ವಿಡಿಯೋ; ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ
ವಿಜಯನಗರ, ಜುಲೈ 22; ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗಿದೆ. ಜಲಾಶಯ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿದೆ.
ಗುರುವಾರ ಸಂಜೆ ತುಂಗಭದ್ರಾ ಡ್ಯಾಂ ಆಡಳಿತ ಮಂಡಳಿಯ ಮುಖ್ಯ ಕಾರ್ಯದರ್ಶಿ ಜಿ. ನಾಗಮೋಹನ್ ಪೂಜೆ ಸಲ್ಲಿಸಿ ಎಡದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡುಗಡೆ ಮಾಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜುಲೈ 18 ರಿಂದ ಎಲ್ಲಾ ಕಾಲುವೆಗಳಿಗೆ ನೀರು ಹರಿಸುವಂತೆ ನಿರ್ಧಾರ ಕೈಗೊಳ್ಳಲಾಗಿತ್ತು. ಕಾಲುವೆ ದುರಸ್ತಿ ಇರುವ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಸಿರಲಿಲ್ಲ" ಎಂದರು.

"ಸದ್ಯ ರಾಜ್ಯದ ಪಾಲಿನ 400 ಕ್ಯೂಸೆಕ್ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ. ಸದ್ಯ ಜಲಾಶಯಕ್ಕೆ 43,407 ಕ್ಯೂಸೆಕ್ ಒಳಹರಿವು ಇದೆ. ಕಳೆದ ಒಂದು ವಾರದಿಂದಲೂ ಹೆಚ್ಚಿನ ಒಳಹರಿವು ದಾಖಲಾಗುತ್ತಿದೆ" ಎಂದರು.
ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡಲಾಗಿದೆ.#Hospet #Tungabhadra pic.twitter.com/oN9gkJ2uxW
— oneindiakannada (@OneindiaKannada) July 22, 2021
ಕರ್ನಾಟಕದ ಕೋಟಾ; ಪ್ರಸ್ತುತ ಕರ್ನಾಟಕದ ಪಾಲಿನ ನೀರನ್ನು ಕಾಲುವೆಗಳ ಮೂಲಕ ಹರಿಸಲಾಗುತ್ತಿದೆ. ದಿನ ಕಳೆದಂತೆ ನೀರು ಹರಿಸುವ ಪ್ರಮಾಣ ಹೆಚ್ಚಾಗಲಿದೆ. ಆಂಧ್ರ ಪ್ರದೇಶ ರಾಜ್ಯ ಇನ್ನೂ ನೀರಿಗೆ ಬೇಡಿಕೆ ಸಲ್ಲಿಸದ ಕಾರಣ ಅವರ ಪಾಲಿನ ನೀರು ಹರಿಸಿಲ್ಲ.
ತುಂಗಭದ್ರಾ ಜಲಾಶಯದ ಪೂರ್ಣ ಮಟ್ಟ 497.71 ಮೀಟರ್. ಇಂದಿನ ನೀರಿನ ಮಟ್ಟ 494.19 ಮೀಟರ್ ಆಗಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಆದ್ದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ.












Click it and Unblock the Notifications