ಗ್ರಾಮ ದೇವತೆಗೆ ಬೆಳ್ಳಿ ಕಿರೀಟ ತೊಡಿಸಿದ 'ಗೃಹಲಕ್ಷ್ಮಿ'
ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ಲಕ್ಷಾಂತರ ಮಹಿಳೆಯರ ಪಾಲಿಗೆ ದಾರಿದೀಪವಾಗಿರುವುದಕ್ಕೆ ನಿದರ್ಶನಗಳು ಸಾಕಷ್ಟಿವೆ. ಈ ಪೈಕಿ ಹಲವರ ಬದುಕಿಗೆ ಗೃಹಲಕ್ಷ್ಮಿ ಹಣ ಬೆಳಕು ನೀಡಿರುವುದೂ ಸತ್ಯ. ಮತ್ತೊಂದೆಡೆ ಗೃಹಲಕ್ಷ್ಮಿಯಿಂದಾಗಿ ಹಲವರ ಬದುಕಲ್ಲಿ ಬದಲಾವಣೆಗಳೂ ನಡೆದಿವೆ.
ಇಂತದ್ದೇ ಯಶೋಗಾಥೆ ಈಗ ಮತ್ತೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಕೂಡಿಟ್ಟು, ಗ್ರಾಮದೇವತೆಗೆ ಬೆಳ್ಳಿ ಕಿರೀಟ ಮಾಡಿಸಿ ತೊಡಿಸಿದ್ದಾರೆ.

ಜಿಲ್ಲೆಯ ಆಲಮೇಲ ತಾಲ್ಲೂಕಿನ ಹೂವಿನಹಳ್ಳಿಯ ಭಾಗಮ್ಮ ಬಿರಾದಾರ ಎನ್ನುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಗ್ರಾಮದೇವತೆಗೆ 250 ಗ್ರಾಂ ತೂಕದ ಬೆಳ್ಳಿ ಕಿರೀಟ ಅರ್ಪಿಸಿದ್ದಾರೆ. ಯೋಜನೆ ಆರಂಭವಾಗಿ ಒಂದು ವರ್ಷ ಕಳೆದಿದೆ. ಅಂದಿನಿಂದ ಇಂದಿನವರೆಗೆ ಬಂದ ಯೋಜನೆಯ ಹಣದಿಂದ ಕಿರೀಟ ತೊಡಿಸಿದ್ದಾರೆ.
ಇಂದು ಆಯುಧ ಪೂಜೆ ದಿನದೇ ದೇವಿಗೆ ಬೆಳ್ಳಿ ಕಿರೀಟ ಅರ್ಪಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರದಿಂದಾಗಿ ನಮಗೆ ಹಲವು ಉಪಯೋಗವಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಹಲವು ಕುಟುಂಬಗಳ ನಿರ್ವಹಣೆ ಸುಲಭವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೆ ನಾಡದೇವಿಯ ಆಶೀರ್ವಾದವಿರಲಿ. ಅವರ ಸೇವೆ ಇದೇ ರೀತಿ ಇರಲಿ ಎಂದಿದ್ದಾರೆ.
ಮಗನಿಗೆ ಬೈಕ್ ಕೊಡಿಸಿದ ತಾಯಿ: ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ಕೂಡ ಗೃಹಲಕ್ಷ್ಮಿ ಹಣದಿಂದ ತಮ್ಮ ಪುತ್ರನಿಗೆ ಬೈಕ್ ಕೊಡಿಸಿದ್ದಾರೆ. ಬೈಕ್‌ಗೆ ಡೌನ್‌ಪೇಮೆಂಟ್ ಅನ್ನು ಗೃಹಲಕ್ಷ್ಮಿ ಯೋಜನೆಯ ಹಣದಿಂದಲೇ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು, ತನ್ನ ಮಗನಾದ ರಮೇಶ ನೀಲಪ್ಪ ಸಣ್ಣಕ್ಕಿ ಯವರಿಗೆ ದ್ವಿಚಕ್ರ ವಾಹನ ಖರೀದಿಸಲು ಮುಂಗಡ ಹಣ ನೀಡಿರುವ ಸುದ್ದಿ ಕೇಳಿ ಮನಸ್ಸಿಗೆ ಖುಷಿ ತಂದಿದೆ ಎಂದು ಶ್ಲಾಘಿಸಿದ್ದಾರೆ.
ಗೃಹಲಕ್ಷಿ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಮಹಾನವಮಿ ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ತಾಯಿ-ಮಗನಿಗೆ ಮನಃಪೂರ್ವಕವಾಗಿ ಶುಭ ಕೋರುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಹಿಂದೆ ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಅವರು ಗೃಹಲಕ್ಷ್ಮಿ ಹಣದಿಂದ ಮುತ್ತೈದೆಯರಿಗೆ ಉಡಿ ತುಂಬಿ, ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಗೃಹಲಕ್ಷ್ಮಿ ಹಣದಲ್ಲಿ ಇಡೀ ಗ್ರಾಮಕ್ಕೆ ಹೋಳಿಗೆ ಊಟ ಹಾಕಿದ ಅಕ್ಕಾತಾಯಿ, ನಿಮ್ಮ ಆಶೀರ್ವಾದ ಹೀಗೆಯೇ ಇರಲಿ ಎಂದು ಆಶಿಸಿ, ನಮ್ಮ ಸರ್ಕಾರ ಇರುವವರೆಗೂ ಗೃಹಲಕ್ಷ್ಮಿ ಯೋಜನೆ ನಿಲ್ಲಲ್ಲ, ಪ್ರತೀ ತಿಂಗಳು ನಿಮ್ಮ ಮಡಿಲು ಸೇರುತ್ತಿರುತ್ತದೆ ಎಂದಿದ್ದರು.
ನಾಡಿಗೆ ಅನ್ನ ಕೊಡೋ ದೊರೆ ನಿನ್ನ ಕೈ ಮೇಲಾಗ್ಲಿ, ನಾಡ ಆಳುವ ದೊರೆ ನೀನು ದೇಶ ಆಳ್ಬೇಕು. ಹಿಂಗಾ ಆಳ್ಕೊತಾ ಹೋಗ್ತಾ ಇರ್ಬೇಕು. ನಾಡಿಗೆ ಒಳ್ಳೇದಾಗೈತ್ರಿ ಎಂದು ಅಕ್ಕಾತಾಯಿ ಲಂಗೂಟಿಯವರು ಸಿದ್ದರಾಮಯ್ಯ ಅವರನ್ನು ಹರಿಸಿದ್ದರು. ಇದೇ ಗೃಹಲಕ್ಷ್ಮಿ ಯಶೋಗಾಥೆಗೆ ಹಲವು ನಿದರ್ಶನಗಳಿವೆ.












Click it and Unblock the Notifications