Belagavi Train: ಹಳಿ ತಪ್ಪಿದ ಬೆಳಗಾವಿ-ಹುಬ್ಬಳ್ಳಿ ರೈಲಿನ 3 ರೈಲು ಬೋಗಿಗಳು
ಬೆಳಗಾವಿ, ಏಪ್ರಿಲ್ 15: ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ಮೂರು ಬೋಗಿಗಳು ಹಳಿ ತಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಈ ಗೂಡ್ಸ್ ರೈಲಿನಲ್ಲಿ ಯಾವುದೇ ಸರಕು ಇರಲಿಲ್ಲ ಎಂದು ತಿಳಿದು ಬಂದಿದೆ. ಬೆಳಗಾವಿ ರೈಲ್ವೆ ನಿಲ್ದಾಣದಿಂದ ಸಂಚಾರ ಆರಂಭಿಸುತ್ತಿದ್ದಂತೆಯೇ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕೂಡಲೇ ಪೊಲೀಸರು, ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಳಗಾವಿ ರೈಲು ನಿಲ್ದಾಣದ ಬಳಿಯ ಮಿಲಿಟರಿ ಮಹಾದೇವ್ ಬಳಿ ಸರಕು ರೈಲಿನ ಖಾಲಿ ವ್ಯಾಗನ್ ಹಳಿ ತಪ್ಪಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಯಾಕೆ ಹೀಗಾಯ್ತು, ರೈಲಿನಲ್ಲಿ ಆದ ಸಮಸ್ಯೆ ಏನು? ಹಳಿಗಳ ಜೋಡಣೆಯಲ್ಲಿ ಏನಾದರೂ ಸಮಸ್ಯೆ ಆಗಿದೆಯಾ? ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಬೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವವರಿಗೆ ಈ ಭಾಗದ ರೈಲು ಸಂಚಾರ ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಈ ಸಂಬಂಧ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ತಿಳಿಸಬೇಕಿದೆ.

ಇಂದು ಬೆಳಗ್ಗೆ 8.55 ಗಂಟೆಗೆ ಈ ಘಟನೆ ಸಂಭವಿಸಿದ್ದು, ಈ ಭಾಗದ ಎರಡು ಬದಿಯ ಎರಡೂ ಮಾರ್ಗಗಳು ಸ್ಥಗಿತಗೊಂಡಿವೆ. ಬೆಂಗಳೂರಿನಿಂದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ಹೋಗುವ ಬರುವ ರೈಲುಗಳ ಸಂಖ್ಯೆ ನಿತ್ಯವು ಹೆಚ್ಚಿರುತ್ತದೆ. ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿವೆ. ಸದ್ಯ ಘಟನೆ ನಡೆದ ಸ್ಥಳದಲ್ಲಿ ಬೋಗಿಗಳನ್ನು ಬೇರೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ರಾಣಿ ಚನ್ನಮ್ಮ ರೈಲು ನಿಲುಗಡೆ: ನಾಲ್ಕೈದು ತಾಸು ಸಂಚಾರ ವ್ಯತ್ಯಯ
ಇದೇ ಮಾರ್ಗವಾಗಿ ರಾಣಿ ಚನ್ನಮ್ಮ ರೈಲು ಸಂಚಾರ ಮಾಡುವುದರಲ್ಲಿತ್ತು. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ಅದೃಷ್ಟವಶಾತ್ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.
ರಾಣಿ ಚೆನ್ನಮ್ಮ ರೈಲು ಮಾತ್ರವಲ್ಲದೇ ಮುಂಬೈ-ಹುಬ್ಬಳ್ಳಿ-ದಾದರ್ ಎಕ್ಸ್ಪ್ರೆಸ್ ರೈಲು, ಮುಂಬೈ-ಬೆಂಗಳೂರು ಚಾಲುಕ್ಯ ಎಕ್ಸ್ಪ್ರೆಸ್ ರೈಲು, ಗೋವಾ-ಮಿರಜ್ ಪ್ಯಾಸೆಂಜರ್ ರೈಲು ಹಾಗೂ ಬೆಳಗಾವಿ- ಬೆಂಗಳೂರು - ಮೈಸೂರು ರೈಲುಗಳು ಬೆಳಗ್ಗೆ ಇದೇ ಸಮಯದಲ್ಲಿ ಓಡಾಡಬೇಕಿತ್ತು. ಈ ಗೂಡ್ಸ್ ರೈಲಿನ ಬೋಗಿ ಹಳಿ ತಪ್ಪಿದ್ದರಿಂದ ಪ್ರಯಾಣಿಕರ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಯಿತು ಎಂದು ರೈಲ್ವೆ ಮೂಲಗಳು ತಿಳಿಸಿವೆ.












Click it and Unblock the Notifications