ಬೆಳಗಾವಿಯ ಈ ಟಗರಿನ ಬೆಲೆ ಬರೋಬ್ಬರಿ 5.10 ಲಕ್ಷ
ಬೆಳಗಾವಿ, ನವೆಂಬರ್ 07 : ಟಗರೊಂದಕ್ಕೆ ಎಷ್ಟು ಬೆಲೆ ಇರಬಹುದು ?, 20 ಸಾವಿರ, 30 ಸಾವಿರ ಹೋಗಲಿ ಅತೀ ಹೆಚ್ಚೆಂದರೆ 1 ಲಕ್ಷ, ಆದರೆ ಇಲ್ಲೊಂದು ಟಗರು ಬರೋಬ್ಬರಿ 5.10 ಲಕ್ಷಕ್ಕೆ ಮಾರಾಟವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದ ಸಹೋದರರಾದ ಶಿಗಾಡಿ ನಿಂಗಪ್ಪ ನಾಗರಾಳೆ ಮತ್ತು ಅವಣ್ಣ ನಾಗರಾಳೆ ಸಾಕಿರುವ ಟಗರು ಭರ್ತಿ 5.10 ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಹುಬ್ಬೇರಿಸಿದೆ.

ಭಾರಿ ಕಟ್ಟುಮಸ್ತಾದ ದೇಹರಚನೆ, ಕಾದಾಟಕ್ಕೆ ಹೇಳಿ ಮಾಡಿಸಿದಂತಿರುವ ಕೊಂಬಿನ ರಚನೆ, ಕಪ್ಪು ಉಣ್ಣೆ, ಭರ್ಜರಿ ಮೈಮಾಟ ಹೊಂದಿರುವ ಮರಿ ಆನೆಯಂತಹಾ ಈ ಟಗರನ್ನು ಬಾಗಲಕೋಟೆ ಜಿಲ್ಲೆಯ ಮೊಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಸೋಮಲಿಂಗ ಎಂಬುವವರು 5.10 ಲಕ್ಷ ಕೊಟ್ಟು ಖರೀದಿಸಿದ್ದಾರೆ.
ನಾಗರಾಳೆ ಸಹೋದರರು ಮತ್ತು ಅವರ ಮಕ್ಕಳು ಸತತ 10 ವರ್ಷಗಳ ಕಾಲ ಪ್ರೀತಿಯಿಂದ ಸಾಕಿದ ಈ ಟಗರಿನ ಗತ್ತು ಕಂಡು ಸುತ್ತಮುತ್ತಲಿನ ಊರಿನವರು ಇದನ್ನು "ಬೆಟ್ಟದ ಹುಲಿ' ಎಂತಲೇ ಕರೆಯುತ್ತಿದ್ದರು.
ಮನುಷ್ಯರಿಗೆ ನೀಡುವಂತೆ ಪೌಷ್ಟಿಕ ಆಹಾರ, ಒಣ ಹಣ್ಣುಗಳನ್ನು ತಿನ್ನಿಸಿ ನಾಗರಾಳೆ ಸಹೋದರರು ಟಗರು ಸಾಕಿದ್ದಾರೆ. ಟಗರಿಗೆ ಕಾದಾಟದ ತರಬೇತಿಯನ್ನೂ ನೀಡಿದ್ದಾರೆ.
'ಬೆಟ್ಟದ ಹುಲಿ' ಯಾವುದೇ ಕಾದಾಟದ ಪಂದ್ಯಾವಳಿಗಳಿಗೆ ಹೋದರು ಪದಕ ಗ್ಯಾರಂಟಿ. ಈ ಟಗರು ಗೆದ್ದಿರುವ ನೂರಾರು ಪದಕಗಳು ನಾಗರಾಳೆ ಸಹೋದರರ ಮನೆಯ ಗೋಡೆಗಳನ್ನು ಅಲಂಕರಿಸಿವೆ. ಪದಕಗಳ ಜೊತೆಗೆ ಭಾರಿ ಮೊತ್ತದ ನಗದನ್ನೂ ಗೆದ್ದು ಕೊಟ್ಟಿದೆ ಈ ಟಗರು.
ಕರ್ನಾಟಕ-ಮಹಾರಾಷ್ಟ್ರಗಳಲ್ಲಿ ಇಷ್ಟೊಂದು ಭಾರಿ ಮೊತ್ತಕ್ಕೆ ಬಿಕರಿಯಾದ ಟಗರು ಇನ್ನೋಂದಿಲ್ಲ. ಅತಿ ಹೆಚ್ಚೆಂದರೆ 2 ರಿಂದ 3 ಲಕ್ಷದವರೆಗೂ ಮಾರಾಟವಾಗುತ್ತವೆ, ಆದರೆ 5.10 ಲಕ್ಷಕ್ಕೆ ಟಗರೊಂದು ಮಾರಾಟವಾಗಿರುವುದು ಇದೇ ಮೊದಲು ಎನ್ನುತ್ತಾರೆ ನಾಗರಾಳೆ ಸಹೋದರರು.












Click it and Unblock the Notifications