Breaking: ನವೆಂಬರ್ 1 ರಂದೇ ಕರಾಳ ದಿನ ಆಚರಣೆಗೆ ಕರೆ ಕೊಟ್ಟ ಎಂಇಎಸ್
ಬೆಳಗಾವಿ, ಅಕ್ಟೋಬರ್ 27: ನವೆಂಬರ್ 1 ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ರಾಜ್ಯಾದ್ಯಂತ ವಿನೂತನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡ ಮುಂದಾಗಿದ್ದು, ಕೋಟಿ ಕಂಠ ಗಾಯನಕ್ಕೆ ಸಜ್ಜಾಗಿದೆ.
ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಿದ್ಧತೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ ನಾಡದ್ರೋಹಿ ಎಂಇಎಸ್ ಮತ್ತೆ ತನ್ನ ಬುದ್ಧಿ ತೋರಿಸುತ್ತಿದೆ. ಬೆಳಗಾವಿಯಲ್ಲಿ ಮತ್ತೆ ಗಡಿ ಖ್ಯಾತೆ ತೆಗೆದಿರುವ ಎಂಇಎಸ್ ಪುಂಡರು, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಎಂಇಎಸ್ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ.
ಈ ಬಾರಿ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ನಡೆಸಲು ಸಿದ್ಧತೆ ಜೋರಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಕನ್ನಡ ಪ್ರೇಮಿಗಳು ಬೆಳಗಾವಿಯ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಈ ಮಧ್ಯೆಯೇ ನಾಡದ್ರೋಹಿ ಎಂಇಎಸ್ ತನ್ನ ಕುತಂತ್ರ ಬುದ್ಧಿ ತೋರಿಸುತ್ತಿದ್ದು, ನವೆಂಬರ್ 1ರಂದು ಕರಾಳ ದಿನ ಆಚರಿಸಲು ಕರೆ ಕೊಟ್ಟಿದೆ. ಕರಾಳ ದಿನಾಚರಣೆ ಆಚರಣೆಯ ಬಗ್ಗೆ ನಾಡದ್ರೋಹಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿ ಪ್ರಚೋದಿಸುತ್ತಿದ್ದಾರೆ.

ಚಳಿಗಾಲದ ಅಧಿವೇಶನದ ಸಮಯದಲ್ಲಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ನಾಡದ್ರೋಹಿ ಎಂಇಎಸ್ ಪುಂಡರು ಪ್ರತಿ ಬಾರಿ ಖ್ಯಾತೆ ತೆಗೆಯುತ್ತಿದ್ದಾರೆ. ಅದೇ ರೀತಿ ಈ ಬಾರಿಯೂ ಎಂಇಎಸ್ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ನಡೆಯಲು ಸಿದ್ಧತೆ ಹಾಗೂ ನವೆಂಬರ್ 1 ರಂದು ಎಂಇಎಸ್‍ನಿಂದ ಕರಾಳ ದಿನಕ್ಕೆ ನಡೆಸಲು ಉದ್ದೇಶಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಲಾಗಿದೆ.












Click it and Unblock the Notifications