ಸಿದ್ದರಾಮಯ್ಯ ಹೇಳಿಕೆಗೆ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ
ಬೆಳಗಾವಿ, ಡಿಸೆಂಬರ್ 18: " ಸಿದ್ದರಾಮಯ್ಯ ಅವರ ನೋವಿನ ಹೇಳಿಕೆಯನ್ನು ನನಗೆ ಕೆಲವರು ತಿಳಿಸಿದ್ದಾರೆ. ಅವರು ಹಿರಿಯ ರಾಜಕಾರಣಿ, ಶಾಸಕಾಂಗ ಪಕ್ಷದ ನಾಯಕರು, ಮಾಜಿ ಸಿಎಂ. ಎಂಥವರಿಗಾಗಲಿ ಚೆನ್ನಾಗಿ ಕೆಲಸ ಮಾಡಿ ಸೋತಾಗ ನೋವಾಗುತ್ತದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಶುಕ್ರವಾರ ಮಾತನಾಡಿದ ಡಿ. ಕೆ. ಶಿವಕುಮಾರ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಕಾಂಗ್ರೆಸ್‌ನವರು ಕಾರಣ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. "ಸಿದ್ದರಾಮಯ್ಯ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ" ಎಂದರು.
"ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಆ ಕ್ಷೇತ್ರ ಪುನರ್ಜನ್ಮ ಕೊಟ್ಟಿದೆ. ಚಾಮುಂಡೇಶ್ವರಿಯಲ್ಲಿ ಅಷ್ಟು ಅಂತರದಿಂದ ಸೋಲುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಸಿದ್ದರಾಮಯ್ಯರವರ ಕರ್ಮಭೂಮಿ, ಜನ್ಮಭೂಮಿ ಎರಡೂ ಕೂಡ ಅದೇ. ಯಾವ ನಿಟ್ಟಿನಲ್ಲಿ ಅವರು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.

"ಸಿದ್ದರಾಮಯ್ಯ ಅವರಯ ಕ್ಷೇತ್ರದ ಜನರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಅವರು ಮಾಡಿದ್ದ ಕಾರ್ಯಕ್ಕೆ ಗೆಲ್ಲಲೇಬೇಕಿತ್ತು. ಸಿದ್ದರಾಮಯ್ಯ ನಾಯಕತ್ವದಲ್ಲಿ ಚುನಾವಣೆ ಎದುರಿಸಿದವರು ನಾವು. ಸಿದ್ದರಾಮಯ್ಯರವರೇ ನಾಯಕರಾಗಬೇಕು ಅಂತಾ ಇಚ್ಛೆ ಪಟ್ಟಂತವರು" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
2ನೇ ಬಾರಿ ಸಿಎಂ ಆಗಬೇಕಿತ್ತು: ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗುವುದು ನಮ್ಮವರಿಗೇ ಬೇಡವಾಗಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್, "ಹೆಸರು ಹೇಳಿದರೆ ಹೇಳಬಹುದು, ಸಾಮಾನ್ಯವಾಗಿ ಹೇಳಿದರೆ ನಾವು ಏನು ಕೇಳುವುದಕ್ಕೆ ಆಗುತ್ತದೆ. ನಮಗಂತೂ ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಲಿ ಅಂತಾ ಇತ್ತು. ಹುಣಸೂರಲ್ಲಿ ನಾನೇ ಈ ಕುರಿತು ಭಾಷಣ ಮಾಡಿದ್ದೆ. ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಸಂಪೂರ್ಣ ಆಶೀರ್ವಾದ ಮಾಡಿದ್ದರು" ಎಂದರು.
"ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದೇ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವುದಕ್ಕೆ ಅವಕಾಶ ನೀಡಲಾಯಿತು. ಪಕ್ಷದಲ್ಲಿ ಎಸ್. ಎಂ. ಕೃಷ್ಣ ಅವರಿಗೆ ಎರಡು ಕ್ಷೇತ್ರದಲ್ಲಿ ನಿಲ್ಲೋಕೆ ಬಿಟ್ಟಿರಲಿಲ್ಲ. ಒಂದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕಾಯಿತು ಅಂತಾ ಘಟನೆಗಳು ಇವೆ" ಎಂದು ತಿಳಿಸಿದರು.
"ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ. ಯಾರಿಂದ ಸೋಲು ಉಂಟಾಯಿತು ಎಂದು ಅವರೇ ಹುಡುಕುತ್ತಾರೆ. ಕರ್ಮಭೂಮಿಯಲ್ಲಿ ಯಾರಿಗೆ ಸಹಾಯ ಮಾಡಿರುತ್ತೇವೋ ಅವರಿಂದ ತೊಂದರೆ ಆದಾಗ ನೋವಾಗುತ್ತದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.












Click it and Unblock the Notifications