ಬೆಳಗಾವಿ ವಿಮಾನ ನಿಲ್ದಾಣದ ಮರುನಾಮಕರಣಕ್ಕೆ ಎಂಪಿ ಈರಣ್ಣ ಕಡಾಡಿ ಒತ್ತಾಯ
ಬೆಳಗಾವಿ, ಡಿಸೆಂಬರ್ 11: ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಿತ್ತೂರು ರಾಣಿ ಚೆನ್ನಮ್ಮ 1824ರಲ್ಲಿ ಬ್ರಿಟೀಷರ ವಿರುದ್ಧ ಮೊದಲ ಯುದ್ಧ ಗೆದ್ದು 2024ಕ್ಕೆ 200ನೇ ವರ್ಷ. ಈ ವಿಜಯೋತ್ಸವವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಬೇಕು. ಮತ್ತು 200ನೇ ವಿಜಯೋತ್ಸವದ ಸವಿನೆನಪಿಗಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು ಹಾಗೂ ಚೆನ್ನಮ್ಮಾಜಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವಂತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನ ಭಾಗವಹಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಂತಹ ಹೋರಾಟಗಾರರಲ್ಲಿ ಕರ್ನಾಟಕದ ಮಹಿಳೆಯೊಬ್ಬರು 1824ರಲ್ಲೇ ಸೂರ್ಯ ಮುಳಗದ ಬ್ರಿಟಿಷ್ ಸಾಮ್ರಾಜ್ಯದ ಎದುರು ಯುದ್ಧ ನಡೆಸಿ ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ಹತ್ಯೆಗೈಯುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಅವರೇ ನಮ್ಮ ಕನ್ನಡ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ. ಅವರೇ ಸ್ವಾತಂತ್ರ್ಯ ಹೋರಾಟದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ ಎಂದರು.
ಚೆನ್ನಮ್ಮಾಜೀ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಜನ್ಮತಾಳಿದರು. ಚೆನ್ನಮ್ಮ, ಕಿತ್ತೂರಿನ ರಾಜ ಮಲ್ಲಸರ್ಜ ದೇಸಾಯಿಯನ್ನು ಮದುವೆಯಾಗಿದರು. ಪತಿಯ ಮರಣಾನಂತರ ಸಂಸ್ಥಾನದ ಪಟ್ಟಕ್ಕೆ ದತ್ತು ಪುತ್ರನನ್ನು ತೆಗೆದುಕೊಳ್ಳಲು ವಿರೋಧಿಸಿದ ಬ್ರಿಟೀಷರ ವಿರುದ್ಧ ಯುದ್ಧ ಸಾರಿದ ವೀರವನಿತೆ. ಈ ಯುದ್ಧದ ಸಮಯದಲ್ಲಿ ರಾಣಿ ಚೆನ್ನಮ್ಮನ ಸೈನಿಕರು ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬದವರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದು ಇತಿಹಾಸವೇ ಸರಿ. ತದನಂತರ ಬ್ರಿಟಿಷ್ರೊಂದಿಗಿನ ಮಾತುಕತೆಯ ಫಲವಾಗಿ ಆ ಅಧಿಕಾರಿಗಳನ್ನು ಹಾಗೂ ಅವರ ಕುಟುಂಬಗಳನ್ನು ಅತ್ಯಂತ ಗೌರವಯುತವಾಗಿ ಬಿಡುಗಡೆ ಮಾಡುವ ಮೂಲಕ ಕಿತ್ತೂರು ಸಂಸ್ಥಾನದ ಘನತೆಯನ್ನು ಎತ್ತಿಹಿಡಿದ್ದಿದ್ದಾರೆ ಎಂದು ಸಂಸದ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಯುದ್ಧದಲ್ಲಿ ಸೋಲಾದ ಹಿನ್ನಲೆಯಲ್ಲಿ ಆ ಸೋಲಿನ ಸೇಡು ತೀರಿಸಿಕೊಳ್ಳಲು ಬ್ರಿಟೀಷರು ಕಿತ್ತೂರಿನ ಮೇಲೆ ಪದೇ ಪದೇ ದಾಳಿ ಮಾಡುತ್ತಲೇ ಇದ್ದರು. ಒಂದು ಬಾರಿ 12 ದಿನಗಳ ಕಾಲ ಚೆನ್ನಮ್ಮ ಮತ್ತು ಕಿತ್ತೂರಿನ ಸೈನ್ಯ ತಮ್ಮ ಕೋಟೆಯನ್ನು ರಕ್ಷಿಸಲು ಬ್ರಿಟಿಷರೊಂದಿಗೆ ನಿರಂತರವಾಗಿ ಹೋರಾಡಿದರು. ಈ ಹೋರಾಟದಲ್ಲಿ ಬ್ರಿಟಿಷ್ ಸೈನ್ಯವು ರಾಣಿ ಚೆನ್ನಮ್ಮನನ್ನು ಕುತಂತ್ರದಿಂದ ಬಂಧಿಸುವಲ್ಲಿ ಯಶಸ್ವಿಯಾಯಿತು. ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧದ ಮೊದಲನೆಯ ಯುದ್ದದಲ್ಲಿ ಗೆದ್ದು, ಮತ್ತೊಂದು ಬಾರಿ ಯುದ್ಧದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರೂ ಕೂಡಾ ಬ್ರಿಟಿಷರ ವಿರುದ್ಧ ಹೋರಾಡಲು ಹೆದರುತ್ತಿದ್ದ ಆ ಕಾಲದಲ್ಲಿ ಒಬ್ಬ ಮಹಿಳೆಯೋರ್ವಳು ದಿಟ್ಟತನದಿಂದ ಹೋರಾಟ ಮಾಡಿರುವುದು ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಯಿತು ಎಂದು ಸಂಸದ ಸಂಸದ ಈರಣ್ಣ ಕಡಾಡಿ ಸಂಸತ್ತಿನಲ್ಲಿ ವಿವರಿಸಿದ್ದಾರೆ.












Click it and Unblock the Notifications