ಅಕ್ಷಯ ತದಿಗೆ: ಫೇಸ್ಬುಕ್ ನಲ್ಲಿ ಕಂಡ ಬ್ರೇಕಿಂಗ್ ನ್ಯೂಸ್
ಇವತ್ತು ಚಿನ್ನ ತಗೊಂಡ್ರೆ ಚಿನ್ನ ವೃದ್ಧಿ ಆಗತ್ತಂತೆ
ನಿಮ್ ಸಂಗಾತೀನ ಇವತ್ತಿಂದ
ಚಿನ್ನ ಅಂತ ಪ್ರೀತಿಯಿಂದ ಕರೀರಿ ಲೇಟಾಗಿ ವೃದ್ಧರಾಗ್ತಾರೆ- ಎಂದು ಪನ್ ಮಾಡಿರುವ ನವೀನ್ ಸಾಗರ್ ಅವರು ಅಕ್ಷಯ ತದಿಗೆ ದಿನದಂದು ಸೀರಿಯಸ್ ಆದ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಅಕ್ಷಯ ತದಿಗೆ ದಿನದಂದು ಮಾಡಿದ ಶುಭ ಕಾರ್ಯಗಳೆಲ್ಲ ವೃದ್ಧಿಯಾಗುತ್ತದಂತೆ.. ನವೀನ್ ಅವರ ಲೇಖನದಲ್ಲಿ ಚಿನ್ನ ಖರೀದಿ ಬಗ್ಗೆ ನೀಡಿರುವ ಆಘಾತಕಾರಿ ಸುದ್ದಿ ತಪ್ಪದೇ ಓದಿ...
ಇದು ಸ್ವಲ್ಪ ಗಂಭೀರ ವಿಷಯ. ಗಮನಿಸಿ.
ಅಕ್ಷಯ ತೃತೀಯದ ದಿನ ಚಿನ್ನ ತಗೊಂಡ್ರೆ ಐಶ್ವರ್ಯ ಹೆಚ್ಚುತ್ತೆ ಅನ್ನೋ ನಂಬಿಕೆ ವ್ಯಾಪಕವಾಗಿ ಹರಡಿದೆ.
ಒಂದ್ ಗ್ರಾಮಾದ್ರೂ ತಗೋಬೇಕು ಅಂತ ಜನ ಸಾಲ ಸೋಲ ಮಾಡ್ತಿದಾರೆ.
ಅಂಗಡೀಲಿ ಇವತ್ತಿನ ಪ್ರಯುಕ್ತ ಚಿನ್ನದ ಬೆಲೆ ಏರಿಸ್ಕೊಂಡ್ ಕೂರೋದ್ ಒಂದ್ಕಡೆ ಆದ್ರೆ... ಇತ್ತ ಸಾಲ ಕೊಡೋವ್ರು ಬಡ್ಡಿ ರೇಟ್ ಜಾಸ್ತಿ ಮಾಡ್ಕೊಂಡ್ ಕೂತಿದ್ದಾರೆ.
ಇದೆಲ್ಲ ಮಾರ್ಕೆಟಿಂಗ್ ಟೆಕ್ನಿಕ್ ಅಂತ ನಂಬೋಕೆ ಯಾರೂ ತಯಾರಿಲ್ಲ. ಉಳ್ಳವರಂತೂ ಇವತ್ತು ಕೇಜಿಗಟ್ಲೆ ಚಿನ್ನ ಖರೀದಿಸೋಕೆ ಚೀಲಗಟ್ಲೆ ದುಡ್ ರೆಡಿ ಮಾಡ್ಕಂಡಿದಾರೆ. ಆದರೆ, ಈ ಹೊತ್ತಲ್ಲಿ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಕಳೆದ ಮೂರು ತಿಂಗಳಿಂದ ಚಿನ್ನದಂಗಡಿ ಮಾಲೀಕರಿಂದ ಅಕ್ಷಯ ತೃತೀಯದಿನದ ಚಿನ್ನದ ಮಾರಾಟಕ್ಕೆ ತಯಾರಿ ನಡೆದಿದೆ. ಹಲವೆಡೆಗಳಿಂದ ಚಿನ್ನ ಆಮದು ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆಮದಾಗಿರುವ ಚಿನ್ನದಲ್ಲಿ ಶೇಕಡಾ ಎಂಬತ್ತು ಭಾಗದಷ್ಟು ನಕಲಿ ಚಿನ್ನ ಎಲ್ಲ ಅಂಗಡಿಗಳನ್ನು ಸೇರಿದೆ. ಇಪ್ಪತ್ತು ಪರ್ಸೆಂಟ್ ಮಾತ್ರ ಅಸಲಿ ಚಿನ್ನ ಆಮದಾಗಿದೆ.
ಅಸಲಿ ಚಿನ್ನ ಎಲ್ಲಿದೆ.. ನಕಲಿ ಚಿನ್ನ ಎಲ್ಲಿದೆ ಎಂಬುದು ಹೊರಗಿನವರಿಗೆ ಹೇಗೆ ತಿಳಿಯಬೇಕು?
ಕಾಲ ಮೀರಿ ಹೋಗಿರುವ ಕಾರಣ ಅಂಗಡಿಯವರು ಕೂಡ ಈ ನಕಲಿ ಚಿನ್ನಗಳಲ್ಲೇ ಆಭರಣ ತಯಾರಿಸಿ ಕೊಡುತ್ತಿದ್ದಾರೆ.
ಎಲ್ಲ ಅಂಗಡಿಯವರ ಪರಿಸ್ಥಿತಿಯೂ ಹೆಚ್ಚೂಕಮ್ಮಿ ಇದೇ ಆಗಿದೆ.
ಗ್ರಾಹಕರು ಬೇರೆಲ್ಲೂ ಚಿನ್ನದ ಶುದ್ಧತೆ ಬಗ್ಗೆ ಪರೀಕ್ಷೆ ಮಾಡಿಸೋದಿಲ್ಲವಾದ್ದರಿಂದ, ಅಂಗಡಿಯವರು ನುಣುಚಿಕೊಳ್ಳುವುದು ಸಲೀಸು ಕೂಡ! ಅಕಸ್ಮಾತ್ ಬೇರೆ ಅಂಗಡಿಯಲ್ಲಿ ಚೆಕ್ ಮಾಡಿಸೋಕೆ ಅಂತ ಹೋದರೂ ಅಲ್ಲಿಯೂ ಇದೇ ನಕಲಿ ಚಿನ್ನದ ಹಾವಳಿ ಇರೋದ್ರಿಂದ ಅವನೂ ಕೂಡ ನಿಜಾಂಶ ತಿಳಿಸೋ ಸಾಧ್ಯತೆ ಕಮ್ಮಿ.
ಪ್ರತಿಷ್ಟಿತ ಮಳಿಗೆಗಳಾದ ಕನಿಷ್ಟ್, ಭೀಮಣ್ಣನ ಅಂಗಡಿ, ಮಲ ಬಾರದವರ ಜುವೆಲ್ಲರ್ಸ್, ಅಲ್ಲುಡಕಲ್ಸ್ ಇಂಥ ಕಡೆಗಳಲ್ಲೇ ಹೆಚ್ಚು ನಕಲಿ ಚಿನ್ನ ಸೇರಿಕೊಂಡಿದೆ ಎಂದು ವರದಿಯಾಗಿದೆ. ಇವೆಲ್ಲ ವಿಶ್ವಾಸಾರ್ಹ ಹೆಸರುಗಳಾದ್ದರಿಂದ ಇಲ್ಲಿ ಜನ ಅನುಮಾನಿಸುವುದು ಅಪರೂಪ ಎಂಬ ಧೈರ್ಯ ಅಂಗಡಿಯವರದು!
ಹಾಗಾಗಿ ಈ ಬಾರಿ ಚಿನ್ನ ಕೊಳ್ಳದಿರಿ. ನಕಲಿ ಚಿನ್ನದ ಬಗ್ಗೆ ಎಚ್ಚರವಿರಲಿ. ನಿಮಗೆ ಅಸಲಿ ಚಿನ್ನ ಸಿಗುವ ಸಾಧ್ಯತೆ ಕೇವಲ ಇಪ್ಪತ್ತು ಪರ್ಸೆಂಟ್ ಮಾತ್ರ!!!
