ಶೀಘ್ರದಲ್ಲೇ ಬೆಳಗಾವಿಗೆ ಅಂಬಾರಿ ಡಬಲ್ ಡೆಕ್ಕರ್ ಬಸ್: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಳಗಾವಿ, ನವೆಂಬರ್ 30: ಬೆಳಗಾವಿ ಜಿಲ್ಲೆಯ ಜನತೆಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು, ಶೀಘ್ರದಲ್ಲೇ ಅಂಬಾರಿ ಡಬಲ್ ಡೆಕ್ಕರ್ ಬಸ್ ಬೆಳಗಾವಿ ಜಿಲ್ಲೆಯಲ್ಲಿ ಪ್ರಯಾಣ ಆರಂಭಿಸಲಿದೆ. ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವವರು ಶೀಘ್ರದಲ್ಲೇ ಅಂಬಾರಿ ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯಲಿದ್ದಾರೆ.
ಪ್ರಸ್ತುತ ರಾಜ್ಯ ಪ್ರವಾಸೋದ್ಯಮ ಇಲಾಖೆಯಡಿ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವಿಶಿಷ್ಟ ಬಸ್‌ಗಳು ಬೆಳಗಾವಿಗೆ ತೆರಳಿದ್ದು, ಶೀಘ್ರದಲ್ಲೇ ಬೆಳಗಾವಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ವಿಶೇಷವಾಗಿ ರಚನೆ ಮಾಡಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್ ಬೆಳಗಾವಿಯಿಂದ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳವಾಗಿರುವ ಸೌಂದತ್ತಿ ರೇಣುಕಾ ಯಲ್ಲಮ್ಮ ಬೆಟ್ಟದ ಮಾರ್ಗದಲ್ಲಿ ಸಂಚರಿಸಲಿದೆ.

ಅಂಬಾರಿ ಡಬಲ್ ಡೆಕ್ಕರ್ ಬಸ್ ಬೆಳಗಾವಿ ಸಂಚಾರದ ಬಗ್ಗೆ ಅಗತ್ಯ ಪರಿಶೀಲನೆಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಮಾತ್ರ ಬಾಕಿ ಇದೆ. ಈ ಬಗ್ಗೆ ಡಿಸೆಂಬರ್ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಇನ್ನು ಚಳಿಗಾಲದ ಅಧಿವೇಶನದಲ್ಲಿ ಅಂಬಾರಿ ಬಸ್ಸು ಸುವರ್ಣ ಸೌಧ ಆವರಣದಲ್ಲಿ ನಿಲ್ಲಲಿದೆ.
ಅಂಬಾರಿ ಡಬಲ್ ಡೆಕ್ಕರ್ ಬಸ್ ಇತ್ತೀಚೆಗೆ ಬೆಳಗಾವಿಗೆ ಆಗಮಿಸಿದ್ದು, ಕೇಂದ್ರ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಂತಿದೆ. ಅಧಿಕೃತವಾಗಿ ಸೂಚನೆ ಹೊರ ಬಿದ್ದು, ಸಂಚಾರಕ್ಕೆ ಅವಕಾಶ ಸಿಕ್ಕಿ ಹಿರಿಯ ಅಧಿಕಾರಿಗಳು ಚಾಲನೆ ನೀಡಿದ ನಂತರ ಅಂಬಾರಿ ಬಸ್ ಬೆಳಗಾವಿಯಲ್ಲಿ ಸಂಚಾರ ಪ್ರಾರಂಭಿಸಲಿದೆ. ಇನ್ನು ಚಳಿಗಾಲದ ಅಧಿವೇಶನದಲ್ಲಿ ಸುವರ್ಣಸೌಧದ ಆವರಣದಲ್ಲೇ ಬಸ್ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಒಟ್ಟು ಆರು ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳ ಪೈಕಿ ಒಂದನ್ನು ಬೆಳಗಾವಿ ಮತ್ತು ಗದಗ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆರಂಭಿಸಿರುವ ಅಂಬಾರಿ ಡಬಲ್ ಡೆಕ್ಕರ್ ಪ್ರತಿ ಬಸ್‌ನಲ್ಲಿ 48 ಆಸನಗಳಿದ್ದು, ಕೆಳಗಿನ ಡೆಕ್ಕರ್‌ನಲ್ಲಿ 24 ಆಸನಗಳು ಹಾಗೂ ಮೇಲಿನ ಡೆಕ್ಕರ್‌ನಲ್ಲಿ 24 ಆಸನಗಳಿವೆ.
ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿದ ಆದ್ಯತೆ ನೀಡಲಾಗಿದ್ದು, ಬಸ್‌ನಾದ್ಯಂತ ಮುಖ್ಯವಾದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸುಮಾರು 19 ಅಡಿಗಳಷ್ಟು ಎತ್ತರವಿರುವ ಅಂಬಾರಿ ಬಸ್ ವಿನ್ಯಾಸವೇ ವಿಶೇಷವಾಗಿದೆ. ತನ್ನ ಆಕರ್ಷಕ ಲುಕ್‌ನಿಂದಲೇ ಈ ಬಸ್ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತದೆ. ಈವರೆಗೂ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್ ಆನಂದದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ.












Click it and Unblock the Notifications