ಬೆಳಗಾವಿ; ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಬಸ್ ಸೇವೆ
ಬೆಳಗಾವಿ, ಸೆಪ್ಟೆಂಬರ್ 11; ಬೆಳಗಾವಿ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಿಹಿಸುದ್ದಿ. ಬೆಳಗಾವಿ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣ ಸಂಪರ್ಕಿಸಲು ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಬೆಳಗಾವಿಯ ಸಂಸದೆ ಮಂಗಲ ಸುರೇಶ್ ಅಂಗಡಿ ಈ ಕುರಿತು ಫೇಸ್‌ಬುಕ್‌ಪೋಸ್ಟ್ ಹಾಕಿದ್ದಾರೆ. ಕಳೆದ ತಿಂಗಳು ನಡೆ ಏರೋಡ್ರೋಮ್ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ, ವಿಮಾನ ವೇಳಾಪಟ್ಟಿಯ ಸಮಯದಲ್ಲಿ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಬಸ್‌ಗಾಗಿ ಬೇಡಿಕೆ; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಮಾನ ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳಿಗೆ ಬಸ್ ಸೌಲಭ್ಯವನ್ನು ಒದಗಿಸಿದೆ. ಆದರೆ ವಿಮಾನ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ನೇರ ಬಸ್ ಸೌಲಭ್ಯ ಇರಲಿಲ್ಲ, ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗಿತ್ತು.
ಬೆಳಗಾವಿ ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣಕ್ಕೆ ನೇರ ಬಸ್ ಬೇಕು ಎಂಬುದು ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಈಗ ಮನ್ನಣೆ ಸಿಕ್ಕಿದೆ. ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು ನಿಲ್ದಾಣದಲ್ಲೇ ಇರುವ ಬಸ್ ಮೂಲಕ ವಿಮಾನದ ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಲು ಅನುಕೂಲವಾಗಿದೆ.
ವಿಮಾನ ನಿಲ್ದಾಣ ಸಾಂಬ್ರಾದಲ್ಲಿದೆ ಇದು ಬೆಳಗಾವಿ ನಗರದಿಂದ ಸುಮಾರು 10 ಕಿ. ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದಿಂದ ನಗರಕ್ಕೆ ತಲುಪಲು ಬಸ್, ಕ್ಯಾಬ್ ಸೌಲಭ್ಯವಿದೆ. ರೈಲು ಮೂಲಕವೂ ಬೆಳಗಾವಿ ಉತ್ತಮ ಸಂಪರ್ಕ ಹೊಂದಿದೆ. ಅನೇಕ ರೈಲು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುತ್ತಾರೆ.
ಬೆಳಗಾವಿ ರಾಜ್ಯದ ಅತ್ಯಂತ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದು. 2022ರಲ್ಲಿ ಈ ವಿಮಾನ ನಿಲ್ದಾಣ ರಾಜ್ಯದ ಅತಿ ದಟ್ಟಣೆಯ ವಿಮಾನ ನಿಲ್ದಾಣದಲ್ಲಿ 3ನೇ ಸ್ಥಾನದಲ್ಲಿತ್ತು. ಬೆಳಗಾವಿಯಿಂದ ನವದೆಹಲಿಗೆ ನೇರ ವಿಮಾನವಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಕ್ಕೆ ವಿಮಾನಗಳು ಸಂಚಾರ ನಡೆಸುತ್ತವೆ.
ಈ ವಿಮಾನ ಕರ್ನಾಟಕದ ಮಾತ್ರವಲ್ಲ ಕರ್ನಾಟಕ, ಮಹಾರಾಷ್ಟ್ರ ಗಡಿಯಲ್ಲಿ ಬೆಳಗಾವಿ ಇರುವುದಿರಂದ ಗೋವಾ ಮತ್ತು ಮಹಾರಾಷ್ಟ್ರದ ಜನರು ಸಹ ವಿಮಾನ ನಿಲ್ದಾಣ ಬಳಕೆ ಮಾಡುತ್ತಾರೆ. ಆದ್ದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿದೆ.
ವಿಮಾನ ನಿಲ್ದಾಣ ವಿಸ್ತರಣೆ; ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರ ಬೆಳಗಾವಿಯ ಜನರಿಗೆ ಸಿಹಿಸುದ್ದಿ ನೀಡಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬೆಳಗಾವಿ ವಿಮಾನ ನಿಲ್ದಾಣದ ನವೀಕರಣಕ್ಕೆ 230 ಕೋಟಿ ಯೋಜನಾ ವರದಿ ತಯಾರು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಪ್ರಯಾಣಿಕರ ಟರ್ಮಿನಲ್ ಕಟ್ಟಡ ವಿಸ್ತರಣೆ, ಮೂರು ಏರೋ ಬ್ರಿಡ್ಜ್‌ಗಳು ಹಾಗೂ ಏರೋ ಕ್ರಾಫ್ಟ್ ನಿಲ್ದಾಣ, ವಾಹನ ಪಾರ್ಕಿಂಗ್ ಸೇರಿದಂತೆ ಹಲವು ಸೌಕರ್ಯಗಳನ್ನು ವಿಮಾನ ನಿಲ್ದಾಣದ ವಿಸ್ತರಣಾ ಯೋಜನೆ ಒಳಗೊಂಡಿದೆ. ಕಾಮಗಾರಿ ಆರಂಭವಾದ ಬಳಿಕ 36 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಬೆಳಗಾವಿ ವಿಮಾನ ನಿಲ್ದಾಣ ಪ್ರಯಾಣಿಕರು ಮಾತ್ರವಲ್ಲ ಕಾರ್ಗೋ ಸೇವೆಗೆ ಸಹ ಸರಿಯಾಗಿ ಬಳಕೆಯಾಗಬೇಕಿದೆ. ಜಿಲ್ಲೆಯಲ್ಲಿ ಅನೇಕ ಸಣ್ಣ, ಮಧ್ಯಮ ಕೈಗಾರಿಕೆಗಳಿವೆ. ಇಲ್ಲಿ ಉತ್ಪಾದನೆಯಾಗುವ ವಾಹನದ ಬಿಡಿ ಭಾಗಗಳು, ಹೈಡ್ರಾಲಿಕ್ಸ್ ಮತ್ತು ಕಾಸ್ಟಿಂಗ್ ಉತ್ಪಾದನೆಗಳು ಹೊರ ರಾಜ್ಯ, ದೇಶಕ್ಕೆ ರಫ್ತಾಗುತ್ತವೆ. ವಿಮಾನದ ಮೂಲಕ ಸಾಗಾಟ ಆರಂಭವಾದರೆ ಕಾರ್ಗೋ ಸೇವೆಯೂ ಜನಪ್ರಿಯವಾಗಲಿದೆ.












Click it and Unblock the Notifications