ಈ ಪೋಸ್ಟನ್ನು ಸಾಧ್ಯವಾದಷ್ಟೂ ಶೇರ್ ಮಾಡಿ...

----------------------ಇಂಟರ್ವಲ್--------------------------
ಈ ಪೋಸ್ಟ್ ಸುಮಾರು 50,000 ಜನ ಶೇರ್ ಮಾಡಿದ್ದಾರೆ.
-------------------------------------------------------
ನ್ಯೂಸ್ ಚಾನಲ್ಲಲ್ಲಿ ಬ್ರೇಕಿಂಗ್ ನ್ಯೂಸ್- ಅಕ್ಷಯ ತೃತೀಯದ ದಿನ ನಕಲಿ ಚಿನ್ನ ಮಾರಾಟ. ಗ್ರಾಹಕರಿಗೆ ಭಾರೀ ಮೋಸ,
-------------------------------------------------------
***ಚಿನ್ನದಂಗಡಿಗಳ ಎದುರಿನ ದೃಶ್ಯ***
ಎಲ್ಲ ಅಂಗಡಿಗಳವರೂ ನೊಣ ಹೊಡೀತಿದಾರೆ. ಗಿರಾಕಿಗಳೇ ಇಲ್ಲ!!!
-------------------------------------------------------
ಚಿನ್ನದಂಗಡಿಗಳ ಎದುರು ಬೋರ್ಡು
ಚಿನ್ನದ ಬೆಲೆ ಗ್ರಾಮ್ ನೂರು ರೂಪಾಯಿ
ನಮ್ಮಲ್ಲಿ ಶುದ್ಧ ಚಿನ್ನ ಕೇವಲ ಗ್ರಾಮ್ ಗೆ ಎಂಬತ್ತು ರೂಪಾಯಿ
-------------------------------------------------------
ಆದ್ರೂ ಗಿರಾಕಿ ಇಲ್ಲ!
-------------------------------------------------------
ನಾನು ಮಲ ಬಾರದ ಗೋಲ್ಡ್ ಅಂಗಡಿಗೆ ಎಂಟ್ರಿ ಕೊಡ್ತೀನಿ...
ಎಷ್ಟ್ ಸ್ವಾಮ ಚಿನ್ನ?
ನೂರ್ ರುಪಾಯ್ ಗ್ರಾಮ್ ಸಾರ್
ಐವತ್ ರೂಪಾಯ್ ಮಾಡಿ ಒಂದ್ ಕೇಜಿ ಕೊಡು
ಸರಿ ಸರ್
-------------------------------------------------------
ಚಿನ್ನ ತಗೊಂಡ್ ಬರ್ತಾ ಇರುವಾಗ ಚಾನೆಲ್ ನವ್ರು ಪೋಲೀಸ್ ನವ್ರು ಸುತ್ತುವರೀತಾರೆ
ನಕಲಿ ಚಿನ್ನ ತಗೊಂಡ್ ಹೋಗ್ತಿದೀರ ಅಂತ ಎಚ್ಚರಿಸ್ತಾರೆ..
ನಾನು ನಗ್ತೀನಿ...
ಅವ್ರು ಉರ್ಕಳ್ತಾರೆ
ಮತ್ತೆ ನಗ್ತೀನಿ.
ದಿನೇಶಣ್ಣನ " ಕುಂಬಳಕಾಯಲ್ಲಿ ಬಾಂಬುಂಟು ಮಾರಾಯ್ರೇ" ಸೀನ್ ನೆನಪಿಸ್ತೀನಿ.
ಅದೇ ಫಾರ್ಮುಲಾ ಸ್ವಾಮಿ ಇದು ಅಂತೀನಿ
ಪೋಲೀಸ್ರು ನನ್ನ ಹಿಡ್ಕಂಡ್ ಹೋಗಿ ಒಳಗ್ ಹಾಕ್ತಾರೆ...
-------------------------------------------------------
****************ದಿ ಎಂಡ್***************************












Click it and Unblock the Notifications