ಕೊನೆಯ ದಿನದ ಕಲಾಪ, ಎಲ್ಲರ ಚಿತ್ತ ಮನೆಯತ್ತ!

ಬೆಳಗಾವಿ, ಡಿ. 6 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ.25ರಿಂದ ಆರಂಭಗೊಂಡಿದ್ದ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುಕ್ರವಾರ ಮುಕ್ತಾಯವಾಗಲಿದೆ. ಕೊನೆಯ ದಿನದ ಕಲಾಪ ಆರಂಭಗೊಂಡಿದೆ. ಶಾಸಕರು, ಅಧಿಕಾರಿಗಳು, ಪತ್ರಕರ್ತರು, ಪೊಲೀಸರು ಎಲ್ಲರ ಚಿತ್ತ ಮನೆಯತ್ತ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸದನದಲ್ಲಿ ಶಾಸಕರ ಹಾಜರಾತಿಯೂ ಕಡಿಮೆ ಇದೆ.

ಹತ್ತು ದಿನದ ಅಧಿವೇಶನ ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ತೃಪ್ತಿ ತಂದಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆದು, ಪರಿಹಾರ ಕಂಡುಕೊಳ್ಳುವ ಯತ್ನ ನಡೆದಿದೆ ಎಂದರು. (ಗುರುವಾರದ ಕಲಾಪಕ್ಕೆ ಸಿಎಂ, ಸಚಿವರು ಗೈರು)

Belgaum

ಮಂಡೇಲಾಗೆ ಸದನದಲ್ಲಿ ಸಂತಾಪ : ಜೋಹಾನ್ಸ್ ಬರ್ಗ್ ನಲ್ಲಿ ಶುಕ್ರವಾರ ಮುಂಜಾನೆ ನಿಧನರಾದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ ಸದನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಂತಾಪ ನಿರ್ಣಯ ಮಂಡಿಸಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ ಮಂಡೇಲಾ ಕೇವಲ ವ್ಯಕ್ತಿಯಲ್ಲ ಅವರು ವಿಶ್ವದ ಶಕ್ತಿ ಎಂದು ಬಣ್ಣಿಸಿದರು. (ಮಂಡೇಲಾ ನಿಧನ)

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಶಾಸಕ ಸಿ.ಟಿ.ರವಿ, ಕೆ.ಎಸ್.ಪುಟ್ಟಣ್ಣಯ್ಯ ಮುಂತಾದವರು ಸಂತಾಪ ನಿರ್ಣಯದ ಮೇಲೆ ಸದನದಲ್ಲಿ ಮಾತನಾಡಿದರು. ನಂತರ ಸದನದಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು. (ಬೆಳಗಾವಿ : ಶಾಸಕರ ಮೇಲ್ಯಾಕೆ ನೂರಾರು ಕೋಟಿ ಖರ್ಚು)

ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು : 2014ರ ನವೆಂಬರ್ 1 ರೊಳಗೆ ರಾಜ್ಯದ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರನ್ನು ಸರ್ಕಾರ ಒದಗಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ. ರಾಜ್ಯದ ಅನೇಕ ಗ್ರಾಮಗಳಲ್ಲಿ ಪ್ಲೊರೈಡ್ ಮಿಶ್ರಿತ ನೀರನ್ನು ಜನರು ಕುಡಿಯುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಎನ್‌ಆರ್‌ಡಿಡಬ್ಲ್ಯೂಪಿ ಯೋಜನೆಯಡಿ ಪ್ರತಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.

ರಾಜ್ಯಕ್ಕೆ ನೇರವಾಗಿ ಅನುದಾನ ನೀಡಿ : ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗೆ ನೇರವಾಗಿ ಹಣ ಕೊಡುವ ಬದಲು ಕನ್ನಡ ಭಾಷೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರಕ್ಕೆ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಿದ ನಂತರ ಕೇಂದ್ರ ಸರ್ಕಾರವು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಗೆ ಹಣ ನೀಡಿದೆ. ಆದರೆ, ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದರು. ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರದಿಂದ ನೇರವಾಗಿ ಹಣ ಪಡೆಯುತ್ತಿದೆ. ಅದೇ ರೀತಿ ನಮ್ಮ ಸರ್ಕಾರವು ಸಂಸ್ಥೆಗೆ ಹಣ ನೀಡುವ ಬದಲು ನೇರವಾಗಿ ರಾಜ್ಯಕ್ಕೆ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಾಹಿತಿಗಳು ಬರೆದದ್ದನ್ನು ಪಾಲಿಸುವುದಿಲ್ಲ : ಸಾಹಿತಿಗಳು ಬರೆಯುತ್ತಾರೆಯೇ ಹೊರತು ಅದನ್ನು ಪಾಲಿಸುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಧಾನಸಭೆಯಲ್ಲಿ ಹೇಳಿದ್ದಾರೆ. ವೈ.ಎಸ್.ವಿ.ದತ್ತ ಅವರು ನೆಲ್ಸನ್ ಮಂಡೇಲಾ ಅವರಿಗೆ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡುವ ವೇಳೆ, ಅನಂತಮೂರ್ತಿ ಅವರ ಬರವಣಿಗೆಯನ್ನು ಉಲ್ಲೇಖಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಗೋಡು ತಿಮ್ಮಪ್ಪ, ಸಾಹಿತಿಗಳು ಬರೆಯುತ್ತಾರೆ ಅಷ್ಟೆ. ಆದರೆ, ಅದನ್ನು ಪಾಲಿಸುವುದಿಲ್ಲ ಎಂದರು ಇದಕ್ಕೆ ವಿವಿಧ ಪಕ್ಷದ ಶಾಸಕರು ಸಮ್ಮತಿ ಸೂಚಿಸಿದರು.

ಅಧಿಕಾರಿಗಳಿಗೆ ಛೀಮಾರಿ ಹಾಕಲಾಗುವುದು : ಸರ್ಕಾರ ನೀಡಿದ ಆದೇಶಗಳನ್ನು ಸರಿಯಾಗಿ ಪಾಲಿಸದ ಅಧಿಕಾರಿಗಳನ್ನು ಸದನಕ್ಕೆ ಕರೆಸಿ, ಛೀಮಾರಿ ಹಾಕಲು ಹಿಂಜರಿಯುವುದಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದ್ದಾರೆ. ಪರಿಷತ್ತಿನ ಕಲಾಪದಲ್ಲಿ ಜೆಡಿಎಸ್ ನ ಬಸವರಾಜ ಹೊರಟ್ಟಿ, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿ ಶಿಕ್ಷಕರಿಗೆ ಗ್ರೇಡ್-1 ಹುದ್ದೆಯವರಿಗೆ ನೀಡುವ ವೇತನ ನಿಗದಿ ಮಾಡಿ ಎಂದು ಆದೇಶ ಹೊರಡಿಸಲಾಗಿದೆ. ಆದರೆ, ಅದು ಇನ್ನು ಜಾರಿಗೆ ಬಂದಿಲ್ಲ ಇದಕ್ಕೆ ಅಧಿಕಾರಿಗಳು ಕಾರಣ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಎಚ್.ಶಂಕರಮೂರ್ತಿ ಸರ್ಕಾರಿ ಆದೇಶ ಪಾಲಿಸದ ಅಧಿಕಾರಿಗಳಿಗೆ ಛೀಮಾರಿ ಹಾಕಬೇಕು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+