8 ವರ್ಷದ ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ
ಬೆಂಗಳೂರು,ಆ.5: ವಿಬ್‌ಗಯಾರ್ ಶಾಲಾ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಮತ್ತೊಂದು ಶಾಲೆಯಲ್ಲಿ ಶಿಕ್ಷಕನೊಬ್ಬ ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಗುಬ್ಬಲಾಳದ ಮಾರುತಿ ಶಾಲೆಯ ಅತಿಥಿ ಶಿಕ್ಷಕ ಚಂದ್ರಮೌಳಿ(69) ಈ ಕೃತ್ಯ ಎಸಗಿದ್ದು ತಲಘಟ್ಟಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆ.4 ಸೋಮವಾರ ಸಂಜೆ ಶಿಕ್ಷಕ ಬಾಲಕಿಯನ್ನು ವಿವಸ್ತ್ರಗೊಳಿಸಿ ವಿಕೃತ ಆನಂದ ಪಡೆಯುತ್ತಿದ್ದ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿನಿ ಸಂಜೆ ಮನೆಗೆ ತೆರಳಿ ಪೋಷಕರಲ್ಲಿ ಘಟನೆಯನ್ನು ವಿವರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಾಮುಕ ಶಿಕ್ಷಕನ ವಿಚಾರ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಯುತ್ತಿದ್ದಂತೆ, ಮಂಗಳವಾರ ಶಾಲೆಯಲ್ಲಿ ಪ್ರತಿಭಟನೆ ನಡೆಸಿ ವಜಾ ಮಾಡಲು ಆಗ್ರಹಿಸಿದರು. ಪೋಷಕರ ಪ್ರತಿಭಟನೆ ಹಿನ್ನಲೆಯಲ್ಲಿ ಶಿಕ್ಷಕ ತಪ್ಪನ್ನು ಒಪ್ಪಿಕೊಂಡಿದ್ದು, ಪ್ರಾಂಶುಪಾಲರು ಶಿಕ್ಷಕನ್ನು ಶಾಲೆಯಿಂದ ವಜಾ ಮಾಡಿದ್ದಾರೆ.[ಅತ್ಯಾಚಾರದಿಂದ ಮನನೊಂದ ಮಹಿಳೆ ಆತ್ಮಹತ್ಯೆ]
ತಲಘಟ್ಟಪುರ ಪೊಲೀಸರು ಆರೋಪಿಯನ್ನು ಪೋಸ್ಕೊ ಕಾಯಿದೆ ಅಡಿ ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಶಿಕ್ಷಕರು ಆ ರೀತಿಯ ವ್ಯಕ್ತಿ ಅಲ್ಲ: ಘಟನೆ ಬಗ್ಗೆ ಶಾಲೆಯ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಪ್ರತಿಕ್ರಿಯೆ ನೀಡಿ, ಚಂದ್ರಮೌಳಿಯವರು ಅಂಚೆ ಇಲಾಖೆಯಲ್ಲಿ ನಿವೃತ್ತರಾದ ಬಳಿಕ ನಮ್ಮ ಶಾಲೆಯಲ್ಲಿ ಎರಡು ತಿಂಗಳಿನಿಂದ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಅವರು ಉತ್ತಮ ಮನೆತನದಿಂದ ಬಂದಿದ್ದಾರೆ. ವಿದ್ಯಾರ್ಥಿನಿ ಕಿರುಕುಳದ ಬಗ್ಗೆ ಏನು ಪ್ರತಿಕ್ರಿಯೆ ನೀಡುವುದಿಲ್ಲ. ಘಟನೆ ತಿಳಿದ ಕೂಡಲೇ ಶಾಲೆಯಿಂದ ವಜಾ ಮಾಡಿದ್ದೇವೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.












Click it and Unblock the Notifications