ಬಳ್ಳಾರಿ: ಕುರುಡು ಕಾಂಚಾಣದ ನಡುವೆ ಯಾರಿಗೆ 'ಜನಾದೇಶ'
ಬಳ್ಳಾರಿ, ಏ. 10; ಒಡೆದ ಮನೆಯಲ್ಲಿ ಒಗ್ಗಟ್ಟು ಹುಡುಕಿ ದಿಕ್ಕೆಟ್ಟಿರುವ ಕಾಂಗ್ರೆಸ್ ಮತದಾರರು. ಬಿಜೆಪಿಯಲ್ಲಿ 'ಒನ್ ಮ್ಯಾನ್ ಶೋ'. ಜೆಡಿಎಸ್, ಎಎಪಿಯಲ್ಲಿ ಪ್ರಚಾರದ ಉತ್ಸಾಹ. ಲೆಕ್ಕಕ್ಕುಂಟು ಆಟಕ್ಕಿಲ್ಲದಿರುವ ಅಷ್ಟದಿಗ್ಗಜರು. ಕತ್ತಲ ರಾತ್ರಿಯಲ್ಲಿ ಸದ್ದು ಮಾಡುತ ಕುಣಿಯುವ ಕುರುಡು ಕಾಂಚಾಣವೇ 'ಜನಾದೇಶ'.
ಬಳ್ಳಾರಿ ಎಸ್ಟಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿಯ ಪ್ರಸ್ತುತ ರಾಜಕೀಯ ಚಿತ್ರಣ ಇದಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಭಾವ, ರಾಹುಲ್ ನ ವರ್ಚಸ್ಸು, ಬಿಜೆಪಿ ಚುನಾವಣಾ ಪ್ರಣಾಳಿಕೆ, ನರೇಂದ್ರ ಮೋದಿಯ ಅಲೆ ಯಾವುವೂ ಸ್ಪಷ್ಟವಾಗಿ, ನಿಖರವಾಗಿಲ್ಲ. ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮತ್ತು ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ನೇರಾನೇರಾ ಸ್ಪರ್ಧೆ ನಡೆದಿದೆ.
ಎನ್.ವೈ. ಹನುಮಂತಪ್ಪ ನ್ಯಾಯಾಧೀಶರಾಗಿದ್ದಾಗ ವಾಲ್ಮೀಕಿ ಜನಾಂಗದಲ್ಲಿ ಹಿರಿಯರು. ಬಿ. ಶ್ರೀರಾಮುಲು ಮಾರ್ಗದರ್ಶಕರು, ಹಿತೈಷಿಗಳು. ರಾಜಕೀಯ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ಪೈಪೋಟಿ ನೀಡಿ 'ವಿಜಯಮಾಲೆ' ಧರಿಸಲು ತಂತ್ರ - ಪ್ರತಿತಂತ್ರ ರೂಪಿಸುವ ಎದುರಾಳಿಗಳು. ಒಂದರ್ಥದಲ್ಲಿ ಇವರಲ್ಲಿ ಯಾರೇ ಗೆಲ್ಲಲಿ 'ಮಾವೋಳ್ಳು (ನಮ್ಮವರು)' ಎನ್ನುವ ವಾಲ್ಮೀಕಿಗಳು.
ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜೆ. ಶಾಂತ ವಿರುದ್ಧ 2245 ಮತಗಳಿಂದ ಸೋತರು. ಮರು ಮತ ಎಣಿಕೆಯಲ್ಲೂ ಮತ್ತೊಮ್ಮೆ ಸೋಲನುಭವಿಸಿದರು. ತಂತ್ರಗಾರ ಜಿ. ಜನಾರ್ದನರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಆಳವಾಗಿ ಬೇರೂರಿ, ಕಾಂಗ್ರೆಸ್ ಬೇರುಗಳನ್ನು 2ನೇಬಾರಿ ಕಿತ್ತಿಹಾಕಿತ್ತು.
2009ರ ಚುನಾವಣೆಯಲ್ಲಿ ಸೋತ ನಂತರ ಎನ್.ವೈ. ಹನುಮಂತಪ್ಪ ಕಾಂಗ್ರೆಸ್ ಪಕ್ಷದ ವೇದಿಕೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಸದಾ ಕಾಣೆ. ಆಗೊಮ್ಮೆ - ಈಗೊಮ್ಮೆ ಅಪ್ಪಿತಪ್ಪಿ ಎಲ್ಲಿಯಾದರೂ ಕಾಣಿಸಿಕೊಂಡಿದ್ದೂ 'ಅಪರೂಪದ ಅತಿಥಿ'ಯಾಗಿ. ಜನಸಂಪರ್ಕ ತೀರ ಕಡಿಮೆ. ನೆರೆಯ ರಾಂಪುರದಲ್ಲಿ ವಾಸ್ತವ್ಯ.

