಪಟ್ಟರು. ಕೈ, ಕಾಲು ಮುಗಿದು ಮನೆ ಬಾಡಿಗೆ ಅಗ್ರಿಮೆಂಟ್ ಮಾಡಿಕೊಂಡೆ. ನನಗೆ ಬಾಡಿಗೆ ಹಣ ಕೊಟ್ಟಿಲ್ಲ. ಬಾಡಿಗೆ ಕೇಳಿದರೆ ಬೈದು ಕಳುಹಿಸಿದರು. ಈ ಘಟನೆ ನಡೆದರೂ ಅವರ ಬಂಧನ ಆಗಿಲ್ಲ. ನನಗೆ ಹಾಗೂ ನನ್ನ ಕುಟುಂಬಕ್ಕೆ ಏನೇ ಆದರೂ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ಕಾರಣ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಬಗ್ಗೆ ಮಾತನಾಡಿದ ಪೃಥ್ವಿ ಸಿಂಗ್, ಸಾಹುಕಾರ್ ನನ್ನ ಬೆನ್ನಿಗೆ ನಿಲ್ಲಬಾರದು ಎಂದು ಈ ರೀತಿ ನಕಲಿ ಆಡಿಯೋ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ನಮ್ಮ ನಾಯಕರು. ಅವರು ಕನಸ್ಸಿನಲ್ಲಿಯೂ ಈ ರೀತಿ ಮಾತನಾಡಲ್ಲ. ಕೇಸ್ ವೀಕ್ ಮಾಡಲು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ನನ್ನ ಕುಟುಂಬಕ್ಕೆ ಜೀವ ಭಯ ಇದೆ. ನಮಗೆ ಪೊಲೀಸರ ಭದ್ರತೆ ಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications