ಬಳ್ಳಾರಿಗೆ ಜನಾರ್ದನ ರೆಡ್ಡಿ; ಸೋಮಶೇಖರ ರೆಡ್ಡಿ ಹೇಳಿದ್ದೇನು?
ಬಳ್ಳಾರಿ, ಆಗಸ್ಟ್ 19; ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್ ಷರತ್ತಿನ ಒಪ್ಪಿಗೆ ನೀಡಿದೆ. 8 ವಾರಗಳ ಕಾಲ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿರಬಹುದು.
ಗುರುವಾರ ಹೊಸಪೇಟೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಳ್ಳಾರಿ ಎಸ್ಪಿ ಸೈದುಲು ಅದಾವತ್, "ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುವಾಗ ಎಸ್ಪಿ ಕಚೇರಿಗೆ ಮಾಹಿತಿ ನೀಡಬೇಕು. ಅವರು ಇಲ್ಲಿ ಬಂದಾಗ ಏನು ಮಾಡಬೇಕು, ಏನೆಲ್ಲ ಮಾಡಬಾರದು ಎಂದು ನಮಗೆ ಲಿಖಿತವಾಗಿ ಸುಪ್ರೀಂಕೋರ್ಟ್ ಮಾರ್ಗಸೂಚಿ ಬರಲಿದೆ. ಅದನ್ನು ಪಾಲನೆ ಮಾಡುತ್ತೇವೆ" ಎಂದರು.
ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಶಾಸಕ, ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಸಂತಸಪಟ್ಟರು. ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, "ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಇನ್ನು ಆಂಧ್ರಪ್ರದೇಶದ ಕಡಪ ಮತ್ತು ಅನಂತಪುರಕ್ಕೂ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿದೆ" ಎಂದು ಹೇಳಿದರು.

"ಸದ್ಯಕ್ಕೆ ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ಸ್ವಲ್ಪ ದಿನ ಮನೆಯಲ್ಲಿ ನೆಮ್ಮದಿಯಾಗಿರುತ್ತೇವೆ. ನಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿತ್ತು. ಅದಕ್ಕೆ ಸುಪ್ರೀಂಕೋರ್ಟ್ ಮನ್ನಣೆ ನೀಡಿದೆ" ಎಂದು ಸಂತಸ ವ್ಯಕ್ತಪಡಿಸಿದರು.
"ಶ್ರಾವಣ ಮಾಸದ ಸಲುವಾಗಿ ಅವನು ಬರುತ್ತಿದ್ದಾನೆ. ಕಾರ್ಯಕರ್ತರಲ್ಲಿ ತುಂಬಾ ಉತ್ಸಾಹ ತುಂಬಿದೆ. ಅವನಿಲ್ಲ ಅಂದರೆ ನಮಗೆ ಕಷ್ಟ ಆಗುತ್ತದೆ. ಅವನು ಬರುತ್ತಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ" ಎಂದರು.
ಅರ್ಜಿಯನ್ನು ಸಲ್ಲಿಸಿದ್ದರು; ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಾಗ ಬಳ್ಳಾರಿಗೆ ಭೇಟಿ ನೀಡದಂತೆ ಷರತ್ತು ವಿಧಿಸಲಾಗಿತ್ತು. ಆದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಅವರು ಬಳ್ಳಾರಿಗೆ ಆಗಮಿಸುತ್ತಿದ್ದರು.
ಜಾಮೀನು ನೀಡುವ ವೇಳೆ ಹಾಕಿರುವ ಷರತ್ತುಗಳನ್ನು ಸಡಿಲಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಅವರು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 13ರಂದು ಈ ಅರ್ಜಿ ವಿಚಾರಣೆ ನಡೆದಿತ್ತು. ಆಗ ಸಿಬಿಐ ಯಾವ ಕಾರಣಕ್ಕೂ ಜನಾರ್ದನ ರೆಡ್ಡಿಗೆ ಬಳ್ಳಾರಿ ಭೇಟಿ ನೀಡಲು ಅವಕಾಶ ಕೊಡಬಾರದು ಎಂದು ವಾದಿಸಿತ್ತು.
ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೊಟ್ಟರೆ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಜೊತೆಗೆ, ಸಾಕ್ಷಿದಾರರಿಗೂ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಸಿಬಿಐ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿತ್ತು.
ಸಿಬಿಐ ಪರವಾಗಿ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧ್ವಿ ದಿವಾನ್ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ಪ್ರಮುಖ ಆರೋಪಿ. ಯಾವ ಕಾರಣಕ್ಕೂ ಅವರಿಗೆ ಬಳ್ಳಾರಿಗೆ ತೆರಳಲು ಅನುಮತಿ ನೀಡಬಾರದು. ಜಾಮೀನು ಷರತ್ತುಗಳನ್ನು ಸಡಿಲಗೊಳಿಸಬಾರದು ಎಂದು ವಾದಿಸಿದ್ದರು.












Click it and Unblock the Notifications