ಓರ್ವ ಅಧಿಕಾರಿ ಮಾಡುವ ಮ್ಯಾಜಿಕ್ ನಂಬಿದೆ.
2014ರ ಚುನಾವಣೆಯಲ್ಲೂ 'ಅಪರೂಪದ ಅತಿಥಿ' ಆಗಿರುವ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪ್ರಚಾರದ ಅಖಾಡಕ್ಕೆ ಇಳಿಯುವುದೇ ಮಧ್ಯಾಹ್ನ 12 ಗಂಟೆ ನಂತರ. ಕುರುಬ, ಮುಸ್ಲಿಂ ಮತ್ತು ಕಾಂಗ್ರೆಸ್‍ನ ಸಂಪ್ರದಾಯಿಕ ಮತಗಳ ಲೆಕ್ಕಾ ಹಾಕುತ್ತ ಈಗಾಗಲೇ 'ಗೆದ್ದಿರುವೆ' ಎನ್ನವ ಅತಿ ಆತ್ಮವಿಶ್ವಾಸದಲ್ಲಿ ಜಿಲ್ಲೆಯ ಓರ್ವ ಅಧಿಕಾರಿ ಮಾಡುವ ಮ್ಯಾಜಿಕ್ ನಂಬಿದೆ.
ಸಂಡೂರು, ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅತಿ ಹೆಚ್ಚಿನ ಮತಗಳಿಕೆ ಮಾಡಲಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಬಿ. ನಾಗೇಂದ್ರ, ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದಸಿಂಗ್, ಕಂಪ್ಲಿ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಶಾಸಕ ಟಿ.ಎಚ್. ಸುರೇಶಬಾಬು ಮತ್ತು ತಂತ್ರಗಾರ ಜಿ. ಜನಾರ್ದನರೆಡ್ಡಿ ಜೈಲು ಸೇರಿರುವುದು ಕಾಂಗ್ರೆಸ್ ಗೆಲ್ಲುವ ಅವಕಾಶಗಳನ್ನು ಹೆಚ್ಚಿಸಿದೆ.
ಕಾಂಗ್ರೆಸ್ : ಕಳೆದ ಸೋಲಿನ ಅನುಕಂಪ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಕಳೆದ ಸೋಲಿನ ಅನುಕಂಪ, ಗಣಿ ಅಕ್ರಮದ ವಿವಾದ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯಕ ಪ್ರಭಾವದಿಂದ ಲಂಬಾಣಿ ಮತಗಳು ತಮಗೇ ಚಲಾವಣೆ ಆಗಲಿವೆ ಎನ್ನವ ಮಾತಲ್ಲಿ ದಿನವೆಲ್ಲಾ ಕಳೆಯುವ ಎನ್.ವೈ. ಹನುಮಂತಪ್ಪ, ಕಾಂಗ್ರೆಸ್‍ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಗುಂಪುಗಾರಿಕೆ, ಪರಸ್ಪರ ವೈಯಕ್ತಿಕ ಪ್ರತಿಷ್ಟೆ, ಸಂಪನ್ಮೂಲದ ಕೊರತೆ, ವಯೋಸಹಜ ಅನಾರೋಗ್ಯದ ಕಾರಣ ಕ್ಷೇತ್ರವನ್ನು ಸಂಪೂರ್ಣವಾಗಿ ಸುತ್ತಲಾಗುತ್ತಿಲ್ಲ.

ವಾಲ್ಮೀಕಿ ಜನಾಂಗದ ಕಣ್ಮಣಿ ಬಿ. ಶ್ರೀರಾಮುಲು
ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಜಿಲ್ಲೆಯಲ್ಲಿ ಚಿರಪರಿಚಿತ. ವಾಲ್ಮೀಕಿ ಜನಾಂಗದ ಕಣ್ಮಣಿ. ಚಲಾವಣೆ ಆಗುವ ವಾಲ್ಮೀಕಿ ಮತಗಳಲ್ಲಿ ಶೇ. 90 ರಷ್ಟು ಬಿ. ಶ್ರೀರಾಮುಲುಗೆ ತಪ್ಪದೇ ಚಲಾವಣೆ. ಸ್ವಾಭಿಮಾನಿಯಾಗಿ, ಪಕ್ಷವನ್ನು ಕಟ್ಟಿ, ರಾಜ್ಯವನ್ನು ಸುತ್ತಿ, ಪಾದಯಾತ್ರೆಗಳನ್ನು ನಡೆಸಿರುವ ಬಿ. ಶ್ರೀರಾಮುಲು ಬಗ್ಗೆ ವಾಲ್ಮೀಕಿಗಳಲ್ಲಿ ಎಲ್ಲೆಲ್ಲಿದ ಅನುಕಂಪ, ಅಭಿಮಾನ, ಗೌರವ.
ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನವು ಛಲದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರವನ್ನು ಸುತ್ತುತ್ತಿರುವ ಬಿ. ಶ್ರೀರಾಮುಲು, ಒನ್ ಮ್ಯಾನ್ ಶೋ ನಡೆಸುವಷ್ಟು ಪ್ರಭಾವಿ. ಪ್ರಚಾರ ನಿರ್ವಹಣೆ, ತಂತ್ರ - ಪ್ರತಿತಂತ್ರಗಳಲ್ಲಿ ಬಿ.ಎಸ್. ಯಡಿಯೂರಪ್ಪ ಬೆಂಬಲ, ನರೇಂದ್ರಮೋದಿ ಅಲೆಯನ್ನು ನಂಬಿದ್ದರೂ ಜಿಲ್ಲಾಡಳಿತದ ಓರ್ವ ಅಧಿಕಾರಿಯ 'ವಿಲನ್' ಪಾತ್ರದ ಭಯ, ಆತಂಕ, ತಲ್ಲಣಗಳಲ್ಲಿ 'ವಿಜಯಲಕ್ಷ್ಮಿ'ಯನ್ನು ಜಪಿಸುತ್ತಿದ್ದಾರೆ. ಪ್ರಚಾರವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದಾರೆ.

ಎಎಪಿ ಅಭ್ಯರ್ಥಿ ಶಿವಕುಮಾರ್ ಗಿರಿಯಪ್ಪ
ಪತ್ರಕರ್ತ, ಎಎಪಿ ಅಭ್ಯರ್ಥಿ ಶಿವಕುಮಾರ್ ಗಿರಿಯಪ್ಪ ಮಾಳಗಿ ಹೊಸ ಉತ್ಸಾಹದಲ್ಲಿ ಬೆಂಬಲಿಗರ ಜೊತೆಗೂಡಿ ರಾಜಕೀಯದಲ್ಲೇ ಭವಿಷ್ಯ ಕಾಣಲು ಸಂಕಲ್ಪತೊಟ್ಟು ಕ್ಷೇತ್ರಾದ್ಯಂತ ವ್ಯವಸ್ಥಿತವಾಗಿ ಪ್ರಚಾರ ನಿರ್ವಹಿಸುತ್ತಿದ್ದಾರೆ. ಮೈಸೂರು ಪಾಲಿಕೆಯ ಕಾರ್ಪೊರೇಟರ್ ಆರ್. ರವಿನಾಯಕ್ ಪಕ್ಷದ ಚಿಹ್ನೆ ಜನಪ್ರಿಯತೆ ಕಾಪಾಡಲು ಶ್ರಮಿಸುತ್ತಿದ್ದಾರೆ. ಉಳಿದ ಎಂಟು ಅಭ್ಯರ್ಥಿಗಳು ಲೆಕ್ಕಕ್ಕೆ ಉಂಟು.
ಮತದಾರ ತನ್ನ ಎದೆಗೂಡಲ್ಲಿ ಗುಟ್ಟನ್ನು ಮೌನವಾಗಿಯೇ ಬಚ್ಚಿಟ್ಟುಕೊಂಡಿದ್ದಾನೆ. ಯಾರೊಬ್ಬರು ಗೆದ್ದರೂ ಅಂತರ ಕಡಿಮೆ ಅಥವಾ ದೊಡ್ಡದಾಗಿರುತ್ತದೆ. ಕತ್ತಲರಾತ್ರಿಯಲ್ಲಿ ಕಾಂಚಾಣ ಮಾಡುವ 'ಕುಣಿತ -ಸದ್ದು'ಗಳ ಪ್ರಭಾವವೇ ಜನತೆಯ ತೀರ್ಪು ಆಗುವ ಸಾಧ್ಯತೆಗಳಿವೆ. [ಶಿವಕುಮಾರ್ ವ್ಯಕ್ತಿಚಿತ್ರ ಓದಿ]
ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳು
ಕ್ಷೇತ್ರದ ಜನರನ್ನು ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗ, ಅನಾರೋಗ್ಯ, ಕಬ್ಬಿಣದ ಅದಿರು ಉದ್ಯಮದ ಪುನಃಶ್ಚೇತನ, ಕುಡಿಯುವ ನೀರು, ತುಂಗಭದ್ರ ಜಲಾಶಯದಲ್ಲಿ ಹೂಳೆತ್ತುವುದು, ಗಾರ್ಮೆಂಟ್ ಉದ್ಯಮದ ಕಾಯಕಲ್ಪ, ಅಭಿವೃದ್ಧಿ ಸೇರಿ ಯಾವುದೇ ಯೋಜನೆ, ಜನಪರ ವಿಚಾರಗಳು ಯಾರೊಬ್ಬರಿಂದಲೂ ಪ್ರಸ್ತಾಪವಾಗುತ್ತಿಲ್ಲ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications