ಬಿಜೆಪಿ ತೆಕ್ಕೆಗೆ ಬೆಳಗಾವಿ ಮಹಾನಗರ ಪಾಲಿಕೆ: ಪೌರ ಕಾರ್ಮಿಕ ಮಹಿಳೆಗೆ ಮೇಯರ್ ಪಟ್ಟ
ಬೆಳಗಾವಿ, ಫೆಬ್ರವರಿ 15: ಬೆಳಗಾವಿ ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ಮೇಯರ್ ಆಗಿ ಬಿಜೆಪಿಯ ಪೌರಕಾರ್ಮಿಕ ಮಹಿಳೆ ಸವಿತಾ ಕಾಂಬಳೆ ಹಾಗೂ ಉಪಮೇಯರಾಗಿ ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದರಿಂದ ಬಿಜೆಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಐದು ವರ್ಷದ ಬಳಿಕ ಪಾಲಿಕೆಯಲ್ಲಿ ಕನ್ನಡ ಭಾಷಿಕ ಸದಸ್ಯೆ ಮೇಯರ್ ಆಗಿರುವುದು ವಿಶೇಷವಾಗಿದೆ. 2018-19ರಲ್ಲಿ ಕನ್ನಡ ಭಾಷಿಕ ಬಸವರಾಜ ಚಿಕ್ಕಲದಿನ್ನಿ ಮೇಯರ್ ಆಗಿದ್ದರು.

ಎಸ್‌ಸಿ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಸವಿತಾ ಜಯಪಾಲ ಕಾಂಬಳೆ ಹಾಗೂ ಲಕ್ಷ್ಮಿ ರಾಠೋಡ್ ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಆನಂದ ಚವಾಣ, ಮಾಧವಿ ರಾಗೋಚೆ, ಜ್ಯೋತಿ ಕಡೋಲಕರ, ಶಾಮುಬಿ ಪಠಾಣ ನಾಮಪತ್ರ ತುಂಬಿದ್ದರು. ಬಿಜೆಪಿ ವರಿಷ್ಠರ ಸೂಚನೆಯಂತೆ ಲಕ್ಷ್ಮೀ ರಾಠೋಡ ನಾಮಪತ್ರ ಹಿಂಪಡೆದರು. ಹೀಗಾಗಿ ಮೇಯರ್ ಆಗಿ ಸವಿತಾ ಕಾಂಬಳೆ ಹಾಗೂ ಉಪಮೇಯರ್ ಆಗಿ ಆನಂದ ಚವಾಣ ಅವಿರೋಧ ಆಯ್ಕೆಯಾದರು.
ಪ್ರಾದೇಶಿಕ ಆಯುಕ್ತರಾದ ಎಸ್.ಬಿ. ಶೆಟ್ಟೆನ್ನವರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತೆ ರಾಜಶ್ರೀ ಜೈನಾಪುರೆ ಚುನಾವಣೆಯಲ್ಲಿ ಉಪಸ್ಥಿತರಿದ್ದರು.
ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿರುವ ಸವಿತಾ ಕಾಂಬಳೆ ಅವರು ಕೆಲ ವರ್ಷಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡಿದ್ದರು. ಬಳಿಕ ಊದುಬತ್ತಿ ತಯಾರಿಕಾ ಘಟಕ ಶುರು ಮಾಡಿದ್ದರು. ನಂತರ 2021ರಲ್ಲಿ ಬಂದ ಅವಕಾಶ ಬಳಸಿಕೊಂಡು ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದೀಗ ಸವಿತಾ ಕಾಂಬಳೆ ಬೆಳಗಾವಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ವ ಸಮ್ಮತದಲ್ಲಿ ಅಭ್ಯರ್ಥಿಗಳ ಆಯ್ಕೆ-ಮುರುಗೇಶ್ ನಿರಾಣಿ
ಬೆಳಗಾವಿ ಮೇಯರ್ ಉಪಮೇಯರ್ ಚುನಾವಣೆ ಬಳಿಕ ಮಾಜಿ ಸಚಿವ ಮುರುಗೇಶ್ ನಿರಾಣಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಹಿರಿಯರ ಒಪ್ಪಿಗೆ ಮೇರೆಗೆ ಬಿಜೆಪಿಯ ಇಬ್ಬರು ಸದಸ್ಯರು ಮೇಯರ್ ಉಪಮೇಯರ್ ಆಗಿದ್ದಾರೆ. ಅವಿರೋಧವಾಗಿ ಸವಿತಾ ಅವರು ಚುನಾಯಿತರಾಗಿದ್ದಾರೆ.
ಅತೀ ಹೆಚ್ಚು ಮತಗಳಿಂದ ಆನಂದ ಆಯ್ಕೆಯಾಗಿದ್ದಾರೆ. ಅವರಿಬ್ಬರಿಗೂ ನಾನು ಅಭಿನಂದನೆ ಅಲ್ಲಿಸುತ್ತೇನೆ. ಸರ್ವ ಸಮ್ಮತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಕೇಂದ್ರದಲ್ಲಿ ಮೂರನೇ ಬಾರಿಗೆ ಮೋದಿಯವರನ್ನು ಗೆಲ್ಲಿಸಲು ಬೆಳಗಾವಿ ಬೆಂಬಲ ಆಗಲಿದೆ ಎಂದರು.












Click it and Unblock the Notifications