ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಬಂಧನ ಪ್ರಕರಣ: ತನಿಖೆಗೆ ಆದೇಶ
ಬೆಳಗಾವಿ, ಏಪ್ರಿಲ್ 28: ಮಾಸ್ಕ ಹಾಕಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ CoBRA ವಿಭಾಗದ ಕಮಾಂಡೋ ಸಚಿನ್ ಸಾವಂತ್ ನನ್ನು ಬಂಧಿಸಿ ಕೈಗೆ ಕೋಳ ಹಾಕಿ ಅಪರಾಧಿಯಂತೆ ನಡೆಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.
ಬೆಳಗಾವಿ ವಲಯ ಐಜಿಪಿ ರಾಘವೇಂದ್ರ ಸುಹಾಸ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಬೈಕ್ ತೊಳೆಯುತ್ತಿದ್ದ ವೇಳೆ ಕೇವಲ ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಸಚಿನ್ ಸಾವಂತ್ ಅವರನ್ನು ಬಂಧಿಸಿದ ಸದಲಗಾ ಪೊಲೀಸರು ಅವರ ಕೈಗೆ ಬೇಡಿ ಹಾಕಿ, ಸರಪಳಿ ಹಾಕಿ ಅಮಾನುಷವಾಗಿ ವರ್ತಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಸಿಆರ್ಪಿಎಫ್ನ ಕೋಬ್ರಾ ಕಮಾಂಡೋ ಎಂದು ತಿಳಿದರೂ ಪೊಲೀಸರು ಈ ರೀತಿ ಮಾಡಿದ್ದಾರೆ. ಈ ಘಟನೆಯಿಂದ ಸಿಆರ್ಪಿಎಫ್ನ ಘನತೆಗೆ ಕುಂದುಂಟಾಗಿದೆ. ತಮ್ಮ ಕಮಾಂಡೋ ಮೇಲೆ ಕ್ರಮ ಕೈಗೊಳ್ಳುವ ಮುನ್ನ ಸಿಆರ್ಪಿಎಫ್ನ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಬೇಕಿತ್ತು. ಈ ಘಟನೆಯ ಕೂಲಂಕಷ ತನಿಖೆ ನಡೆದು ನಿಜಾಂಶ ಬೆಳಕಿಗೆ ಬರಬೇಕು ಎಂದು ನಿನ್ನೆ ಸಿಆರ್ಪಿಎಫ್ನ ಅಧಿಕಾರಿಯೊಬ್ಬರು ರಾಜ್ಯ ಪೊಲೀಸ್ ಡಿಜಿಪಿಗೆ ಪತ್ರ ಬರೆದಿದ್ದರು. ಇದೀಗ ತನಿಖೆಗೆ ಆದೇಶಿಸಲಾಗಿದೆ.












Click it and Unblock the Notifications