ಕಿತ್ತೂರು ಉತ್ಸವದಲ್ಲಿ ರಾಣಿ ಚೆನ್ನಮ್ಮ, ರಾಜಗುರು ವಂಶಸ್ಥರ ಕಡೆಗಣನೆ: ಕಾರಣವೇನು..?
ಬೆಳಗಾವಿ, ಅಕ್ಟೋಬರ್ 24: ಬ್ರಿಟೀಷರ ವಿರುದ್ಧ ರಣಕಹಳೆ ಮೊಳಗಿಸಿ ವಿಜಯ ದುಂದುಭಿ ಮೊಳಗಿಸಿದ ವೀರ ರಾಣಿ ಕಿತ್ತೂರು ಚೆನ್ನಮ್ಮನ ಐತಿಹಾಸಿಕ 200ನೇ ವಿಜಯೋತ್ಸವ ಮತ್ತು ಕಿತ್ತೂರು ಉತ್ಸವ-2024ಕ್ಕೆ ಅದ್ಧೂರಿ ಚಾಲನೆ ನೀಡಲಾಗಿದೆ.
ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟಾರ್ತಿ ವೀರರಾಣಿ ಕಿತ್ತೂರು ಚೆನ್ನಮ್ಮ ಬ್ರಿಟೀಷರ ವಿರುದ್ಧ ವಿಜಯ ಪತಾಕೆ ಹಾರಿಸಿದ 200ನೇ ವರ್ಷಾಚರಣೆ ಕಾರ್ಯಕ್ರಮದ ಅದ್ಧೂರಿ ಆಚರಣೆಗೆ ರಾಣಿ ಚೆನ್ನಮ್ಮನ ವಂಶಸ್ಥರು ಹಾಗೂ ಕಿತ್ತೂರು ಕಲ್ಮಠದ ರಾಜಗುರು ವಂಶಸ್ಥರಿಗೆ ಆಹ್ವಾನ ನೀಡಿದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲಾಡಳಿತ ಚೆನ್ನಮ್ಮನ ವಂಶಸ್ಥರು ಹಾಗೂ ಕಿತ್ತೂರು ಕಲ್ಮಠದ ರಾಜಗುರು ವಂಶಸ್ಥರನ್ನು ಕಡೆಗಣಿಸಿದೆ ಎನ್ನುವ ಅಸಮಾಧಾನ ಕೇಳಿಬಂದಿದೆ.

ದಸರಾ ಉತ್ಸವದಲ್ಲಿ ಮೈಸೂರು ಒಡೆಯರಿಗೆ ಸಿಗುವ ಎಳ್ಳಷ್ಟು ಗೌರವ ಚೆನ್ನಮ್ಮನ ವಂಶಸ್ಥರಿಗೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ ಕೇಳಿಬಂದಿದೆ. 2014ರಿಂದ ರಾಣಿ ಚೆನ್ನಮ್ಮನ ವಂಶಸ್ಥರಿಗೆ ಆಹ್ವಾನಿಸಿ, ಕಿತ್ತೂರು ಉತ್ಸವದಲ್ಲಿ ಸನ್ಮಾನಿಸಿ, ಜಿಲ್ಲಾಡಳಿತ ಗೌರವಿಸುತ್ತ ಬಂದಿತ್ತು. ಆದರೆ, ಈ ಬಾರಿ ಚೆನ್ನಮ್ಮನ ವಿಜಯೋತ್ಸವಕ್ಕೆ 200ನೇ ವರ್ಷದ ಸಂಭ್ರಮ. ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಜಿಲ್ಲಾಡಳಿತ ವೀರರಾಣಿ ಕಿತ್ತೂರು ಚೆನ್ನಮ್ಮನ ವಂಶಸ್ಥರನ್ನೇ ನಿರ್ಲಕ್ಷ್ಯ ಮಾಡಿದೆ.
ಹಾಗಾಗಿ, ಈ ಬಾರಿ ಚೆನ್ನಮ್ಮನ ವಂಶಸ್ಥರು ಕಿತ್ತೂರು ಉತ್ಸವವನ್ನು ಬಹಿಷ್ಕರಿಸಿದ್ದು ಅಸಮಾಧಾನ ವ್ಯಕ್ತಪಡಿಸಿದರು. ಕಿತ್ತೂರು ಉತ್ಸವಕ್ಕೆ ನಮಗೆ ಆಹ್ವಾನ ನೀಡದೆ ಜಿಲ್ಲಾಡಳಿತ ಅವಮಾನ ಮಾಡಿದೆ ಎಂದು ರಾಣಿ ಚನ್ನಮ್ಮನ ವಂಶಸ್ಥರಾದ ಉದಯ ದೇಸಾಯಿ ಆರೋಪಿಸಿದರು. 2014ರಿಂದ ನಮಗೆ ಕಿತ್ತೂರು ಉತ್ಸವದ ಆಹ್ವಾನ ನೀಡಲಾಗುತ್ತಿತ್ತು. ಅಲ್ಲದೇ, ಕಿತ್ತೂರು ಉತ್ಸವದ ಆಮಂತ್ರಣ ಪತ್ರಿಕೆಯಲ್ಲಿಯೂ ನಮ್ಮ ಹೆಸರನ್ನು ಮುದ್ರಿಸಿ, ಉತ್ಸವದ ಮೊದಲ ದಿನವೇ ನಮರೆ ಆಹ್ವಾನ ನೀಡಲಾಗುತ್ತಿತ್ತು.

