ಲೋಕಸಭಾ ಚುನಾವಣೆಗೂ ಮುನ್ನ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್
ಬೆಳಗಾವಿ, ಫೆಬ್ರವರಿ 22: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬಂಪರ್ ಉಡುಗೊರೆ ನೀಡಿದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರದಿಂದ 6,975 ಕೋಟಿ ರೂಪಾಯಿಗಳ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಫೆಬ್ರವರಿ 22, ಗುರುವಾರ ಬೆಳಗಾವಿಗೆ ಭೇಟಿ ನೀಡಲಿದ್ದು, ಒಟ್ಟು 6,975 ಕೋಟಿ ರೂ. ವೆಚ್ಚದ ರಸ್ತೆಗಳ ಉದ್ಘಾಟನೆ ಮತ್ತು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಬೆಳಗಾವಿ ನಗರದ ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ. ಕೇಂದ್ರ ಸಚಿವರು ಉತ್ತರ ಕರ್ನಾಟಕದಲ್ಲಿ 376 ಕಿಲೋಮೀಟರ್ ವ್ಯಾಪ್ತಿಯ 15 ವಿವಿಧ ರಸ್ತೆ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭಾಗಿಯಾಗಲಿದ್ದಾರೆ.
ಬೆಳಗಾವಿ ನಗರದಲ್ಲಿ 34 ಕಿ.ಮೀ ಉದ್ದದ 1,600 ಕೋಟಿ ವೆಚ್ಚದ ರಿಂಗ್ ರೋಡ್. ಚಿಕ್ಕೋಡಿ ಬೈಪಾಸ್‌ನಿಂದ -ಗೋಟೂರುವರೆಗೆ 941.61 ಕೋಟಿ ವೆಚ್ಚದಲ್ಲಿ 27.12 ಕಿ.ಮೀ ಉದ್ದದ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಶಿರಗುಪ್ಪಿಯಿಂದ ಅಂಕಲಿವರೆಗೆ 887.32 ಕೋಟಿ ವೆಚ್ಚದಲ್ಲಿ 10 ಕಿ.ಮೀ ಉದ್ದದ ರಸ್ತೆ ಅಗಲೀಕರಣ. ಹಾಗೂ ಮುರಗುಂಡಿಯಿಂದ ಚಿಕ್ಕೋಡಿ ಹತ್ತಿರವರೆಗೆ 785.79 ಕೋಟಿ ವೆಚ್ಚದಲ್ಲಿ 50.2 ಕಿ.ಮೀ ಉದ್ದದ ರಸ್ತೆ ಅಗಲೀಕರಣ ನಡೆಯಲಿದೆ.
ಇದೇ ರೀತಿ ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರದಿಂದ ಹಣ ಬಿಡುಗಡೆ ಮಾಡಲಾಗಿದ್ದು, ಈ ಎಲ್ಲಾ ಕಾಮಗಾರಿಗಳಿಗೆ ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಿತಿನ್ ಗಡ್ಕರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಸ್ಥಳೀಯ ನಾಯಕರು ಸಾಥ್ ನೀಡಲಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಬೆಳಗಾವಿಗೆ ಪ್ರಯಾಣಿಸಲಿದ್ದು, ಈ ಕಾರ್ಯಕ್ರಮದ ನಂತರ ಮತ್ತೊಂದು ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ತೆರಳಿ ದಕ್ಷಿಣ ವಲಯದ ಹೆಚ್ಚುವರಿ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
19.77 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬೈಂದೂರು-ರಾಣೆಬೆನ್ನೂರು ಹೆದ್ದಾರಿಯಲ್ಲಿ (ಎನ್‌ಎಚ್ 766), ಶಿವಮೊಗ್ಗದ ವಿದ್ಯಾನಗರದಲ್ಲಿ 43.90 ಕೋಟಿ ರೂಪಾಯಿ ವೆಚ್ಚದಲ್ಲಿ (ಎನ್‌ಎಚ್ 13) ರೈಲ್ವೆ ಮೇಲ್ಸೇತುವೆ (ಎನ್‌ಎಚ್ 13) ಇಂದು ಉದ್ಘಾಟನೆಗೊಳ್ಳುವ ಕಾಮಗಾರಿಗಳಲ್ಲಿ ಸೇರಿವೆ. ಹಾಗೂ ಇತರ ಕಾಮಗಾರಿಗಳಿಗೆ ಕೇಂದ್ರ ಸಚಿವವರು ಅಡಿಗಲ್ಲು ಹಾಕಲಿದ್ದಾರೆ.












Click it and Unblock the Notifications