ಸರ್ಕಾರ, ಜಿಲ್ಲಾಡಳಿತ ಆದೇಶಕ್ಕೆ ಕ್ಯಾರೇ ಎನ್ನದ ಎಂಇಎಸ್: ಕರಾಳ ದಿನಾಚರಣೆಗೆ ಸಜ್ಜು
ಬೆಳಗಾವಿ, ಅಕ್ಟೋಬರ್ 21: ಬೆಳಗಾವಿಯಲ್ಲಿ ನವೆಂಬರ್ ತಿಂಗಳು ಬಂದರೆ ಸಾಕು ನಾಡದ್ರೋಹಿ ಎಂಇಎಸ್ ಪುಂಡರ ಅಟ್ಟಹಾಸ ಹೆಚ್ಚಾಗುತ್ತದೆ. ಪ್ರತಿ ವರ್ಷವೂ ಇಲ್ಲಿ ಇದೇ ಸಮಸ್ಯೆಯಾಗಿದ್ದು, ನಾಡದ್ರೋಹಿ ಎಂಇಎಸ್ ಪುಂಡರಿಗೆ ಎಷ್ಟೇ ಎಚ್ಚರಿಕೆ ಕೊಟ್ಟರೂ ಕೂಡ ಅವರ ಕ್ಯಾತೆಯನ್ನು ಮುಂದುವರಿಸಿದ್ದಾರೆ. ಈ ವರ್ಷವೂ ಕೂಡ ಎಂಇಎಸ್ ಸದಸ್ಯರು ಕನ್ನಡ ರಾಜ್ಯೋತ್ಸವದ ದಿನ ಪುಂಡಾಟ ಮೆರೆಯಲು ಸಜ್ಜಾಗುತ್ತಿದ್ದಾರೆ.
ಬೆಳಗಾವಿ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಎಂಇಎಸ್ ಕೆಲವು ಮುಖಂಡರು ಇತ್ತೀಚಿಗೆ ಮತ್ತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ನವೆಂಬರ್ 1ರಂದು ಕರಾಳ ದಿನಾಚರಣೆಗೆ ಆಚರಿಸುವ ಬಗ್ಗೆ ಚರ್ಚೆಯಾಗಿದೆ. ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ, ಕರಾಳ ದಿನಾಚರಿಸಿಯೇ ನಾವು ಸಿದ್ಧ ಎಂದು ಎಂಇಎಸ್ ಮುಖಂಡರು ನಿರ್ಧರಿಸಿದ್ದಾರೆ.

ನವೆಂಬರ್ ಒಂದರಂದು ಜಿಲ್ಲಾಡಳಿತ ಕರಾಳ ದಿನಾಚರಣೆಗೆ ಅನುಮತಿ ಕೊಡಲಿ, ಬಿಡಲಿ ಕರಾಳ ದಿನಾಚಾರಣೆಗೆ ಎಲ್ಲರೂ ಸಿದ್ಧತೆ ಮಾಡಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸುವಂತೆ ಎಂಇಎಸ್, ಜಿಲ್ಲಾಡಳಿತ ವಿರುದ್ಧ ಮತ್ತೇ ಹಳೆ ಚಾಳಿ ಮುಂದುವರೆಸಿದೆ.
ಬೆಳಗಾವಿಯಲ್ಲಿ ಪುಂಡ ಎಂಇಎಸ್ ನಾಯಕರು ನಡೆಸಿದ ಸಭೆಯಲ್ಲಿ ನವೆಂಬರ್ ಒಂದರಂದು ಕರಾಳ ದಿನಾಚಾರಣೆ ಆಚರಿಸುವ ನಿರ್ಣಯ ಕೈಗೊಂಡಿದೆ.
ಈ ಬಗ್ಗೆ ಎಂಇಎಸ್ ಮುಖಂಡ ಮನೋಹರ ಕಿಣೇಕರ ಮಾತನಾಡಿ, 'ಜಿಲ್ಲಾಡಳಿತ ಅನುಮತಿ ಕೊಡಲಿ, ಬಿಡಲಿ, ಕಳೆದ 1956ರಲ್ಲಿ ಕರ್ನಾಟಕದಲ್ಲಿ ಅನ್ಯಾಯವಾಗಿ ಗಡಿ ಗುರುತಿಸಲಾಯಿತು. ಅಂದಿನಿಂದ, ನವೆಂಬರ್ ಒಂದರಂದು ಕರಾಳ ದಿನವಾಗಿ ಆಚರಿಸಲಾಗುತ್ತದೆ. ಕರಾಳ ದಿನಾಚರಣೆಗೆ ಜಿಲ್ಲಾಡಳಿತದಿಂದ ಅಡಚಣೆ ಪ್ರತಿಬಾರಿಯೂ ಬರುತ್ತದೆ. ಈಗಲೂ ಹಾಗೆ ಆಗಿದೆ. ನಮ್ಮ ಕರಾಳ ದಿನಾಚಾರಣೆ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ' ಎಂದು ಸಭೆಯಲ್ಲಿ ಮಾತನಾಡಿದ್ದಾರೆ.
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವದ ದಿನವೇ ಕರಾಳ ದಿನಾಚಾರಣೆ ಆಚರಿಸುವ ಎಂಇಎಸ್ ಮುಖಂಡರ ನಿರ್ಣಯ ಕನ್ನಡಿಗರನ್ನು ಕೆರಳಿಸುವಂತೆ ಮಾಡಿದೆ. ಬೆಳಗಾವಿ ಜಿಲ್ಲಾಡಳಿತ ಕೂಡಲೇ ಎಂಇಎಸ್ ಪುಂಡರ ಉದ್ಧಟತನಕ್ಕೆ ಬ್ರೇಕ್ ಹಾಕಬೇಕು ಎನ್ನುವುದು ಸ್ಥಳೀಯ ಕನ್ನಡಿಗರ ಆಗ್ರಹವಾಗಿದೆ.












Click it and Unblock the Notifications