ಈ ಬಾರಿ ನಮಗೆ ಯಾರೂ ಆಮಂತ್ರಣ ನೀಡಿ ಉತ್ಸವಕ್ಕೆ ಆಹ್ವಾನ ನೀಡಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಚೆನ್ನಮ್ಮಾಜಿ ವಂಶಜರು ಎಂದಷ್ಟೇ ಮುದ್ರಣ ಮಾಡಲಾಗಿದೆ. ಆದರೆ, ಯಾರ ಹೆಸರನ್ನು ಇಲ್ಲಿ ಉಲ್ಲೇಖಿಸಿಲ್ಲ. ಈ ಮೂಲಕ ಜಿಲ್ಲಾಡಳಿತ ರಾಣಿ ಚೆನ್ನಮ್ಮನ ವಂಶಸ್ಥರನ್ನು ಅವಮಾನಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನವರ 11ನೇ ತಲೆಮಾರಿನ ವಂಶಜರಿದ್ದೇವೆ. ಜಿಲ್ಲಾಡಳಿತ ಈಗ ನಮಗೆ ಆಮಂತ್ರಣ ನೀಡಿದರೂ ನಾವ್ಯಾರೂ ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ. ದೂರ ಉಳಿಯುವ ಮೂಲಕ ಕಿತ್ತೂರು ಉತ್ಸವ ಬಹಿಷ್ಕರಿಸುತ್ತೇವೆ ಎಂದು ದೇಸಾಯಿ ತಿಳಿಸಿದ್ದಾರೆ.
ರಾಜಗುರು ಸಂಸ್ಥಾನದ ವಂಶಸ್ಥರ ಕಡೆಗಣನೆ
ಇನ್ನು ವೀರರಾಣಿ ಕಿತ್ತೂರು ಚನ್ನಮ್ಮನ ಸ್ವಾತಂತ್ರ ಹೋರಾಟಕ್ಕೆ ಪ್ರೇರಣೆ ನೀಡಿದವರು. ರಾಜಗುರುಗಳು ಆಗಿದ್ದ ಗುರುಸಿದ್ಧ ಸ್ವಾಮೀಜಿ ಕಿತ್ತೂರು ಹತ್ತಿರದಲ್ಲೇ ಇರುವ ಗಂದಿಗವಾಡ ಗ್ರಾಮದ ಹಿರೇಮಠ ಮನೆತನದವರು. ನಂತರ 1973ರವರೆಗೆ ನಾಲ್ಕು ಜನ ರಾಜಗುರುಗಳು ಗಂದಿಗವಾಡ ಹಿರೇಮಠದಿಂದಲೇ ಬಂದವರು. ಅಂತಹ ಹಿರೇಮಠ ಮನೆತನದ ವಂಶಸ್ಥರಿಗೂ ಕಿತ್ತೂರಿನ ವಿಜಯೋತ್ಸವದ 200ನೇ ವರ್ಷಾಚರಣೆಯಲ್ಲಿ ಪ್ರಾಮುಖ್ಯತೆ ನೀಡದೇ ಕಡೆಗಣಿಸಲಾಗಿದೆ.
ಗಂದಿಗವಾಡ ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಶರಣ ಸಾಹಿತಿಗಳು, ಪ್ರವಚನಕಾರರು, ಆಧ್ಯಾತ್ಮಿಕ ಬೋಧಕರು. ರಾಜಗುರು ಸಂಸ್ಥಾನ ಮನೆತನದ ವಂಶಸ್ಥರು ಆಗಿದ್ದಾರೆ. ಅಂತಹವರನ್ನು ಉತ್ಸವಕ್ಕೆ ಆಮಂತ್ರಣ ನೀಡದೇ ಜಿಲ್ಲಾಡಳಿತ ಕಡೆಗಣನೆ ಮಾಡಿದೆ ಎಂದು ಖಾನಾಪುರ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ವಿಜಯ ಬಡಿಗೇರ ದೂರಿದ್ದಾರೆ. ದಸರಾ ಉತ್ಸವದಲ್ಲಿ ಮೈಸೂರು ಒಡೆಯರಿಗೆ ಸಿಗುವ ಎಳ್ಳಷ್ಟೂ ಗೌರವ ನಮಗೆ ಸಿಗುತ್ತಿಲ್ಲ. ಇದು ನಮಗಷ್ಟೇ ಅಲ್ಲ. ರಾಜ್ಯದ 6 ಕೋಟಿ ಜನರಿಗೆ ಮಾಡಿರುವ ಅಪಮಾನ. ರಾಣಿ ಚೆನ್ನಮ್ಮನ ವಂಶಸ್ಥರಿಗೆ ಕಿತ್ತೂರು ಉತ್ಸವಕ್ಕೆ ಆಹ್ವಾನ ನೀಡದೇ ಜಿಲ್ಲಾಡಳಿತ ಕಡೆಗಣಿಸಿದೆ ಎಂಬ ಆಕ್ರೋಶ ಹೊರ ಹಾಕಿದ್ದಾರೆ.












Click it and Unblock the Notifications