ಉಮೇಶ್ ಕತ್ತಿ ನಿಧನ: ಕರ್ನಾಟಕ, ಬಿಜೆಪಿಗೆ ನಷ್ಟವಾಗಿದೆ- ಅರುಣ್ ಸಿಂಗ್
ಬೆಳಗಾವಿ ಸೆಪ್ಟಂಬರ್ 08: ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ನನ್ನ ಮಿತ್ರ ಉಮೇಶ್ ಕತ್ತಿಯವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕರ್ನಾಟಕಕ್ಕೆ, ಬಿಜೆಪಿ ಮತ್ತು ವೈಯಕ್ತಿಕವಾಗಿ ಅಪಾರ ನಷ್ಟವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಕಂಬನಿ ಮಿಡಿದರು.
ಅರಣ್ಯ ಸಚಿವ ಉಮೇಶ ಕತ್ತಿ ಅವರು ನಿಧನ ಹಿನ್ನೆಲೆ ಬಿಜೆಪಿ ನಾಯಕರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಬೆಳಗಾವಿಗೆ ಆಗಮಿಸಿದ್ದಾರೆ. ಈ ವೇಳೆ ಬೆಳಗಾವಿಗೆ ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸುದ್ದಿಗಾರರ ಜತೆ ಮಾನತಾಡಿದರು.
ಈ ಸಂದರ್ಭದಲ್ಲಿ ಅರುಣ್ ಸಿಂಗ್, ಸಚಿವ ಉಮೇಶ್ ಕತ್ತಿ ಅವರು ನನ್ನ ವೈಯಕ್ತಿಕ ಮಿತ್ರರಾಗಿದ್ದರು. ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಪಕ್ಷದ ಬಲಿಷ್ಠ ಸಂಘಟನೆ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಅವರ ನಿಧನದಿಂದ ಅಪಾರ ನಷ್ಟವಾಗಿದೆ. ಅವರ ಹುಟ್ಟೂರಿಗೆ ತೆರಳಿ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ. ಅಗಲಿದ ಉಮೇಶ ಕತ್ತಿಯವರಿಗೆ ಶ್ರದ್ಧಾಂಜಲಿ ಸಮರ್ಪಿಸುವೆ ಎಂದು ತಿಳಿಸಿದರು.

ಬುಧವಾರ ಬೆಳಗಾವಿಗೆ ಬರಲು ಯೋಚಿಸಿದ್ದೆ. ಆದರೆ, ವಿಮಾನ ಸಿಗದ ಕಾರಣ ಬರಲಾಗಲಿಲ್ಲ. ಉಮೇಶ್ ಕತ್ತಿ ಅವರ ಅಕಾಲಿಕ ನಿಧನ ಅತ್ಯಂತ ಬೇಸರ ತಂದಿದೆ ಎಂದು ವಿಷಾದಿಸಿದರು.
ಸರ್ಕಾರದಿಂದ ಉಮೇಶ ಕತ್ತಿ ಆಶಯ ಈಡೇರಿಕೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಉಮೇಶ್ ಕತ್ತಿ ಅವರ ನಿಧನದಿಂದ ವೈಯಕ್ತಿಕವಾಗಿ ಹಾಗೂ ಇಡೀ ನಾಡಿಗೇ ತುಂಬಲಾರದ ನಷ್ಟವಾಗಿದೆ. ತೀವ್ರ ಎದೆನೋವು ಉಂಟಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಿಂದ ಮೊದಲನೇ ಫೋನ್ ಕರೆ ನನಗೆ ಬಂದಿತ್ತು. ವಿಷಯ ತಿಳಿದ ಏಳೆಂಟು ನಿಮಿಷಕ್ಕೇ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿ ಹಿರಿಯ ಹೃದಯ ತಜ್ಞರನ್ನು ಕರೆಸಿಕೊಂಡು ಸತತ ಪ್ರಯತ್ನ ಮಾಡಲಾಗಿತ್ತು. ಆದರೆ ವಿಧಿಯಾಟದ ಮುಂದೆ ನಮ್ಮ ಪ್ರಯತ್ನ ಫಲ ಕೊಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಉಮೇಶ ಕತ್ತಿಯವರ ಯೋಜನೆಗಳನ್ನು ರಾಜ್ಯ ಸರಕಾರ ಅನುಷ್ಠಾನಕ್ಕೆ ತರಲಿದೆ. ಅವರ ಆಶಯಗಳನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರೆ ಎಂದು ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಸುಧಾಕರ್ ಉತ್ತರಿಸಿದರು. ಉಮೇಶ್ ಕತ್ತಿ ಅವರ ಆಶಯಗಳನ್ನು ನಮ್ಮ ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಭರವಸೆ ನೀಡಿದರು.

ಅರುಣ್ ಸಿಂಗ್ ಸೇರಿದಂತೆ ಬಿಜೆಪಿ ನಾಯಕರು ಗುರುವಾರ ಬೆಳಗಾವಿಯಲ್ಲಿನ ಉಮೇಶ ಕತ್ತಿಯವರ ಮನೆಗೆ ತೆರಳು ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.












Click it and Unblock the Notifications