Belagavi: ನಿಗೂಢ ಗುಂಡಿನ ದಾಳಿಯಿಂದ ಯುವಕ ಸಾವು..ಹೆಚ್ಚಿದ ಆತಂಕ
ಬೆಳಗಾವಿ, ನವೆಂಬರ್ 11: ಐತಿಹಾಸಿಕ ಹಲಸಿ ಮತ್ತು ಬೇಕವಾಡ ರಸ್ತೆಯ ನರಸೇವಾಡಿ ಸೇತುವೆ ಬಳಿ ಇಂದು(ನವೆಂಬರ್ 11) ಸೋಮವಾರ ಬೆಳಗಿನಜಾವ ಆಗುಂತಕರ ಗುಂಡಿನ ದಾಳಿಯಲ್ಲಿ ಯುವಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬೆಳಕಿಗೆ ಬಂದಿದೆ. ಹಲಸಿಯ ಯುವಕ ಅಲ್ತಾಫ ಗೌಸ್ ಮಕಾನದಾರ(27) ಎನ್ನುವ ಯುವಕನ ಮೇಲೆ ಗುಂಡಿನ ದಾಳಿ ನಡೆದಿದ್ದು, ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೆಳಗಿನಜಾವ ಸರಿಸುಮಾರು ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಅಲ್ತಾಫ ಗೌಸ್ ಮಕಾನದಾರ ಮೇಲೆ ಗುಂಡಿನ ದಾಳಿ ಮಾಡಿದವರು ಯಾರು..? ಯಾಕೆ ಮಾಡಿದ್ದಾರೆ ಎನ್ನುವ ನಿಖರ ಕಾರಣ ಈವರೆಗೂ ತಿಳಿದುಬಂದಿಲ್ಲ.

ಗುಂಡಿನ ದಾಳಿ ಹಾಗೂ ಯುವಕ ಸಾವು ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕೂಡಲೇ ಜಿಲ್ಲಾ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಹಲಸಿ ಖಾನಾಪುರದ ಬೇಕವಾಡಕ್ಕೆ ಹೋಗುವ ನರಸೇವಾಡಿ ಸೇತುವೆ ಬಳಿ ಪ್ರತಿದಿನ ಅಕ್ರಮವಾಗಿ ಮರಳು ಸಂಗ್ರಹಿಸಲು ಅಲ್ತಾಫ್ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಸ್ಥಳೀಯರು ಯುವಕನ ಶವವನ್ನು ಘಟನಾ ಸ್ಥಳದಿಂದ ಮನೆಗೆ ತಂದಿದ್ದಾರೆ. ಬಳಿಕ ಈ ಸುದ್ದಿ ಎಲ್ಲೆಡೆ ಹರಡಿದ್ದು, ಪೊಲೀಸರಿಗೂ ಕೂಡ ವಿಚಾರ ತಲುಪಿದೆ. ಕೂಡಲೇ ಬೈಲಹೊಂಗಲ ಡಿಎಸ್ಪಿ, ಖಾನಾಪುರ ಪೊಲೀಸ್ ಇನ್ಸ್ ಪೆಕ್ಟರ್ ಗುಂಡಿನ ದಾಳಿ ನಡೆದ ಪ್ರದೇಶದಲ್ಲಿ ಬಿಗಿ ಭದ್ರತೆಯಲ್ಲಿ ತಪಾಸಣೆ ನಡೆಸಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಡಿಎಸ್ಪಿ ರವಿ ನಾಯಕ್, ನಂದಗಡ ಹಾಗೂ ಖಾನಾಪುರ ಪೊಲೀಸ್ ನಿರೀಕ್ಷಕ ಎಸ್. ಸಿ. ಪಾಟೀಲ್ ಸದ್ಯ ಸ್ಥಳದಲ್ಲೇ ಠಿಕಾಣಿ ಹೂಡಿದ್ದು, ತನಿಖೆ ಮುಂದುವರಿಸಿದ್ದಾರೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications