ಕೇವಲ 50 ದಿನಗಳಲ್ಲಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮನ ಹುಂಡಿಗೆ ಹರಿದುಬಂತು ಕೋಟಿ..ಕೋಟಿ ಹಣ
ಬೆಳಗಾವಿ, ಜುಲೈ, 26: ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 50 ದಿನಗಳ ಅಂತರದಲ್ಲಿ ಬರೋಬ್ಬರಿ 1.96 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಕಾಣಿಕೆ ಎಣಿಕೆ ಕಾರ್ಯ ಬುಧುವಾರ ರಾತ್ರಿ ಮುಕ್ತಾಯವಾಗಿದ್ದು, ಕೇವಲ 50 ದಿನಗಳ ಅಂತರದಲ್ಲಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ 1.96 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಅದರಲ್ಲಿ ₹1.71 ಕೋಟಿ ನಗದು, ₹20.44 ಲಕ್ಷ ಮೌಲ್ಯದ ಚಿನ್ನಾಭರಣ, ₹4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಸರ್ಕಾರ ಶಕ್ತಿಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಾಗಿನಿಂದ ದೇವಸ್ಥಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ಯಲ್ಲಮ್ಮನ ಗುಡ್ಡಕ್ಕೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತಾದಿಗಳು ಬಂದಿದ್ದರಿಂದ ಹುಂಡಿಯಲ್ಲಿ ಇಷ್ಟು ಹಣ ಸಂಹ್ರವಾಗಲು ಕಾರಣ ಎಂದು ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ್ ಮಾಹಿತಿ ನೀಡಿದ್ದಾರೆ.
2.58 ಕೋಟಿ ರೂಪಾಯಿ ಸಂಗ್ರಹ: ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, ಈ ಬಾರಿ ಕೇವಲ 30 ದಿನಗಳ ಅವಧಿಯಲ್ಲಿ 2.58 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಯಾವೆಲ್ಲ ಮೂಲಗಳಿಂದ ಬಂದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿರವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ನಡೆಯಿತು.
ಈ ಬಾರಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇದ್ದಿದ್ದರಿಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಅಲ್ಲದೆ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಇದರಿಂದ ಹರಕೆಯ ರೂಪದಲ್ಲಿ 2,58,44,097 ನಗದು 93 ಗ್ರಾಂ ಚಿನ್ನ ಹಾಗೂ 3.350 ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಇದಲ್ಲದೆ, ಸೌದಿ ಅರೇಬಿಯಾ, ಜಪಾನ್, ನೇಪಾಳ, ಕತಾರ್ ದೇಶದ 4 ವಿದೇಶಿ ನೋಟುಗಳು, ಚಲಾವಣೆಯಲ್ಲಿ ಇಲ್ಲದ 2,000 ರೂಪಾಯಿ ಮುಖಬೆಲೆಯ 25 ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿದೆ. ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.












Click it and Unblock the Notifications