ಗೋವಾದಲ್ಲಿ ಜೆಡಿಎಸ್ ನಾಯಕರ ಸಂಧಾನ ಸಭೆ!
ಬೆಳಗಾವಿ, ಡಿ. 6 : ಕರ್ನಾಟಕದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಅತ್ತ ಕಾಂಗ್ರೆಸ ಇತ್ತ ಜೆಡಿಎಸ್ ಎನ್ನುತ್ತಿರುವ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನವೊಲಿಕೆ ಯತ್ನದ ಕಾರ್ಯಕ್ಕೆ ಗೋವಾದಲ್ಲಿ ನಡೆಯಲಿದೆ. ಜಮೀರ್ ಅವರೊಂದಿಗೆ ಕೆಲವು ಜೆಡಿಎಸ್ ನಾಯಕರು ಗುರುವಾರ ರಾತ್ರಿಯೇ ಗೋವಾಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮುನಿಸಿಕೊಂಡು ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಸರಿಯುತ್ತಿರುವ ಶಾಸಕ ಜಮೀರ್ ಅಹಮದ್ ಅವರ ಮನವೊಲಿಕೆಯ ಪ್ರಯತ್ನಕ್ಕೆ ಗೋವಾದ ರೆಸಾರ್ಟ್ ನಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಬೆಳಗಾವಿಯ ಅಧಿವೇಶನದಲ್ಲಿ ಪಾಲ್ಗೊಂಡಿರುವ ಜೆಡಿಎಸ್ ಶಾಸಕರು ಗೋವಾಕ್ಕೆ ತೆರಳಲಿದ್ದು, ಸಂಧಾನ ಮುಗಿಸಿಕೊಂಡು ಬೆಂಗಳೂರಿಗೆ ಮರಳಲಿದ್ದಾರೆ.

ಗುರುವಾರದ ವಿಧಾನಸಭೆ ಅಧಿವೇಶನ ಅಂತ್ಯಗೊಂಡ ಬಳಿಕ, ಜಮೀರ್ ಅಹಮದ್ ಅವರೊಂದಿಗೆ ಶಾಸಕರಾದ ಎನ್.ಚೆಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಗೋವಾಕ್ಕೆ ತೆರಳಿದ್ದಾರೆ. ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಮಧ್ಯಾಹ್ನ ಎಚ್.ಡಿ.ಕುಮಾರಸ್ವಾಮಿ ಕೆಲವು ನಾಯಕರೊಂದಿಗೆ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. (ಗರಿಗೆದರಿದ ರಾಜಕೀಯ ಚಟುವಟಿಕೆಗಳು!)
ಗೋವಾದ ರೆಸಾರ್ಟ್‌ವೊಂದರಲ್ಲಿ ಕುಮಾರಸ್ವಾಮಿ ಹಾಗೂ ಜಮೀರ್ ನಡುವೆ ಮಾತುಕತೆ ನಡೆಸಲು ಚೆಲುವರಾಯಸ್ವಾಮಿ ನಿರ್ಧರಿಸಿದ್ದಾರೆ. ಕುಮಾರಸ್ವಾಮಿ ಜೊತೆ ಮುನಿಸಿಕೊಂಡು ಜೆಡಿಎಸ್ ಚಟುವಟಿಕೆಗಳಿಂದ ದೂರವಿರುವ ಜಮೀರ್ ಕಾಂಗ್ರೆಸ್ ಪಾಳದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಜಮೀರ್ ಮನವೊಲಿಕೆ ಯತ್ನಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. (ಕಾಂಗ್ರೆಸ್ ಕಾರ್ಯಕಾರಣಿಯಲ್ಲಿ ಜಮೀರ್ )
ಸಂಧಾನವೇಕೆ : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಸಂಧಾನ ಕಾರ್ಯ ನಡೆಯುತ್ತಿದೆ. ಪಕ್ಷದಲ್ಲೇ ಅಸಮಾಧಾನವಿದ್ದರೆ ಅದು ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಜಮೀರ್ ಮನವೊಲಿಸಿ ಅವರನ್ನು ಪಕ್ಷದ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸುವುದು ಈ ಸಂಧಾನ ಸಭೆಯ ಪ್ರಮುಖ ಉದ್ದೇಶವಾಗಿದೆ.
ವಿಧಾನಸಭೆ ಚುನಾವಣೆ ಬಳಿಕ ಜಮೀರ್ ಕುಮಾರಸ್ವಾಮಿ ಅವರ ಜೊತೆ ಮುನಿಸಿಕೊಂಡಿದ್ದರು. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಪ್ರಚಾರದಿಂದ ಜಮೀರ್ ದೂರ ಉಳಿದಿದ್ದರು. ನಂತರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲೂ ಜಮೀರ್ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಸಂಧಾನ ಸಭೆ ನಡೆಸಿ ಅಸಮಾಧಾನ ಶಮನಗೊಳಿಸುವ ಪ್ರಯತ್ನ ಆರಂಭವಾಗಿದೆ.
ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಜತೆ ಜಮೀರ್ ಕಾಣಿಸಿಕೊಂಡಿದ್ದರು. ಆದ್ದರಿಂದ ಅವರ ಅಸಮಾಧಾನ ತಣಿಸಿ, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಅವರನ್ನು ಸಕ್ರಿಯಗೊಳಿಸಲು ಸಭೆ ಆಯೋಜಿಸಲಾಗಿದೆ.


Click it and Unblock the Notifications
