ಬೆಳಗಾವಿಯಲ್ಲಿ ಗಣೇಶನಿಗೆ ಭಕ್ತರ ಅದ್ಧೂರಿ ವಿದಾಯ: ಈ ಬಾರಿಯೂ 30 ಗಂಟೆ ಮೆರವಣಿಗೆ ಸಾಧ್ಯತೆ
ಬೆಳಗಾವಿ, ಸೆಪ್ಟೆಂಬರ್ 17: ಬೆಳಗಾವಿ ನಗರದಲ್ಲಿ ಮಂಗಳವಾರ ರಾತ್ರಿ ಜನ ಸಾಗರವೇ ನೆರೆದಿತ್ತು. 11 ದಿನಗಳ ಕಾಲ ಪೂಜೆಗೊಂಡ ವಿನಾಯಕನಿಗೆ ವಿದಾಯ ಹೇಳುವ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಸೇರಿದ್ದರು. ಹೆಜ್ಜೆಹೆಜ್ಜೆಗೂ ಬೃಹತ್ ಮೂರ್ತಿಗಳ ಆಡಂಬರ. ಝಗಮಗಿಸುವ ವಿದ್ಯುದ್ದೀಪಗಳ ವೈಭೋಗ, ಹಾಡು, ಕುಣಿತ, ಸಂಗೀತ ವಾದಕರು ಸಡಗರ, ಯುವ ಹೃದಯಗಳ ಹುಮ್ಮಸ್ಸು ಮೆರವಣಿಗೆಗೆ ಇನ್ನಿಲ್ಲದ ಕಳೆ ತಂದಿತು.
ಬೆಳಗಾಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು. ದೇವಾ ಶ್ರೀಗಣೇಶ, ಗಣಪತಿ ಬಪ್ಪ ಮೋರಯಾ, ಪುಡಚಾ ವರ್ಷಿ ಲೋಕರಿಯಾ, ಜೈ ಭವಾನಿ, ಜೈ ಶಿವಾಜಿ ಮುಂತಾದ ಘೋಷಣೆಗಳು ನಿರಂತರ ಮೊಳಗಿದವು. ಪಟಾಕಿಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು.

ಒಂದಷ್ಟು ಮಂಡಳಿಗಳ ಸದಸ್ಯರು ಪ್ರಾರ್ಥನೆ, ನಾಮಾವಳಿಗಳನ್ನೇ ಹಾಡುತ್ತ, ಭಜನೆ ಮಾಡುತ್ತ ಹೆಜ್ಜೆ ಹಾಕಿದರು. ಗಣಪತಿ ಮೂರ್ತಿಯನ್ನು ಒಂದು ಟ್ರಯಾಕ್ಟರ್‌ನಲ್ಲಿ ಇಟ್ಟು, ಅದರ ಮುಂದೆ ಇನ್ನೊಂದು ಟ್ರ್ಯಾಕ್ಟರ್ ಭರ್ತಿ ಧ್ವನಿವರ್ಧಕಗಳನ್ನೇ ತುಂಬಿದ್ದರು.
ಮಹಾರಾಷ್ಟ್ರದಿಂದ ಬಂದ ಯುವತಿಯರ ನೃತ್ಯ, ಯುವತಿಯರದೇ ಡೋಲ್ ತಾಶಾ ತಂಡ, ಝಾಂಝ್ ಪಥಕ್, ಡೊಳ್ಳು ಮೇಳಗಳು, ಕೋಲಾಟದವರು, ವೇಷಗಾರರು, ಪೂರ್ಣಕುಂಭ ಹೊತ್ತವರು ಮೆರವಣಿಗೆಯ ವೈಭವ ಹೆಚ್ಚಿಸಿದರು.

30 ಗಂಟೆ ಬೃಹತ್ ಮೆರವಣಿಗೆ
ಈ ಬಾರಿಯೂ ನಗರದ ವಿವಿಧ ಬಡಾವಣೆಗಳಲ್ಲಿ 380ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ವರ್ಷ ಕೂಡ ಇಷ್ಟೇ ಮೂರ್ತಿಗಳಿದ್ದವು. ಆಗ ನಿರಂತರ 30 ಗಂಟೆ ಮೆರವಣಿಗೆ ನಡೆದಿತ್ತು. ಈ ಬಾರಿ ಕೂಡ ಬುಧವಾರ ರಾತ್ರಿಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ರಾಮಲಿಂಗಖಿಂಡ್ ಗಲ್ಲಿ ರಸ್ತೆ, ಟಿಳಕ ಚೌಕ, ಹೆಮು ಕಲಾನಿ ಚೌಕ್, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ವೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡದಲ್ಲಿ ಸಮಾಪನಗೊಂಡಿತು. ನಗರದ ನಾಲ್ಕೂ ದಿಕ್ಕುಗಳಿಂದ ವಾಹನ ಸಂಚಾರ ಮಾರ್ಗ ಬದಲಿಸಲಾಯಿತು. ಜನರು ಹತ್ತಾರು ಕಿ.ಮೀ ದೂರದವರೆಗೆ ನಡೆದುಕೊಂಡೇ ಬರಬೇಕಾಯಿತು.
ಪೊಲೀಸ್ ಬಿಗಿ ಬಂದೋಬಸ್ತ್
ಗಣೇಶ ವಿಗ್ರಹ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮನೆ- ಕಚೇರಿಗಳ ಸಿಸಿಟಿವಿ ಹೊರತಾಗಿ ಪೊಲೀಸ್ ಇಲಾಖೆ ವತಿಯಿಂದ 571 ಹೆಚ್ಚುವರಿ ಸಿಸಿಟಿವಿ ಹಾಗೂ ಡ್ರೋಣ್ ಕ್ಯಾಮರಾ ಬಳಸಲಾಗಿದೆ. ಎಸ್‌ಪಿ ಶ್ರೇಣಿಯ 7 ಅಧಿಕಾರಿಗಳು, 31 ಡಿವೈಎಸ್‌ಪಿ, 110 ಇನ್‌ಸ್ಪೆಕ್ಟರ್, 130 ಸಬ್ ಇನ್‌ಸ್ಪೆಕ್ಟರ್, 10 ಕೆಎಸ್‌ಆರ್‌ಪಿ ತುಕಡಿ, 8 ಸಿಎಆರ್ ತುಕಡಿ ಬಂದೋಬಸ್ತ್‌ಗಾಗಿ ನಿಯೋಜನೆ ಮಾಡಲಾಗಿದೆ.












Click it and Unblock the Notifications